ಸಾರಾಂಶ
ಶಹಾಪುರ : ಸಮೀಪದ ವಡಗೇರಾ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಜಮೀನೊಂದರಲ್ಲಿ ಬೆಳೆದಿದ್ದ 5 ಗಾಂಜಾ ಗಿಡಗಳನ್ನು ಜಪ್ತಿ ಮಾಡಿಕೊಂಡಿದ್ದು, ಅಬಕಾರಿ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಅಂದಾಜು 3 ಲಕ್ಷ ರು.ಗಳು ಮೌಲ್ಯದ 7.720 ಕೆಜಿಯ 5 ಗಾಂಜಾ ಗಿಡಗಳು ವಶಕ್ಕೆ ಪಡೆಯಲಾಗಿದೆ ಎಂದು ಅಬಕಾರಿ ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ಶೋಧ ನಡೆಸಿದಾಗ, ಮೆಣಸಿನಕಾಯಿ ಹಾಗೂ ಹತ್ತಿ ಬೆಳೆ ಮಧ್ಯೆ ಗಾಂಜಾ ಗಿಡಗಳು ಬೆಳೆದಿರುವುದು ಕಂಡುಬಂದಿವೆ. ಹೂ, ತೆನೆಭರಿತ ಎಲೆಗಳಿಂದ ಕೂಡಿದ 5 ಹಸಿ ಗಾಂಜಾದ ಗಿಡಗಳನ್ನು ಬೆಳೆದಿದ್ದು, 3 ಲಕ್ಷ ರು.ಗಳ ಮೌಲ್ಯದ 7.720 ಕೆಜಿ ಗಾಂಜಾ ಬೆಳೆ ವಶಪಡಿಸಿಕೊಳ್ಳಲಾಗಿದೆ.
ಜಮೀನಿನ ಮಾಲೀಕನ ವಿರುದ್ಧ ಹಾಗೂ ಅಂಬಲಪ್ಪ ಎನ್ನುವವರ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆ-1985 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಪರ ಆಯುಕ್ತರು (ಜಾರಿ ಮತ್ತು ಅಪರಾಧ, ಕೇಂದ್ರ ಸ್ಥಾನ ಬೆಳಗಾವಿ) ಹಾಗೂ ಅಬಕಾರಿ ಜಂಟಿ ಆಯುಕ್ತರು (ಜಾ&ತ), ಕಲಬುರಗಿ ವಿಭಾಗ ಕಲಬುರಗಿ ಅವರ ನಿರ್ದೆಶನದಂತೆ, ಅಬಕಾರಿ ಉಪ ಆಯುಕ್ತರು ಯಾದಗಿರಿ ಜಿಲ್ಲೆ ಅವರ ಆದೇಶದ ಮೇರೆಗೆ ದಾಳಿಯಲ್ಲಿ ಅಬಕಾರಿ ಉಪ ಅಧೀಕ್ಷಕ ಹರ್ಷರಾಜ್ ಬಿ., ಅಬಕಾರಿ ನಿರೀಕ್ಷಕ ವಿಜಯಕುಮಾರ ಹಿರೇಮಠ್, ಅಬಕಾರಿ ಇನ್ಸ್ ಪೆಕ್ಟರ್ ಗಳಾದ ಮಹೇಶ್ ಚೌದ್ರಿ, ಪ್ರವೀಣ್ ಕುಮಾರ್, ಸಿಬ್ಬಂದಿಯರಾದ ಮಹ್ಮದ್ ಸುಭಾನಿ, ನಾಗರಾಜ್, ಬಸವರಾಜ್, ವಾಹನ ಚಾಲಕ ಗೋಪಾಲ್ ಇದ್ದರು.