ಸಾರಾಂಶ
ಗಂಗಾವತಿ/ ಕೊಪ್ಪಳ:
ಗಂಗಾವತಿ ತಾಲೂಕಿನ ಸಾಣಾಪುರದ ಜಂಗ್ಲಿ ಬಳಿ ವಿದೇಶಿ ಪ್ರವಾಸಿಗರ ಮೇಲೆ ನಡೆದ ಹಲ್ಲೆ ಹಾಗೂ ಗ್ಯಾಂಗ್‌ರೇಪ್ ಪ್ರಕರಣದ ಮೂರನೇ ಆರೋಪಿಯನ್ನು ಸೋಮವಾರ ಚೆನ್ನೈನಿಂದ ಗಂಗಾವತಿಗೆ ಕರೆದುಕೊಂಡು ಬಂದಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರಲ್ಲದೇ, ಕೃತ್ಯಕ್ಕೆ ಬಳಸಿದ ಬೈಕ್ ಸೇರಿದಂತೆ ಮತ್ತಿತರ ವಸ್ತು, ಮಹಿಳೆಯರಿಂದ ಅಪಹರಿಸಿದ್ದ ಮೊಬೈಲ್, ಬ್ಯಾಗ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಗ್ಯಾಂಗ್‌ರೇಪ್‌ನ 3ನೇ ಆರೋಪಿಯಾದ ಗಂಗಾವತಿಯ ಸಾಯಿನಗರದ ಶರಣಬಸವ (27) ಎಂಬಾತನನ್ನು ಚೆನ್ನೈನ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದನ್ನು ಖಚಿತಪಡಿಸಿರುವ ಎಸ್ಪಿ ರಾಮ ಎಲ್ ಅರಸಿದ್ದಿ, ಆತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಆತ ನೀಡಿದ ಮಾಹಿತಿ ಆಧರಿಸಿ ಕೃತ್ಯಕ್ಕೆ ಬಳಸಿದ ಬೈಕನ್ನೂ ಸಹ ಸೀಜ್ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದರ ಜೊತೆಗೆ ಅವರು ಕೃತ್ಯ ನಡೆದ ದಿನ ಮಹಿಳೆಯರ ಬ್ಯಾಗ್, ಮೊಬೈಲ್ ಮತ್ತಿತರ ವಸ್ತುಗಳನ್ನು ಲೂಟಿ ಮಾಡಿ ಒಯ್ದಿದ್ದರು. ಅದನ್ನೂ ಸಹ ವಶಕ್ಕೆ ಪಡೆಯಲಾಗಿದೆ. ಅವರು ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ಸಹ ಪರಿಶೀಲಿಸಲಾಗಿದೆ ಎಂದರು.ಈ ಮೊದಲು ಮಲ್ಲೇಶ ದಾಸರ, ಚೇತನ ಸಾಯಿ ಎಂಬುವರನ್ನು ಬಂಧಿಸಲಾಗಿತ್ತು. ಶರಣಬಸವ ತಲೆ ಮರೆಸಿಕೊಂಡಿದ್ದ. ಈತನ ಪತ್ತೆಗೆ ಎರಡು ತಂಡಗಳನ್ನು ರಚಿಸಲಾಗಿತ್ತು. ತಾಂತ್ರಿಕ ಅಂಶಗಳನ್ನು ಆಧರಿಸಿ ಹಾಗೂ ಖಚಿತ ಮಾಹಿತಿ ಮೇರೆಗೆ ಆರೋಪಿ ಬಂಧಿಸಲಾಗಿದೆ. ಇದಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.
ಆರೋಪಿಗಳು ಬ್ರಿಬ್ರಾಸ್, ಡ್ಯಾನಿಯಲ್, ಪಂಕಜ್ ಹಾಗೂ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದ ಎಸ್ಪಿ, ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ಹೇಮಂತ ಕುಮಾರ, ಗಂಗಾವತಿ ಡಿಎಸ್‌ಪಿ ಸಿದ್ದಲಿಂಗಪ್ಪಗೌಡ, ಪೊಲೀಸ್ ಅಧಿಕಾರಿಗಳಾದ ಸೋಮಶೇಖರ, ಪ್ರಕಾಶ ಮಾಳೆ, ಆಂಜಿನೇಯ ಡಿ.ಎಸ್., ಮಹಾಂತೇಶ ಸಜ್ಜನ್, ಗುರುರಾಜ ಸೇರಿ ಇತರರು ಆರೋಪಿಗಳ ಪತ್ತೆಗೆ ಶ್ರಮಿಸಿದ್ದಾರೆ ಎಂದರು.ರೆಸಾರ್ಟ್ ಮಾಲಿಕರಿಗೆ ಎಚ್ಚರಿಕೆ
ಗಂಗಾವತಿ ತಾಲೂಕಿನ ಸಾಣಾಪುರದ ಜಂಗ್ಲಿ ಬಳಿ ವಿದೇಶಿ ಪ್ರವಾಸಿಗರ ಮೇಲೆ ನಡೆದ ಹಲ್ಲೆ ಹಾಗೂ ಗ್ಯಾಂಗ್‌ರೇಪ್ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಪೊಲೀಸರು ರೆಸಾರ್ಟ್ ಮಾಲೀಕರ ಸಭೆ ನಡೆಸಿ ಅನೈತಿಕ, ಅಕ್ರಮ ಚಟುವಟಿಕೆ ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.ಡಿವೈಎಸ್‌ಪಿ ಕಚೇರಿಯಲ್ಲಿ ರೆಸಾರ್ಟ್ ಮಾಲೀಕರ ಸಭೆ ನಡೆಸಿದ ಎಸ್ಪಿ ಡಾ. ರಾಮ ಎಲ್ ಅರಸಿದ್ಧಿ, ಪ್ರವಾಸಿಗರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಏನಾದರೂ ಸಮಸ್ಯೆ ಆದರೆ ಅದಕ್ಕೆ ರೆಸಾರ್ಟ್ ಮಾಲೀಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡುವ ಜತೆಗೆ ಈ ರೀತಿಯ ಘಟನೆಗಳು ಮರಕಳಿಸದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ.
ಸಾಣಾಪುರ ಬಳಿ ವಿದೇಶಿ ಮಹಿಳೆ ಸೇರಿ ಇಬ್ಬರು ಮೇಲೆ ಗ್ಯಾಂಗ್‌ರೇಪ್ ನಡೆದಿರುವುದು ಖಂಡನೀಯ. ಆನೆಗೊಂದಿ ಪ್ರದೇಶ ಪ್ರವಾಸೋದ್ಯಮಕ್ಕೆ ಹೆಸರು ಪಡೆದಿದೆ. ಅಂಜನಾದ್ರಿ ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸುವ ಪುಣ್ಯಕ್ಷೇತ್ರವಾಗಿದೆ. ಇಂತಹ ಕ್ಷೇತ್ರದಲ್ಲಿ ಅನಧಿಕೃತ ರೆಸಾರ್ಟ್‌ಗಳಿದ್ದು ಅವುಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಕ್ಷಣ ತೆರವುಗೊಳಿಸಬೇಕು. ಗೃಹ ಸಚಿವರು ಅಂಜನಾದ್ರಿ ಬೆಟ್ಟ ಬಳಿ ಪೊಲೀಸ್ ಠಾಣೆ ನಿರ್ಮಿಸಬೇಕು ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.