ಸಾರಾಂಶ
ಕನ್ನಡಪ್ರಭ ವಾರ್ತೆ ಗಂಗೊಳ್ಳಿ
ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಉಡುಪಿಯ ವಿ ರೀಚ್ ಅಕಾಡೆಮಿಗಳ ಜಂಟಿ ಆಶ್ರಯದಲ್ಲಿ ಸರಸ್ವತಿ ವಿದ್ಯಾಲಯದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಕಂಪನಿ ಸೆಕ್ರೆಟರಿ ಮತ್ತು ಚಾಟಡ್ ಅಕೌಂಟೆಂಟ್ ಕೋರ್ಸ್‌ಗಳ ಕುರಿತಾದ ಪರಿಚಯ ಕಾರ್ಯಕ್ರಮವು ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ನೆರವೇರಿತು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕಂಪನಿ ಸೆಕ್ರೆಟರಿ ಸಂತೋಷ್ ಪ್ರಭು, ಕಂಪನಿ ಸೆಕ್ರೆಟರಿ ಕೋರ್ಸಿನ ಬಗ್ಗೆ ಮಾಹಿತಿಯನ್ನು ನೀಡುತ್ತಾ ಕಂಪನಿ ಸೆಕ್ರೆಟರಿ ಕೋರ್ಸ್ ಮಾಡುವುದರ ಮೂಲಕ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದಾಗಿದೆ. ಇದು ಖಚಿತ ಉದ್ಯೋಗವನ್ನು ನೀಡುವುದು ಮಾತ್ರವಲ್ಲದೆ ವಾಣಿಜ್ಯ ವಿಭಾಗದಲ್ಲಿನ ಬದಲಾವಣೆಗಳಿಗೆ ಒಗ್ಗಿಕೊಳ್ಳಲು ನಮ್ಮನ್ನು ಸಜ್ಜುಗೊಳಿಸಿ ಉನ್ನತ ಸ್ಥಾನಮಾನವನ್ನು ಮತ್ತು ಗಳಿಕೆಯನ್ನು ಪಡೆಯುವಂತೆ ಮಾಡುತ್ತದೆ ಎಂದು ಹೇಳಿದರು.ಐಸಿಎಸ್ಐನ ಮಂಗಳೂರು ವಿಭಾಗದ ಉಸ್ತುವಾರಿ ಅಧಿಕಾರಿ ಶಂಕರ್ ಶುಭ ಹಾರೈಸಿದರು. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ ಅಧ್ಯಕ್ಷತೆ ವಹಿಸಿದ್ದರು. ಆಂಗ್ಲಭಾಷೆ ಉಪನ್ಯಾಸಕ ಥಾಮಸ್ ಪಿ.ಎ. ಪ್ರಾಸ್ತಾವಿಕ ಮಾತುಗಳಾಡಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸುಗುಣ ಆರ್.ಕೆ. ಮತ್ತು ಎನ್ಎಸ್ಎಸ್ ವಿದ್ಯಾರ್ಥಿ ಘಟಕದ ನಾಯಕ ಗಗನ್ ಮೇಸ್ತ ಉಪಸ್ಥಿತರಿದ್ದರು. ದಿಯಾ ಜಿ. ಪೈ ಪ್ರಾರ್ಥಿಸಿದರು. ಧನ್ಯ ಯು. ಅತಿಥಿಗಳನ್ನು ಪರಿಚಯಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ ಸಹಕರಿಸಿದರು. ವಿದ್ಯಾರ್ಥಿನಿ ಮೆಹಕ್ ಖಾರ್ವಿ ಕಾರ್ಯಕ್ರಮವನ್ನು ನಿರೂಪಿಸಿದರು. ಶರ್ವಾನಿ ಪೈ ವಂದಿಸಿದರು.