ಡಿಜೆ ಇಲ್ಲದೆ ಗಣಪತಿ ವಿಸರ್ಜನೆ ಮಾಡಲ್ಲ: ರವಿ ಪುರೋಹಿತ

| Published : Sep 03 2025, 01:01 AM IST

ಸಾರಾಂಶ

ಡಿಜೆ ಇಲ್ಲದೆ ಇಡೀ ತಾಲೂಕಿನಲ್ಲಿ ಸಾರ್ವಜನಿಕ ಗಣಪತಿಗಳನ್ನು ವಿಸರ್ಜಿಸುವುದಿಲ್ಲ ಎಂದು ಮುಖಂಡರು ಎಚ್ಚರಿಸಿದರು.

ಹಾನಗಲ್ಲ: ಹಿಂದೂ ಹಬ್ಬಗಳು ಬಂದಾಗ ಮಾತ್ರ ಡಿಜೆ ನಿಷೇಧ ಸೇರಿದಂತೆ ಹಲವು ನಿರ್ಬಂಧಗಳನ್ನು ಹಾಕುವ ಸರ್ಕಾರ ಹಾಗೂ ಜಿಲ್ಲಾಡಳಿತಗಳು ಹಿಂದೂ ವಿರೋಧಿ ನೀತಿಗೆ ಮುಂದಾಗುತ್ತಿದ್ದು, ತಾಲೂಕಿನಲ್ಲಿ ಡಿಜೆ ಇಲ್ಲದೆ ಗಣಪತಿ ವಿಸರ್ಜನೆ ಮಾಡುವುದಿಲ್ಲ ಎಂದು ತಾಲೂಕು ಗಣಪತಿ ಮಹಾಮಂಡಳ ಒಕ್ಕೂಟದ ನಾಯಕ ರವಿ ಪುರೋಹಿತ ತಿಳಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಕಾರಣಿಗಳ ಮೆರವಣಿಗೆಗೇಕೆ ಇಂತಹ ನಿಷೇಧವಿಲ್ಲ. ಇಡೀ ರಾಜ್ಯದಲ್ಲಿ ಹಲವು ಮಾಲಿನ್ಯಗಳಿಗೆ ಕಣ್ಣು ಮುಚ್ಚಿ ಕುಳಿತುಕೊಳ್ಳುವ ಸರ್ಕಾರಿ ಆಡಳಿತ ವ್ಯವಸ್ಥೆಗೆ ಗಣಪತಿ ವಿಸರ್ಜನೆಯ ವಿಷಯ ಬಂದಾಗ ಮಾತ್ರ ಎಲ್ಲ ಮಾಲಿನ್ಯಗಳ ಮಾತು ಆರಂಭವಾಗುತ್ತವೆ. ಇದಕ್ಕೆಲ್ಲ ಹಿಂದೂ ವಿರೋಧಿ ಪಿತೂರಿಯೇ ಕಾರಣ ಎಂದರು.ಸೆ. 4ರಂದು 10 ಗಂಟೆಗೆ ತಾಲೂಕಿನ ಅಂದಾಜು 800 ಸಾರ್ವಜನಿಕ ಗಜಾನನೋತ್ಸವ ಸಮಿತಿಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಮೆರವಣಿಗೆ ನಡೆಸಿ, ತಹಸೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಗಣಪತಿ ವಿಸರ್ಜಿಸಲು ಡಿಜೆ ಪರವಾನಗಿ ನೀಡಬೇಕು ಎಂದು ಒತ್ತಾಯಿಸಲಾಗುತ್ತಿದೆ. ಡಿಜೆ ಇಲ್ಲದೆ ಇಡೀ ತಾಲೂಕಿನಲ್ಲಿ ಸಾರ್ವಜನಿಕ ಗಣಪತಿಗಳನ್ನು ವಿಸರ್ಜಿಸುವುದಿಲ್ಲ ಎಂದು ಎಚ್ಚರಿಸಿದರು.ಮುಖಂಡರಾದ ಹರೀಶ ಹಾನಗಲ್ಲ, ವಿಶ್ವನಾಥ ಬಾಳೂರ, ಬಸವಣ್ಣೆಯ್ಯ ಸಾಲಿಮಠ, ಪವನ ಜಾಬಿನ, ಸಂಜೀವ ರಾಮಣ್ಣನವರ, ಬಸವರಾಜ ಮಟ್ಟಿಮನಿ, ಮಣಿಕಂಠ ಹಾರನಹಳ್ಳಿ, ರಾಜು ಡಂಬಳ, ಅರವಿಂದ ಮಹಾಂತಿನಮಠ, ರಜತ ಕಲಾಲ, ತುಳಜೇಶ ಮೂಲಿಮನಿ, ಆರ್.ಎನ್. ಕಲಾಲ, ಮನೋಜ ಕಮಾಟಿ ಮೊದಲಾದವರು ಈ ಸಂದರ್ಭದಲ್ಲಿದ್ದರು. ವರದಾ ನದಿ ಬ್ಯಾರೇಜ್‌ನ 98 ಗೇಟ್ ಕಳವು

ಹಾವೇರಿ: ವರದಾ ನದಿ ಬ್ಯಾರೇಜ್‌ನಲ್ಲಿ ನೀರು ನಿಲ್ಲಿಸಲು ಅಳವಡಿಸಿದ್ದ ಗೇಟ್‌ಗಳನ್ನು ಕಳ್ಳರು ಕಳ್ಳತನ ಮಾಡಿರುವ ಘಟನೆ ತಾಲೂಕಿನ ಕೋಳೂರ ಸಮೀಪದ ಕಳಸೂರು ಬ್ಯಾರೇಜ್ ಪಕ್ಕದಲ್ಲಿರುವ ಗೋದಾಮಿನಲ್ಲಿ ನಡೆದಿದೆ.

ವರದಾ ನದಿಗೆ ಅಡ್ಡಲಾಗಿ ನೀರು ನಿಲ್ಲಿಸಲು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯವರು 2010- 11ನೇ ಸಾಲಿನಲ್ಲಿ ಕೋಳೂರ ಹದ್ದಿನ ಕಳಸೂರು ಬಳಿ ಬ್ಯಾರೇಜ್ ನಿರ್ಮಿಸಿದ್ದರು. ಆ ಬ್ಯಾರೇಜ್‌ಗೆ 44 ವೆಂಟುಗಳಿದ್ದು, ಅವುಗಳಿಗೆ ಒಟ್ಟು 132 ಬ್ಯಾರೇಜ್ ಗೇಟ್‌ಗಳನ್ನು ಮಳೆಗಾಲ ಮುಗಿದ ಬಳಿಕ ಅಳವಡಿಸಲಾಗುತ್ತದೆ.ಕಳೆದ ಏಪ್ರಿಲ್- ಮೇ ತಿಂಗಳಲ್ಲಿ ಅವುಗಳನ್ನು ಹೊರತೆಗೆದು ಬ್ಯಾರೇಜ್ ಪಕ್ಕದಲ್ಲಿರುವ ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿತ್ತು. ಅಲ್ಲಿಂದ ಈವರಗೆ ನಿರಂತರವಾಗಿ ಕಳ್ಳತನ ಪ್ರಕರಣ ನಡೆಯುತ್ತಿದ್ದು, 132 ಗೇಟುಗಳ ಪೈಕಿ ಸುಮಾರು ₹1.45 ಲಕ್ಷ ಮೌಲ್ಯದ 98 ಗೇಟುಗಳು ಕಳ್ಳತನ ಆಗಿವೆ ಎಂದು ಸಣ್ಣ ನೀರಾವರಿ ಇಲಾಖೆಯ ಶಾಖಾಧಿಕಾರಿ ಮಂಜುನಾಥ ಬಡಿಗೇರ ದೂರು ದಾಖಲಿಸಿದ್ದಾರೆ.

ಲಕ್ಷಾಂತರ ರು. ಮೌಲ್ಯದ ಗೇಟ್‌ಗಳು ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟಿರುವ ಸಣ್ಣ ನೀರಾವರಿ ಇಲಾಖೆಯವರು ಗೋದಾಮಿನಲ್ಲಿ ಕಾವಲುಗಾರರು, ಸಿಸಿ ಕ್ಯಾಮೆರಾ ಸೇರಿದಂತೆ ಯಾವುದೇ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕಳ್ಳರ ಪತ್ತೆಗೆ ಕ್ರಮ: ವರದಾ ನದಿ ಬ್ಯಾರೇಜ್‌ಗೆ ಅಳವಡಿಸಲು 98 ಗೇಟ್‌ಗಳು ಕಳ್ಳತನ ಆಗಿರುವ ಕುರಿತು ದೂರು ದಾಖಲಾಗಿದೆ. ಆದರೆ, ಜೂನ್‌ನಿಂದ ಈವರೆಗೆ ಆಗಾಗ ಕಳ್ಳತನ ಆಗಿದ್ದು, ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮೀಣ ಸಿಪಿಐ ಸಂತೋಷ ಪವಾರ ತಿಳಿಸಿದರು.