ಸಿಆರ್‌ಝೆಡ್‌ ಸರಳೀಕರಣ, ಕಚೇರಿ ಸ್ಥಳಾಂತರಕ್ಕೆ ಗಂಟಿಹೊಳೆ ಆಗ್ರಹ

| Published : Feb 24 2024, 02:32 AM IST

ಸಾರಾಂಶ

ಕರ್ನಾಟಕದಲ್ಲಿ ಕಡಲ ಪ್ರವಾಸೋದ್ಯಮಕ್ಕೆ, ಉದ್ಯೋಗಾವಕಾಶಗಳಿಗೆ ವಿಫುಲ ಅವಕಾಶವಿದೆ. ಆದರೆ ಕೆಲವೊಂದು ಕಾನೂನು ಬೀಚ್‌ ಪ್ರವಾಸೋದ್ಯಮಕ್ಕೆ ಅಡ್ಡಿಯಾಗುತ್ತಿವೆ. ಈ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಗಂಟಿಹೊಳೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿರಾಜ್ಯದ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅಡ್ಡಿಯಾಗಿರುವ ಸಿಆರ್‌ಝೆಡ್‌ ನಿಯಮಗಳನ್ನು ಸರಳಗೊಳಿಸುವಂತೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಶುಕ್ರವಾರ ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆದಿದ್ದಾರೆ.ಪ್ರಧಾನಿ ಮೋದಿಯವರ ಲಕ್ಷದ್ವೀಪ ಭೇಟಿಯು ಪ್ರವಾಸೋದ್ಯಮ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿತು. ಬಹುತೇಕ ರಾಜ್ಯಗಳು ಇದನ್ನು ಸಕಾರಾತ್ಮಕವಾಗಿ ಬಳಸಿಕೊಂಡಿವೆ. ಆದರೆ ಕರ್ನಾಟಕ ರಾಜ್ಯ ಈ ವಿಚಾರದಲ್ಲಿ ಉದಾಸೀನತೆ ತೋರಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಕಾರ್ಯವೈಖರಿಗೆ ಆಕ್ಷೇಪಿಸಿದರು.

ಕರ್ನಾಟಕದಲ್ಲಿ ಕಡಲ ಪ್ರವಾಸೋದ್ಯಮಕ್ಕೆ, ಉದ್ಯೋಗಾವಕಾಶಗಳಿಗೆ ವಿಫುಲ ಅವಕಾಶವಿದೆ. ಆದರೆ ಕೆಲವೊಂದು ಕಾನೂನು ಬೀಚ್‌ ಪ್ರವಾಸೋದ್ಯಮಕ್ಕೆ ಅಡ್ಡಿಯಾಗುತ್ತಿವೆ. ಈ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದವರು ಹೇಳಿದರು.ಬೈಂದೂರು ಕ್ಷೇತ್ರದ ಮರವಂತೆಯಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟಂತಹ ಯೋಜನೆಗಳು ಸಿಆರ್‌ಝೆಡ್ ಕಾರಣದಿಂದ ಸ್ಥಗಿತಗೊಂಡಿದೆ. ಕೇರಳ, ಗೋವಾ ರಾಜ್ಯಗಳಲ್ಲಿ ಈ ನಿಯಮಗಳನ್ನು ಸರಳಗೊಳಿಸಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಕಂಟಕವಾಗಿರುವ ಈ ನಿಯಮಾವಳಿಗಳನ್ನು ಕರ್ನಾಟಕದಲ್ಲೂ ಸರಳಗೊಳಿಸಬೇಕು ಮತ್ತು ಸುಗಮ ಕಾರ್ಯನಿರ್ವಹಣೆಗೆ ಸಿಆರ್‌ಝಡ್ ಕಚೇರಿಯನ್ನು ಕರಾವಳಿ ಭಾಗಕ್ಕೆ ಸ್ಥಳಾಂತರಿಸಬೇಕು ಎಂದವರು ಒತ್ತಾಯಿಸಿದರು.ಮರವಂತೆ ಅಭಿವೃದ್ಧಿಗೆ ತೊಡಕಾಗಿರುವ ಅಂಶಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಅಗತ್ಯ ಕ್ರಮವಹಿಸುವುದಾಗಿ ಪ್ರವಾಸೋದ್ಯಮ ಸಚಿವರ ಪರವಾಗಿ ಸಚಿವ ಕೃಷ್ಣ ಬೈರೇಗೌಡ ಸದನದಲ್ಲಿ ಉತ್ತರಿಸಿದರು.