ಸಾರಾಂಶ
ಗಣಪತಿ ಪ್ರತಿಷ್ಠಾಪನೆ ಉತ್ಸವ ಕಾರ್ಯಕ್ರಮಗಳು ರಾಜಕೀಯ ಕಾರ್ಯಕ್ರಮಗಳಾಗದೆ ಸ್ಥಳೀಯ ಪ್ರತಿಭೆಗಳು ಮತ್ತು ಕಲಾವಿದರನ್ನು ಬೆಳೆಸುವ ಕಾರ್ಯಕ್ರಮಗಳಾಗಬೇಕು ಎಂದು ಶಾಸಕ ಷಡಕ್ಷರಿ ತಿಳಿಸಿದರು.
ಕನ್ನಡಪ್ರಭವಾರ್ತೆ ತಿಪಟೂರು
ಗಣಪತಿ ಪ್ರತಿಷ್ಠಾಪನೆ ಉತ್ಸವ ಕಾರ್ಯಕ್ರಮಗಳು ರಾಜಕೀಯ ಕಾರ್ಯಕ್ರಮಗಳಾಗದೆ ಸ್ಥಳೀಯ ಪ್ರತಿಭೆಗಳು ಮತ್ತು ಕಲಾವಿದರನ್ನು ಬೆಳೆಸುವ ಕಾರ್ಯಕ್ರಮಗಳಾಗಬೇಕು ಎಂದು ಶಾಸಕ ಷಡಕ್ಷರಿ ತಿಳಿಸಿದರು. ನಗರದ ವಿದ್ಯಾನಗರದ ಶ್ರೀ ಬಾಲ ಗಣಪತಿ ಗೆಳೆಯರ ಬಳಗದ 15ನೇ ವರ್ಷದ ಶ್ರೀ ಗಣಪತಿ ವಿಸರ್ಜನಾ ಮಹೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಗಣಪತಿ ಪ್ರತಿಷ್ಠಾಪನೆ ಮತ್ತು ಉತ್ಸವ ಕಾರ್ಯಕ್ರಮಗಳು ರಾಜಕೀಯ ಕಾರ್ಯಕ್ರಮಗಳಾಗುತ್ತಿರುವುದು ಬೇಸರದ ವಿಚಾರ. ಇಂತಹ ಕಾರ್ಯಕ್ರಮಗಳಲ್ಲಿ ಸ್ಥಳೀಯ ಪ್ರತಿಭೆಗಳಿಗೂ ಮತ್ತು ಕಲಾವಿದರಿಗೆ ಅವಕಾಶ ಕೊಡಬೇಕು. ವರ್ಷದ ಒಂದು ತಿಂಗಳು ಕಲಾವಿದರಿಗೆ ದುಡಿಮೆ ಮತ್ತು ಜೀವನಕ್ಕೆ ಆಧಾರವಾಗಿರುತ್ತದೆ. ಗ್ರಾಮೀಣ ಭಾಗದ ಪ್ರತಿಭೆ ಬಿಗ್‌ಬಾಸ್ ವಿಜೇತ ಹನುಮಂತರವರ ಸಾಧನೆ ಎಲ್ಲರಿಗೂ ಮಾರ್ಗದರ್ಶನವಾಗಿದೆ. ಕಲೆ ಕಲಾವಿದನಿಗೆ ಶ್ರಮಕ್ಕೆ ಒಲಿದಿದೆ ನೀವು ನಿಮ್ಮಂತಹ ಗ್ರಾಮೀಣ ಭಾಗದ ನೂರಾರು ಕಲಾವಿದರನ್ನು ಪ್ರೋತ್ಸಾಹಿಸಿ ಎಂದು ಹೇಳಿದರು. ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್ ಮಾತನಾಡಿ ತಿಪಟೂರು ನಗರದ ಎಲ್ಲಾ ವಾರ್ಡ್‌ಗಳಲ್ಲಿ ಅತಿ ಹೆಚ್ಚು ಗಣಪತಿ ಪ್ರತಿಷ್ಠಾಪನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ಮನೆ ಮಂದಿಗೆಲ್ಲ ಸಂತೋಷ ನೀಡಿದ್ದು ಹಬ್ಬದ ವಾತಾವರಣ ಉಂಟು ಮಾಡಿದೆ ಎಂದರು. ನಗರಸಭೆ ಸದಸ್ಯ ವಿ. ಯೋಗೇಶ್ ಮಾತನಾಡಿ, ಜನರು ನನ್ನನ್ನು ನಗರಸಭೆ ಸದಸ್ಯರನ್ನಾಗಿ ಆಯ್ಕೆ ಮಾಡಿರುವುದಕ್ಕೆ ನಾನು ಚಿರಋಣಿಯಾಗಿರುತ್ತೇನೆ. ಚುನಾಯಿತ ಸದಸ್ಯರಿಗೆ ಅಧಿಕಾರ ಶಾಶ್ವತವಲ್ಲ ಅಭಿವೃದ್ಧಿಯ ಕೆಲಸಗಳು ಶಾಶ್ವತವಾಗಿರುತ್ತವೆ. ಅಧಿಕಾರವಿರಲಿ ಇಲ್ಲದಿರಲಿ ನಿಮ್ಮಗಳ ಸೇವೆಗೆ ಸದಾ ಸಿದ್ಧನಿದ್ದೇನೆ. ಗಣಪತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶ್ರೀ ಬಾಲ ಗಣಪತಿ ಗೆಳೆಯರ ಬಳಗದ ಎಲ್ಲಾ ಸದಸ್ಯರಿಗೆ ಮತ್ತು ಜನರಿಗೆ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಮೂರು ದಿನಗಳ ಕಾರ್ಯಕ್ರಮದಲ್ಲಿ ಶಿವಾರ ಉಮೇಶ್ ರವರಿಂದ ಜಾನಪದ ಗೀತೆ ಕಾರ್ಯಕ್ರಮ ಕೇರಳದ ಹೆಸರಾಂತ ಕಲಾವಿದರಿಂದ ಚಂಡೆ ವಾದ್ಯ ಮತ್ತು ಬಿಗ್‌ಬಾಸ್ ವಿನ್ನರ್ ಹನುಮಂತ ಹಾಗೂ ಸಂಗಡಿಗರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಮತ್ತು ತಾಲೂಕಿನ ವಿವಿಧ ಸಾಮಾಜಿಕ ಸೇವೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಪ್ರತಿನಿತ್ಯ ಊಟ ಮತ್ತು ಉಪಹಾರ ವ್ಯವಸ್ಥೆ ಏರ್ಪಡಿಸಲಾಗಿತ್ತು.