ಬೇಂದ್ರೆ ನೆಲದಲ್ಲಿ ಗಂಗಾವತರಣ ಪ್ರದರ್ಶನ

| Published : Dec 30 2024, 01:00 AM IST

ಸಾರಾಂಶ

ಬೆಂಗಳೂರಿನ ರಂಗ ಸೌರಭ ತಂಡದವರು ಬೇಂದ್ರೆ ಅವರ ಬದುಕಿನ ಹಲವು ಪುಟಗಳನ್ನು ತೆರೆಯುತ್ತ, ಅವರ ಉದಾತ್ತ ಜೀವನದ ತಾದಾತ್ಮತೆಯನ್ನು ತೋರುವ ಹಲವು ಹಾಡುಗಳಿಂದ ಹಾಗೂ ನೃತ್ಯ ರೂಪಕಗಳಿಂದ ಜನಮನ ರಂಜಿಸಿದರು.

ಧಾರವಾಡ:

ಧಾರವಾಡ ನೆಲದ ಸತ್ವವನ್ನು ಹೀರಿ ಧಾರವಾಡದಲ್ಲಿಯೇ ಹುಟ್ಟಿ ಬೆಳೆದ ವರಕವಿ ಡಾ. ದ.ರಾ. ಬೇಂದ್ರೆ ಅವರು ಜನಮಾನಸ ಕವಿ, ದಿನನಿತ್ಯದ ಆಡು ಮಾತಿನಲ್ಲಿ ಜೀವನದರ್ಶನದ ಒಳನೋಟ ನೀಡುವ ಸಾವಿರಾರು ಕವಿತೆ ಬರೆದರು. ಇಂದಿಗೂ ಹಳ್ಳಿಗರ ಮುಗ್ಧ ಮನಸ್ಸು ಹಾಗೂ ಪ್ರಜ್ಞಾವಂತ ನಾಗರಿಕರ ನರ ನಾಡಿಗಳಲ್ಲಿ ಚೈತನ್ಯ ತುಂಬುತ್ತಿದ್ದಾರೆ ಎಂದು ಬೇಂದ್ರೆ ಮೊಮ್ಮಗಳು ಪುನರ್ವಸು ಬೇಂದ್ರ ಹೇಳಿದರು.

ಇಲ್ಲಿನ ಸೃಜನಾರಂಗ ಮಂದಿರದಲ್ಲಿ ನಡೆದ ವರಕವಿ ಬೇಂದ್ರೆ ಅವರ ಬದುಕು-ಬರಹ ಆಧರಿಸಿ ಬರೆದ ಗಂಗಾವತರಣ ನಾಟಕ ಪ್ರದರ್ಶನ ನಂತರ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರಿನ ರಂಗ ಸೌರಭ ತಂಡದವರು ಬೇಂದ್ರೆ ಅವರ ಬದುಕಿನ ಹಲವು ಪುಟಗಳನ್ನು ತೆರೆಯುತ್ತ, ಅವರ ಉದಾತ್ತ ಜೀವನದ ತಾದಾತ್ಮತೆಯನ್ನು ತೋರುವ ಹಲವು ಹಾಡುಗಳಿಂದ ಹಾಗೂ ನೃತ್ಯ ರೂಪಕಗಳಿಂದ ಜನಮನ ರಂಜಿಸಿದರು.

ಆಧುನಿಕ ಜೀವನದ ಶುಷ್ಕ ಆಡಂಬರತೆಗೆ ಮನಸೋತ ಇಂದಿನ ಪೀಳಿಗೆಯ ತೊಳಲಾಟವನ್ನು ಸಮರ್ಥವಾಗಿ ಬಿಂಬಿಸಿ ಬೇಂದ್ರೆಯವರ ಆತ್ಮ ಸಾಕ್ಷಾತ್ಕಾರದ ನೆಲೆಯಲ್ಲಿ ಜೀವನ ದರ್ಶನ ಮೂಡಿಸಿದ ಪರಿ ಅದ್ಭುತವಾಗಿತ್ತು. ಇಂದಿನ ಲೇಖಕರ ಪಾತ್ರದಲ್ಲಿ ಶ್ರೀನಿವಾಸ್ ಮೂರ್ತಿಯವರು ತಮ್ಮ ತೊಳಲಾಟವನ್ನು ವ್ಯಕ್ತಪಡಿಸುತ್ತ ನಮ್ಮ ಬದುಕಿನ ಸಾಧ್ಯತೆಗಳ ಬಗ್ಗೆ ಹಲವಾರು ಮೂಲಭೂತ ರಸ್ತೆಗಳನ್ನು ಎತ್ತಿದ ರೀತಿ ಮನೋಜ್ಞವಾಗಿತ್ತು.

ಲೇಖಕ ನಿರ್ದೇಶಕ ರಾಜೇಂದ್ರ ಕಾರಂತರು ಬೇಂದ್ರೆಯವರ ಆತ್ಮ ರೂಪದಲ್ಲಿ ಸಮರ್ಥ ಅಭಿನಯ ನೀಡಿ ಸೂಕ್ತ ವಾತಾವರಣ ನಿರ್ಮಿಸುವಲ್ಲಿ ಯಶಸ್ವಿಯಾದರು. ಬೇಂದ್ರೆ ಅವರ ಹಾಡುಗಳನ್ನು ಸೂಕ್ತ ಕ್ರಮದಲ್ಲಿ ಉಪಯೋಗಿಸಿಕೊಂಡು ನೃತ್ಯ ರೂಪಕಗಳ ಮೂಲಕ ಭಾವನಾತ್ಮಕ ವಾತಾವರಣ ನಿರ್ಮಾಣದಲ್ಲಿ ಹಿನ್ನೆಲೆ ಸಂಗೀತಗಾರರು ಯಶಸ್ವಿಯಾದರು. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಾರ್ಯಾಧ್ಯಕ್ಷ ಈರೇಶ ಅಂಚಟಗೇರಿ, ಕೃಷ್ಣ ಕುಲಕರ್ಣಿ, ಅನಂತ ದೇಶಪಾಂಡೆ, ಸಂಘಟಕ ಹರ್ಷ ಡಂಬಳ, ನಾಟಕವನ್ನು ಸಂಘಟಿಸಿದ ಸ್ನೇಹ ಪ್ರತಿಷ್ಠಾನ ಹಾಗೂ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಅಣ್ಣಾಜಿರಾವ್ ಶಿರೂರ್ ರಂಗಮಂದಿರ ಪ್ರತಿಷ್ಠಾನದವರು ಇದ್ದರು.