ಸಾರಾಂಶ
ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜಿ.ಎಸ್.ವಿ.ಎಸ್. ಅಸೋಸಿಯೇಷನ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ನಡೆಯಿತು. ಜಿ.ಎಸ್.ವಿ.ಎಸ್. ಅಸೋಸಿಯೇಷನ್ ಅಧ್ಯಕ್ಷ ಡಾ. ಕಾಶಿನಾಥ್ ಪೈ ಅಧ್ಯಕ್ಷತೆ ವಹಿಸಿದ್ದರು.
ಕನ್ನಡಪ್ರಭ ವಾರ್ತೆ ಕುಂದಾಪುರ
ಮಾನವೀಯತೆಗಿಂತ ಮಿಗಿಲಾದ ಧರ್ಮ ಯಾವುದೂ ಇಲ್ಲ. ನಾವು ಬೆಳೆದು ಉಳಿದವರನ್ನು ಕೂಡ ಬೆಳೆಸುತ್ತಾ ಸಾಗುವಲ್ಲಿ ಜೀವನದ ನಿಜವಾದ ಸಾರ್ಥಕತೆ ಅಡಗಿದೆ ಎಂದು ಉದ್ಯಮಿ ಮೌಲಾನ ಇಬ್ರಾಹಿಂ ಹೇಳಿದ್ದಾರೆ.ಇಲ್ಲಿನ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜಿ.ಎಸ್.ವಿ.ಎಸ್. ಅಸೋಸಿಯೇಷನ್ ವತಿಯಿಂದ ನಡೆದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಅವರು ಮಾತನಾಡಿದರು.ಬದುಕಿನಲ್ಲಿ ಏರಿಳಿತಗಳು ಸಾಮಾನ್ಯ. ಆದರೆ ಯಾವುದೇ ಪರಿಸ್ಥಿತಿಯಲ್ಲಿಯೂ ಧೃತಿಗೆಡದೆ ನಮ್ಮ ಗುರಿಯ ಕಡೆ ನಾವು ಮುಂದುವರಿಯಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಜಿ.ಎಸ್.ವಿ.ಎಸ್. ಅಸೋಸಿಯೇಷನ್ ಅಧ್ಯಕ್ಷ ಡಾ. ಕಾಶಿನಾಥ್ ಪೈ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಮೌಲಾನ ಇಬ್ರಾಹಿಂ ಅವರನ್ನು ಗೌರವಿಸಿ ಅಭಿನಂದಿಸಲಾಯಿತು. ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ 94 ವಿದ್ಯಾರ್ಥಿಗಳಿಗೆ ಸುಮಾರು 6.50 ಲಕ್ಷ ರು.ಗಳ ವಿದ್ಯಾರ್ಥಿ ವೇತನ ವಿತರಿಸಲಾಯಿತು.ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಸಂಚಾಲಕ ಎನ್. ಸದಾಶಿವ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿ.ಎಸ್.ವಿ.ಎಸ್. ಅಸೋಷಿಯೇಷನ್ ನ ಸದಸ್ಯ ರಾಮನಾಥ ನಾಯಕ್ ಸ್ವಾಗತಿಸಿದರು. ಆಂಗ್ಲ ಭಾಷಾ ಉಪನ್ಯಾಸಕ ಥಾಮಸ್ ಪಿ. ಎ. ಅತಿಥಿಗಳ ಪರಿಚಯ ಮಾಡಿದರು. ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು. ಯು. ವೆಂಕಟೇಶಮೂರ್ತಿ, ಸುಗುಣ ಆರ್. ಕೆ., ನಮಿತಾ ಶೆಣೈ ಸಹಕರಿಸಿದರು. ಸಪೇಕ್ಷಾ ಮತ್ತು ಶ್ರೀನಿಧಿ ಪ್ರಾರ್ಥಿಸಿದರು. ಪ್ರಾಂಶುಪಾಲೆ ಕವಿತಾ ಎಮ್. ಸಿ. ವಂದಿಸಿದರು.