ವೇತನದ ಭರವಸೆ, ಹೋರಾಟ ಕೈಬಿಟ್ಟ ಗ್ಯಾಂಗ್‌ಮನ್‌ಗಳು

| Published : Mar 05 2025, 12:36 AM IST

ಸಾರಾಂಶ

ಗ್ಯಾಂಗ್‌ಮನ್‌ಗಳ ಪ್ರತಿಭಟನೆಯಿಂದ ಕಾಲುವೆ, ಉಪಕಾಲುವೆಗಳ ನೀರು ನಿರ್ವಹಣೆ ಸಮಸ್ಯೆಯಾಗಿ ರೈತರು ತೊಂದರೆ ಅನುಭವಿಸಿದರು. ಕಾಲುವೆಯ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ನೀರು ಹರಿಯದೆ ಸಮಸ್ಯೆ ಹೆಚ್ಚಾಗಿತ್ತು.

ಕಾರಟಗಿ:

ತುಂಗಭದ್ರಾ ನೀರಾವರಿ ಯೋಜನೆಯ ಟಾಸ್ಕ್‌ಫೋರ್ಸ್ ಕಾರ್ಮಿಕರು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ನೀಡಿದ ಭರವಸೆ ಹಿನ್ನೆಲೆ ಸೋಮವಾರದಿಂದ ಪುನಃ ಕೈಗೊಂಡಿದ್ದ ಹೋರಾಟವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆ.

ಸೋಮವಾರದೊಳಗೆ ವೇತನ ಪಾವತಿ ಮಾಡಿಸುವುದಾಗಿ ಕೊಟ್ಟಿದ್ದ ಭರವಸೆ ಹುಸಿಯಾಗುತ್ತಿದ್ದಂತೆ ಗ್ಯಾಂಗ್‌ಮನ್‌ಗಳು ಇಲ್ಲಿನ ನೀರಾವರಿ ಕಚೇರಿಯ ಮುಂದೆ ಪುನಃ ಹೋರಾಟ ನಡೆಸಿದ್ದರು.

ಗ್ಯಾಂಗ್‌ಮನ್‌ಗಳ ಪ್ರತಿಭಟನೆಯಿಂದ ಕಾಲುವೆ, ಉಪಕಾಲುವೆಗಳ ನೀರು ನಿರ್ವಹಣೆ ಸಮಸ್ಯೆಯಾಗಿ ರೈತರು ತೊಂದರೆ ಅನುಭವಿಸಿದರು. ಕಾಲುವೆಯ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ನೀರು ಹರಿಯದೆ ಸಮಸ್ಯೆ ಹೆಚ್ಚಾಗಿತ್ತು. ಸಮಸ್ಯೆ ಅರಿತ ನೀರು ಬಳಕೆದಾರರ ಸಂಘದ ಅಧ್ಯಕ್ಷ ಸಂಗಮೇಶ ಗೌಡ ಸಚಿವ ಶಿವರಾಜ ತಂಗಡಗಿಗೆ ಅವರಿಗೆ ದೂರವಾಣಿ ಮೂಲಕ ವಿಷಯ ಗಮನಕ್ಕೆ ತಂದಿದ್ದಾರೆ.

ಸ್ಥಳಕ್ಕೆ ಆಗಮಿಸಿದ ವಡ್ಡರಹಟ್ಟಿಯ ಕಾಲುವೆ ನಂ. ೨ ವಿಭಾಗೀಯ ಕಚೇರಿಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಎಂ.ಎಸ್. ಗೋಡೇಕರ, ನಿಮ್ಮ ಬಾಕಿ ವೇತನದ ಬಗ್ಗೆ ಈಗಾಗಲೇ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಸರ್ಕಾರದಿಂದ ಹಣ ಬಿಡುಗಡೆಗೊಳಿಸುವಂತೆಯೂ ಕೂಡಾ ಒತ್ತಾಯಿಸಿದ್ದೇನೆ. ನೀವು ಕೂಡಲೇ ಪ್ರತಿಭಟನೆ ಹಿಂಪಡೆದು ಕೆಲಸಕ್ಕೆ ಹೋಗಬೇಕು. ಭತ್ತ ಬೆಳೆದ ರೈತರಿಗೆ ನೀರು ಮುಟ್ಟದೇ ತೊಂದರೆಯಾಗುತ್ತಿದೆ ಎಂದು ಹೇಳಿದರು. ಇದಕ್ಕೆ ಗ್ಯಾಂಗಮನ್‌ಗಳೂ ಸುತಾರಾಂ ಒಪ್ಪದೇ, ನಮಗೆ ವೇತನ ಪಾವತಿಯಾಗಬೇಕು. ಆಗಲೇ ನಾವು ಪ್ರತಿಭಟನೆ ಹಿಂತೆಗೆಯುವುದಾಗಿ ಪಟ್ಟು ಹಿಡಿದರು.

ಇದೇ ವೇಳೆ ಗ್ಯಾಂಗಮನ್‌ಗಳ ಸಮಸ್ಯೆ ಆಲಿಸಲು ಬಂದಿದ್ದ ನೀರು ಬಳಕೆದಾರರ ಸಂಘದ ಪ್ರಮುಖರಾದ ಸಂಗಮೇಶಗೌಡ ಬೂದಗುಂಪಾ ಅವರು ಇಇ ಗೋಡೆಕರ್ ಹಾಗೂ ಗ್ಯಾಂಗಮನ್‌ಗಳೊಂದಿಗೆ ಮಾತುಕತೆ ನಡೆಸಿದರು

ಕೊನೆಗೆ ಗ್ಯಾಂಗಮನ್‌ಗಳಿಗೆ ಆಗಿರುವ ತೊಂದರೆ ಮತ್ತು ಅವರ ಪ್ರತಿಭಟನೆಯಿಂದ ಕೊನೆ ಭಾಗಕ್ಕೆ ನೀರು ಮುಟ್ಟದಿರುವ ಕುರಿತು ಸಚಿವ ಶಿವರಾಜ ತಂಗಡಗಿ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿ, ಕೊನೆ ಭಾಗಕ್ಕೆ ನೀರು ಮುಟ್ಟದಿರುವುದು ಮತ್ತು ಗ್ಯಾಂಗ್‌ಮನ್‌ಗಳಿಗೆ 4 ತಿಂಗಳಿಂದ ವೇತನ ಬಾರದಿರುವುದು ಕೂಡಾ ಗಂಭೀರವಾದ ವಿಷಯ. ಕೂಡಲೇ ನೀರಾವರಿ ಇಲಾಖೆ ಉನ್ನತ ಅಧಿಕಾರಿಗಳಿಗೆ ಮತ್ತು ಸಂಬಂಧಿಸಿದ ಗುತ್ತಿಗೆದಾರರಿಗೆ ಮಾತನಾಡಿ ವೇತನ ಪಾವತಿಸುವಂತೆ ಕ್ರಮ ತೆಗೆದುಕೊಳ್ಳಲು ಮನವಿ ಮಾಡಿದರು. ಆಗ ಸಚಿವರು ಶನಿವಾರದೊಳಗೆ ಬಾಕಿ ವೇತನ ಪಾವತಿಗೆ ಕ್ರಮಕೈಗೊಳ್ಳುವ ಭರವಸೆ ಕೊಟ್ಟರು.

ಸಚಿವರ ಮಾತಿನ ಮೇಲೆ ವಿಶ್ವಾಸವಿಟ್ಟ ಪ್ರತಿಭಟನಾನಿರತರು ತಮ್ಮ ಹೋರಾಟ ಕೈಬಿಟ್ಟರು. ಪ್ರತಿಭಟನಾ ಸ್ಥಳಕ್ಕೆ ಎಇಇಗಳಾದ ನಾಗಪ್ಪ, ವೆಂಕಟೇಶ್ವರ, ಎಚ್. ವಿಶ್ವನಾಥ್, ೩೧ ಮತ್ತು ೩೨ನೇ ಕಾಲುವೆಯ ಗ್ಯಾಂಗಮನ್‌ಗಳಾದ ಲೋಕೇಶ ನಾಯಕ ಮೇಸ್ತ್ರಿ, ಹುಚ್ಚಯ್ಯಸ್ವಾಮಿ, ಅಯ್ಯನಗೌಡ, ವೀರೇಶಯ್ಯಸ್ವಾಮಿ, ಸಿದ್ದಪ್ಪ, ಶೇಖರ, ಹನುಮಂತರಾವ್ ಕುಲಕರ್ಣಿ, ಪ್ರಭುಸ್ವಾಮಿ, ಶೇಖರ, ಮಹಿಬೂಬ್ ಮ್ಯಾಗಳಮನಿ, ಶಿವಕುಮಾರ, ಬಸವರಾಜ ಅಡವಿಬಾವಿ, ಚೌಡಪ್ಪ, ಶ್ರೀಧರಗೌಡ, ದುರುಗಪ್ಪ ಭೋವಿ, ಶಿವು ಕುಂಬಾರ, ರಮೇಶ ಹರಿಜನ, ಯಮನೂರಪ್ಪ ಚಲುವಾದಿ, ರಮೇಶ ಚಲುವಾದಿ, ಶಬ್ಬೀರ್, ದರಿಯಪ್ಪ, ಪಾಮಯ್ಯ ಇದ್ದರು.