ಸಾರಾಂಶ
ತುಂಗಭದ್ರಾ ಜಲಾಶಯದಿಂದ ನದಿಗೆ 1.20 ಲಕ್ಷ ಕ್ಯುಸೆಕ್ ನೀರು ಬಿಟ್ಟಿದ್ದರಿಂದ ಗಂಗಾವತಿ- ಬಳ್ಳಾರಿ ಜಿಲ್ಲೆಯ ಕಂಪ್ಲಿ ಸೇತುವೆ ಮುಳುಗಡೆಯಾಗಿದೆ. ಅದರಂತೆ ತಾಲೂಕಿನ ಆನೆಗೊಂದಿಯ ತಳವಾರ ಘಟ್ಟ, ನವವೃಂದಾವನ, ಶ್ರೀಕೃಷ್ಣದೇವರಾಯ ಸಮಾಧಿ (60 ಕಾಲಿನ ಮಂಟಪ) ಮುಳುಗಡೆಯಾಗಿದೆ.
ಗಂಗಾವತಿ: ತುಂಗಭದ್ರಾ ಜಲಾಶಯದಿಂದ ನದಿಗೆ ಅಧಿಕ ನೀರು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ನದಿ ತೀರದಲ್ಲಿರುವ ಗ್ರಾಮಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ.
ಜಲಾಶಯದಿಂದ ನದಿಗೆ 1.20 ಲಕ್ಷ ಕ್ಯುಸೆಕ್ ನೀರು ಬಿಟ್ಟಿದ್ದರಿಂದ ಗಂಗಾವತಿ- ಬಳ್ಳಾರಿ ಜಿಲ್ಲೆಯ ಕಂಪ್ಲಿ ಸೇತುವೆ ಮುಳುಗಡೆಯಾಗಿದೆ. ಅದರಂತೆ ತಾಲೂಕಿನ ಆನೆಗೊಂದಿಯ ತಳವಾರ ಘಟ್ಟ, ನವವೃಂದಾವನ, ಶ್ರೀಕೃಷ್ಣದೇವರಾಯ ಸಮಾಧಿ (60 ಕಾಲಿನ ಮಂಟಪ) ಮುಳುಗಡೆಯಾಗಿದೆ.ವಿರೂಪಾಪುರಗಡ್ಡೆಯ ಹಳೆ ಸೇತುವೆಗೆ ನೀರು ಬಂದಿದ್ದರಿಂದ ಹಂಪಿಗೆ ಹೋಗುವ ಮಾರ್ಗ ಬಂದ್ ಆಗಿದೆ. ನದಿಯಲ್ಲಿ ತೆಪ್ಪ ಹಾಕುವುದನ್ನು ನಿಲ್ಲಿಸಲಾಗಿದೆ. 5 ವರ್ಷಗಳ ಹಿಂದೆ ವಿರೂಪಾಪುರಗಡ್ಡೆಯಲ್ಲಿ ಕೆಲವರು ನೀರುಪಾಲಾಗಿದ್ದರು. ಅಂತಹ ಘಟನೆ ಮರುಕಳಿಸಬಾರದು ಎಂಬ ಕಾರಣಕ್ಕೆ ತಾಲೂಕು ಆಡಳಿತ ಕಟ್ಟೆಚ್ಚರ ವಹಿಸಿದೆ.
ಸಾಣಾಪುರ ಸಮಾನಾತರ ಜಲಾಶಯದಲ್ಲಿ ಅಧಿಕ ನೀರು ಬಂದಿದ್ದರಿಂದ ಪ್ರವಾಸಿಗರು ಹೋಗದಂತೆ ನಿಗಾ ವಹಿಸಿದ್ದು, ಜಲಾಶಯದಲ್ಲಿ ತೆಪ್ಪ ಹಾಕುವುದನ್ನು ನಿಲ್ಲಿಸಲಾಗಿದೆ. ಮೀನುಗಾರರಿಗೂ ಹೋಗದಂತೆ ಸೂಚನೆ ನೀಡಲಾಗಿದೆ.ಗಂಗಾವತಿ- ಕಂಪ್ಲಿ ಸೇತುವೆ ಮುಳುಗಡೆ: ಗಂಗಾವತಿ- ಕಂಪ್ಲಿ ಸೇತುವೆ ಮೇಲೆ ನೀರು ಬಂದಿದ್ದರಿಂದ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ವಾಹನಗಳ ಸಂಚಾರ ನಿಲ್ಲಿಸಲಾಗಿದೆ. ಇದಕ್ಕೆ ಪರ್ಯಾಯವಾಗಿ ಕಡೇಬಾಗಿಲುನಿಂದ ಬಳ್ಳಾರಿ ಹೋಗಲು ಸೂಚನೆ ನೀಡಲಾಗಿದೆ.
ಗಂಗಾವತಿ -ಕಂಪ್ಲಿ ಸೇತುವೆ ಸೇರಿದಂತೆ ನದಿ ತೀರದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಸೇತುವೆ ಮಾರ್ಗದಲ್ಲಿ ವಾಹನಗಳು ಹೋಗದಂತೆ ಎಚ್ಚರಿಸಿದ್ದಾರೆ. ಅಲ್ಲದೇ ವಿವಿಧ ಗ್ರಾಮಗಳು ನದಿ ತೀರದಲ್ಲಿದ್ದು, ರಾತ್ರಿ ಸಮಯದಲ್ಲಿ ನದಿಗೆ ಅಧಿಕ ನೀರು ಬರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸುವಂತೆ ಆನೆಗೊಂದಿ ಗ್ರಾಪಂನಿಂದ ಡಂಗುರ ಹೊಡೆಸಲಾಗಿದೆ. ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ನಿಗಾವಹಿಸಿದೆ.ತುಂಗಭದ್ರಾ ಜಲಾಶಯದಿಂದ ನದಿಗೆ ಅಧಿಕ ನೀರು ಬರುತ್ತಿದ್ದರಿಂದ ನದಿ ತೀರದ ಜನತೆ ಎಚ್ಚರ ವಹಿಸುವಂತೆ ಸೂಚನೆ ನೀಡಿದೆ. ಗಂಗಾವತಿ ಕಂಪ್ಲಿ ಸೇತುವೆ ಮೇಲೆ ನೀರು ಬಂದಿದ್ದರಿಂದ ವಾಹನಗಳ ಸಂಚಾರ ರದ್ದು ಪಡಿಸಿದೆ ಎಂದು ಗಂಗಾವತಿ ತಹಸೀಲ್ದಾರ್ ನಾಗರಾಜ್ ಹೇಳಿದರು.