ರೈತರೇ ಕಟ್ಟಿ ಬೆಳೆಸಿರುವ ಸಹಕಾರ ಸಂಘವು ಆರ್ಥಿಕವಾಗಿ ಸದೃಢವಾಗಬೇಕೆಂದರೆ ಪಡೆದ ಸಾಲವನ್ನು ನಿಗಧಿತ ಅವಧಿಯಲ್ಲಿ ಮರುಪಾವತಿಸಬೇಕು. ಆದರೆ ಸಾಲ ಪಡೆದಿರುವ ಕೆಲ ಷೇರುದಾರರು ಮೃತಪಟ್ಟಿದ್ದು, ಅವರ ಕುಟುಂಬಸ್ಥರು ಸಾಲ ಮರುಪಾವತಿಸುತ್ತಿಲ್ಲ. ಇದರಿಂದ ಸಂಘಕ್ಕೆ ಹೊರೆಯಾಗುತ್ತದೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ರೈತರ ಅನುಕೂಲಕ್ಕಾಗಿ, ಸಂಘವನ್ನು ಮತ್ತಷ್ಟು ಆರ್ಥಿಕವಾಗಿ ಸದೃಢಗೊಳಿಸಲು ವಾಣಿಜ್ಯ ಮಳಿಗೆಗಳ ಕಟ್ಟಡ ಮತ್ತು ಸ್ವಂತ ಗೋದಾಮು ಕಟ್ಟಡ ನಿರ್ಮಿಸಲು 50 ಲಕ್ಷದಿಂದ 1 ಕೋಟಿವರೆಗೆ ರು. ಅನುದಾನ ಕೋರಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೊಣಕೆರೆ ಪಿಎಸಿಎಸ್ ಅಧ್ಯಕ್ಷ ಗಂಗನಹಳ್ಳಿ ಚಂದ್ರಶೇಖರ್ ತಿಳಿಸಿದರು.ತಾಲೂಕಿನ ಹೊಣಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕಳೆದ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರೇ ಕಟ್ಟಿ ಬೆಳೆಸಿರುವ ಸಹಕಾರ ಸಂಘವು ಆರ್ಥಿಕವಾಗಿ ಸದೃಢವಾಗಬೇಕೆಂದರೆ ಪಡೆದ ಸಾಲವನ್ನು ನಿಗಧಿತ ಅವಧಿಯಲ್ಲಿ ಮರುಪಾವತಿಸಬೇಕು. ಆದರೆ ಸಾಲ ಪಡೆದಿರುವ ಕೆಲ ಷೇರುದಾರರು ಮೃತಪಟ್ಟಿದ್ದು, ಅವರ ಕುಟುಂಬಸ್ಥರು ಸಾಲ ಮರುಪಾವತಿಸುತ್ತಿಲ್ಲ. ಇದರಿಂದ ಸಂಘಕ್ಕೆ ಹೊರೆಯಾಗುತ್ತದೆ ಎಂದರು.
ಖಾಸಗಿ ಗೊಬ್ಬರದ ಅಂಗಡಿಗಳಿಗಿಂತ ನಮ್ಮ ಸಹಕಾರ ಸಂಘದಲ್ಲಿ ಕಡಿಮೆ ದರದಲ್ಲಿ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಸಂಘದ ವ್ಯಾಪ್ತಿಯ ಮಹಿಳಾ ಸ್ವಸಹಾಯ ಸಂಘಗಳಿಗೆ 11 ಲಕ್ಷ ರು. ಸಾಲ ನೀಡಲಾಗಿದೆ. ರೈತರು ಮತ್ತು ಸ್ತ್ರೀ ಶಕ್ತಿ ಸಂಘಗಳಿಗೆ ವಿವಿಧ ಬಗೆಯ ಸಾಲಸೌಲಭ್ಯ ನೀಡಲು ಹಣ ಬಿಡುಗಡೆ ಮಾಡುವಂತೆ ಕಳೆದ ಒಂದು ವರ್ಷದಿಂದ ಮನವಿ ಮಾಡಿಕೊಂಡರೂ ಕೂಡ ಎಂಡಿಸಿಸಿ ಬ್ಯಾಂಕ್ ವತಿಯಿಂದ ಈವರೆಗೂ ಹಣ ಬಿಡುಗಡೆಯಾಗಿಲ್ಲ ಎಂದರು.ಸಂಘದ ಮಾಜಿ ಅಧ್ಯಕ್ಷ ಬಸವರಾಜು ಮಾತನಾಡಿ, ಸಂಘದಲ್ಲಿ ಕಳೆದ ವರ್ಷ 6.66 ಕೋಟಿಗೂ ಹೆಚ್ಚು ವ್ಯವಹಾರ ನಡೆಸಲಾಗಿದೆ. ಇದರಲ್ಲಿ ಶೇ.2ರಂತೆ 13 ಲಕ್ಷ ರು. ಖರ್ಚು ಮಾಡಬಹುದು. ಆದರೆ, 25 ಲಕ್ಷ ಖರ್ಚು ಮಾಡಲು ಅಧಿಕಾರ ಕೊಟ್ಟವರು ಯಾರೆಂದು ಪ್ರಶ್ನಿಸಿದರರು.
ಹೊಣಕೆರೆ ರಮೇಶ್ ಮಾತನಾಡಿ, ಸಂಘದ ಆಡಿಟ್ ವರದಿಯಲ್ಲಿರುವ ಕೆಲ ಲೋಪದೋಷಗಳನ್ನು ಸರಿಪಡಿಸಬೇಕು. ಕಳೆದ ವರ್ಷ ಸಂಘಕ್ಕೆ 2.63 ಲಕ್ಷ ರು. ನಷ್ಟವಾಗಲು ಕಾರಣವೇನೆಂಬುದನ್ನು ರೈತರಿಗೆ ತಿಳಿಸಬೇಕು ಎಂದರು.ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಗಂಗವಾಡಿ ಪುಟ್ಟಸ್ವಾಮಿ ಮಾತನಾಡಿ, ಸಂಘದ ಷೇರುದಾರ ರೈತರು ಮತ್ತು ಆಡಳಿತ ಮಂಡಳಿ ಸಹಕಾರದಿಂದ ಸಂಘವು ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿರುವುದು ಕಂಡು ಬರುತ್ತಿದೆ. ಸರ್ಕಾರದಿಂದ ಸಂಘಕ್ಕೆ ವಾಪಸ್ ಬರಬೇಕಿರುವ 44.26ಲಕ್ಷ ರು. ಬಡ್ಡಿ ಹಣ ಬಂದರೆ ಕಳೆದ ಸಾಲಿನಲ್ಲಿಯೂ ಸಂಘ ಲಾಭದಲ್ಲಿದ್ದಂತೆ. ರೈತರು ಮತ್ತು ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲ ನೀಡಲು ಎಂಡಿಸಿಸಿ ಬ್ಯಾಂಕ್ ಹಣ ಬಿಡುಗಡೆ ಮಾಡದೆ ಈ ಸಂಘಕ್ಕೆ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ ಎಂದರು.
ಸಂಘದ ಸಿಇಒ ಪಿ.ಶೋಭಾ ಸಂಘದ ವಾರ್ಷಿಕ ಲೆಕ್ಕದ ವಿವರ ಮಂಡಿಸಿದರು. ಸಂಘದ ಉಪಾಧ್ಯಕ್ಷೆ ರಮ್ಯ, ನಿರ್ದೇಶಕರಾದ ಅಶೋಕ್, ಜಯೇಂದ್ರ, ನರಸಿಂಹೇಗೌಡ(ಅನಿ) ಎಚ್.ವಿ.ಲೋಕೇಶ್, ಜಿ.ಎಸ್.ಗಂಗಾಧರ, ವಿ.ಪಿ.ಕೃಷ್ಣೇಗೌಡ, ಚಿಕ್ಕತಾಯಮ್ಮ, ಜವರಯ್ಯ, ಬಿ.ಎನ್.ಶಿವಲಿಂಗಯ್ಯ, ವೆಂಕಟಶೆಟ್ಟಿ, ಮುಖಂಡರಾದ ಎಸ್.ಎಂ.ಯದುರಾಜ್, ಶ್ರೀನಿವಾಸ್, ನಾಗಣ್ಣ, ಕುಮಾರ್, ಸಂಘದ ಸಿಇಓ ಪಿ.ಶೋಭಾ, ಸಿಬ್ಬಂದಿ ಕೆ.ಬಿ.ದಿವ್ಯ, ಎಚ್.ಎಂ.ಸ್ಪೂರ್ತಿ, ಗಂಗಾಧರ್ ಸೇರಿದಂತೆ ಹಲವರು ಇದ್ದರು.