ಪಡಿತರ ಅಕ್ಕಿ ಅಕ್ರಮ ಸಾಗಾಟಕ್ಕೆ ಗಂಗಾವತಿಯೇ ಹೆಡ್‌ಕ್ವಾರ್ಟರ್

| Published : Aug 31 2025, 02:00 AM IST

ಪಡಿತರ ಅಕ್ಕಿ ಅಕ್ರಮ ಸಾಗಾಟಕ್ಕೆ ಗಂಗಾವತಿಯೇ ಹೆಡ್‌ಕ್ವಾರ್ಟರ್
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ಸೇರಿದಂತೆ ರಾಜ್ಯಾದ್ಯಂತ ಪಡಿತರ ಅಂಗಡಿಯಿಂದ ಪಡೆಯುವ ಅಕ್ಕಿಯನ್ನು ಫಲಾನುಭವಿಗಳೇ ಅರ್ಧದಷ್ಚು ಮಾರಾಟ ಮಾಡುತ್ತಾರೆ. ಕೆಲವರು ಪಡಿತರ ವ್ಯವಸ್ಥೆಯಲ್ಲಿ ಉಚಿತವಾಗಿ ಪಡೆದ ಅಷ್ಟೂ ಅಕ್ಕಿಯನ್ನು ₹10ರಿಂದ ₹12 ಕೆಜಿಯಂತೆ ಮಾರಾಟ ಮಾಡುತ್ತಾರೆ. ಹೀಗೇ ಖರೀದಿಸಿದ ಅಕ್ಕಿಯನ್ನು ಪಾಲಿಶ್‌ ಮಾಡಿ ₹ 30ರಿಂದ ₹ 40ಗೆ ಕೆಜೆಯಿಂತೆ ಬ್ರಾಂಡ್ ಮಾಡಿ ಮಾರಾಟ ಮಾಡಲಾಗುತ್ತದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಗಂಗಾವತಿಯಲ್ಲಿ ಪಡಿತರ ಅಕ್ಕಿಯನ್ನು ದುಬೈನ ಲಾಲ್ ಬ್ರಾಂಡ್ ಹೆಸರಿನಲ್ಲಿ ಸರ್ಕಾರಿ ಗೋದಾಮಿನಿಂದಲೇ ಮಾರಾಟಕ್ಕೆ ಮುಂದಾಗಿದ್ದ ಪ್ರಕರಣ ಈಗ ರಾಜ್ಯ ಸರ್ಕಾರವನ್ನೇ ತಬ್ಬಿಬ್ಬು ಮಾಡಿದೆ.

ಅಕ್ರಮದ ಜಾಡು ಹಿಡಿದು ಹೋರಟಾಗ ಪಡಿತರ ವ್ಯವಸ್ಥೆಯಲ್ಲಿ ವಿತರಣೆಯಾಗುವ ಅನ್ನಭಾಗ್ಯ ಅಕ್ಕಿ ಅರ್ಧದಷ್ಟು ಅಕ್ರಮವಾಗಿ ಕಾಳಸಂತೆ ಮೂಲಕ ಮಾರುಕಟ್ಟೆ ತಲುಪುತ್ತಿದೆ. ಇದಕ್ಕೆ ಗಂಗಾವತಿಯೇ ಹೆಡ್‌ಕ್ವಾರ್ಟರ್ ಆಗಿದೆ.

ರಾಜ್ಯಾದ್ಯಂತ ಸರಿಸುಮಾರು 4.40 ಕೋಟಿ ಫಲಾನುಭವಿಗಳಿಗೆ ವಿತರಣೆಯಾಗುವ 2.27 ಲಕ್ಷ ಮೆಟ್ರಿಕ ಟನ್ ಅಕ್ಕಿಯಲ್ಲಿ ಅರ್ಧದಷ್ಟು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಪಡಿತರ ಅಂಗಡಿ ಬಳಿ ಮಾರಾಟ:

ಕೊಪ್ಪಳ ಸೇರಿದಂತೆ ರಾಜ್ಯಾದ್ಯಂತ ಪಡಿತರ ಅಂಗಡಿಯಿಂದ ಪಡೆಯುವ ಅಕ್ಕಿಯನ್ನು ಫಲಾನುಭವಿಗಳೇ ಅರ್ಧದಷ್ಚು ಮಾರಾಟ ಮಾಡುತ್ತಾರೆ. ಕೆಲವರು ಪಡಿತರ ವ್ಯವಸ್ಥೆಯಲ್ಲಿ ಉಚಿತವಾಗಿ ಪಡೆದ ಅಷ್ಟೂ ಅಕ್ಕಿಯನ್ನು ₹10ರಿಂದ ₹12 ಕೆಜಿಯಂತೆ ಮಾರಾಟ ಮಾಡುತ್ತಾರೆ. ಹೀಗೇ ಖರೀದಿಸಿದ ಅಕ್ಕಿಯನ್ನು ಪಾಲಿಶ್‌ ಮಾಡಿ ₹ 30ರಿಂದ ₹ 40ಗೆ ಕೆಜೆಯಿಂತೆ ಬ್ರಾಂಡ್ ಮಾಡಿ ಮಾರಾಟ ಮಾಡಲಾಗುತ್ತದೆ.

ಉತ್ತಿ, ಬಿತ್ತಿ ಬೆಳೆದರೂ ಮತ್ತು ಬೆಳೆದಿದ್ದನ್ನು ಮಾರುಕಟ್ಟೆಯಲ್ಲಿ ಖರೀದಿಸಿದರೂ ಇಷ್ಟೊಂದು ಲಾಭ ಸಿಗಲು ಸಾಧ್ಯವೇ ಇಲ್ಲ. ಹೀಗಾಗಿ ಪಡಿತರ ಅಕ್ಕಿ ಅಕ್ರಮ ಸಾಗಾಟಕ್ಕೆ ಗಂಗಾವತಿಯೇ ಹೆಡ್ ಕ್ವಾರ್ಟರ್ ಆಗಿದೆ.

ಗಂಗಾವತಿಯಲ್ಲಿ ಹತ್ತಾರು ವರ್ಷಗಳಿಂದ ಈ ಅಕ್ರಮ ನಡೆಯುತ್ತಿದ್ದು ದಾಳಿ ಮಾಡಿದಾಗ ಅನೇಕ ಮಿಲ್‌ಗಳಲ್ಲಿ ಲೋಡ್‌ಗಟ್ಟಲೇ ಪಡಿತರ ಅಕ್ಕಿ ಸಿಕ್ಕು ಪ್ರಕರಣ ದಾಖಲಾಗುತ್ತವೆ. ಆದರೆ, ಅದ್ಯಾವುದು ತಾರ್ಕಿಕ ಅಂತ್ಯಕ್ಕೆ ಹೋಗುವುದೇ ಇಲ್ಲ. ಅಕ್ರಮ ಅವ್ಯಾಹತವಾಗಿ ನಡೆಯುತ್ತದೆ.

ಸರ್ಕಾರ ಚಿಂತನೆ:

ಅಕ್ರಮದ ಮಾಹಿತಿ ಮತ್ತು ಫಲಾನುಭವಿಗಳೇ ಅರ್ಧದಷ್ಟು ಅಕ್ಕಿ ಮಾರಾಟ ಮಾಡಿಕೊಳ್ಳುತ್ತಿರುವ ಬಗ್ಗೆ ಸರ್ಕಾರದ ಬಳಿಯೂ ಮಾಹಿತಿ ಇದೆ. ಗ್ಯಾರಂಟಿ ಸಮಿತಿಗಳ ಅಧ್ಯಕ್ಷರ ಹಿಂದಿನ ಸಭೆಯಲ್ಲಿ ಈ ಕುರಿತು ಗಂಭೀರವಾಗಿ ಚರ್ಚೆಯಾಗಿದೆ. ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ನೀಡುವುದು ಹೆಚ್ಚಾಗುತ್ತಿದೆ. ಹೀಗಾಗಿ, ಅರ್ಧದಷ್ಟು ಅಕ್ಕಿಯನ್ನು ಅಗ್ಗದ ದರಕ್ಕೆ ಮಾರಿಕೊಳ್ಳುತ್ತಿದ್ದಾರೆ. ಪ್ರತಿ ತಿಂಗಳು ಪ್ರತಿಯೊಬ್ಬ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ವಿತರಿಸಿದರೆ ಉಳಿದ 5 ಕೆಜಿಯ ಮೊತ್ತ ಅಥವಾ ಇತರೆ ಸಾಮಗ್ರಿ ನೀಡುವ ಕುರಿತು ಗಂಭೀರವಾಗಿ ಚರ್ಚಿಸಲಾಗಿದೆ. ಇದಕ್ಕೆ ಸರ್ಕಾರವೂ ಅಸ್ತು ಎಂದಿದೆ ಎನ್ನಲಾಗಿದೆ.

ಬಿಸಿಯೂಟದ ಅಕ್ಕಿಯೂ ಕಾಳಸಂತೆಗೆ:

ಅನ್ನಭಾಗ್ಯ ಅಕ್ಕಿ ಮಾತ್ರವಲ್ಲದೆ ಶಾಲಾ ಮಕ್ಕಳ ಬಿಸಿಯೂಟಕ್ಕೆ ನೀಡುವ ಅಕ್ಕಿಯಲ್ಲೂ ಭಾರಿ ಅಕ್ರಮ ನಡೆಯುತ್ತಿದೆ. ಶೇ. 50-60ರಷ್ಟು ಮಕ್ಕಳು ಮಾತ್ರ ಹಾಜರಿದ್ದರೂ ಬಹುತೇಕ ಶಾಲೆಯಲ್ಲಿ ಶೇ85ರಿಂದ 95ರ ವರೆಗೆ ಹಾಜರಾತಿ ತೋರಿಸಲಾಗುತ್ತಿದೆ. ಇದಕ್ಕೆ ಪಡಿತರವನ್ನು ಖರ್ಚು ಹಾಕಲಾಗುತ್ತದೆ. ಹೀಗಾಗಿ ಪ್ರತಿ ಶಾಲೆಯಲ್ಲಿ ತಿಂಗಳಿಂಗೆ 2ರಿಂದ 3 ಕ್ವಿಂಟಲ್‌ ಅಕ್ಕಿ ಹೆಚ್ಚುವರಿಯಾಗುತ್ತದೆ. ಇದನ್ನು ಸಹ ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತದೆ.

ಅಧಿಕಾರಿಯ ಬಿಡುಗಡೆ:

ಗಂಗಾವತಿಯಲ್ಲಿ ನಡೆದಿರುವ ಅನ್ನಭಾಗ್ಯ ಅಕ್ರಮದಲ್ಲಿ ಈಗಾಗಲೇ ಎಫ್‌ಐಆರ್‌ ದಾಖಲಿಸಿದ್ದು ನಾಲ್ವರ ವಿರುದ್ಧ ಕ್ರಮ ವಹಿಸಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಡಿಡಿ ಸೋಮಶೇಖರ ಬಿರಾದರ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಸರ್ಕಾರವೇ ಆದೇಶ ಹೊರಡಿಸಿದೆ. ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.ಅನ್ನಭಾಗ್ಯ ಅಕ್ಕಿಯ ಅಕ್ರಮ ಅವ್ಯಾಹತವಾಗಿ ನಡೆಯುತ್ತಿದ್ದು, ಇದನ್ನು ತಡೆಯಲು 10 ಕೆಜಿ ಬದಲು 5 ಕೆಜಿಗೆ ಇಳಿಸಿ 5 ಕೆಜಿ ಇತರೆ ಸಾಮಗ್ರಿ ನೀಡುವ ಕುರಿತು ಗ್ಯಾರಂಟಿ ಸಮಿತಿಗಳ ಸಭೆಯಲ್ಲಿ ಚರ್ಚೆಯಾಗಿದೆ.

ರೆಡ್ಡಿ ಶ್ರೀನಿವಾಸ ಅಧ್ಯಕ್ಷರು, ಕೊಪ್ಪಳ ಜಿಲ್ಲಾ ಗ್ಯಾರಂಟಿ ಸಮಿತಿ ಗಂಗಾವತಿಯಲ್ಲಿ ನಡೆದಿರುವ ಅನ್ನಭಾಗ್ಯ ಅಕ್ಕಿ ಅಕ್ರಮದ ಕುರಿತು ಈಗಾಗಲೇ ಕ್ರಮ ವಹಿಸಲಾಗಿದೆ ಮತ್ತು ಎಫ್‌ಐಆರ್ ಸಹ ದಾಖಲಿಸಲಾಗಿದೆ. ವಿವಿಧೆಡೆ ದಾಳಿ ಮಾಡಿ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. ಪ್ರತ್ಯೇಕ ತಂಡ ರಚಿಸಿ ತನಿಖೆ ಮಾಡಲಾಗುತ್ತಿದೆ.

ಡಾ. ಸುರೇಶ ಇಟ್ನಾಳ, ಜಿಲ್ಲಾಧಿಕಾರಿ ಕೊಪ್ಪಳ