ಮಾನವ ಹಕ್ಕುಗಳಿಗೆ ಸಾಂವಿಧಾನಿಕ ರಕ್ಷೆ ಇದೆ

| Published : Dec 12 2024, 12:30 AM IST

ಸಾರಾಂಶ

, ಶಿಕ್ಷಣ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಾಗಿದ್ದು ಇದರಿಂದ ಜೀವನ ರೂಪಿಸಿಕೊಳ್ಳುವುದು ಮಾತ್ರವಲ್ಲದೆ ಯಾವುದೆ ರೀತಿಯಮಾನವ ಹಕ್ಕುಗಳ ಉಲ್ಲಂಘನೆಗೆ ಅವಕಾಶ ನೀಡದಿರುವ ಬಗ್ಗೆ ಅರಿವು ಮೂಡಿಸುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮಾನವ ಹಕ್ಕುಗಳು ಮನುಷ್ಯನ ಜನ್ಮದಾತ ಹಾಗೂ ಮೂಲಭೂತ ಹಕ್ಕುಗಳು, ಇವುಗಳನ್ನು ಗೌರವಿಸಿ ರಕ್ಷಿಸಬೇಕಾದದ್ದು ಎಲ್ಲರ ಕರ್ತವ್ಯ ಎಂದು ವಿದ್ಯಾವರ್ಧಕ ಕಾನೂನು ಕಾಲೇಜಿನ ಪ್ರಾಧ್ಯಾಪಕಿ ಎ.ಆರ್. ಪ್ರಕೃತಿ ಅಭಿಪ್ರಾಯಪಟ್ಟರು.

ನಗರದ ಕ್ರಿಯಾ ಸಂಸ್ಥೆಯು ಕುವೆಂಪು ನಗರದ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಮೈಸೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಮಾನವ ಹಕ್ಕುಗಳ ಕುರಿತಾದ ಚಾರಿತ್ರಿಕ ಹಿನ್ನೆಲೆಯನ್ನು ತಿಳಿಸಿ ಹೆಣ್ಣು ಮಕ್ಕಳು ಯಾವುದೇ ಸಂದರ್ಭದಲ್ಲಿಯೂ ತಮಗಾಗುವ ಅಪಮಾನ, ಹಿಂಸೆ ಸಹಿಸಿಕೊಳ್ಳಬೇಕಿಲ್ಲ. ಸೂಕ್ತ ಪ್ರಾಧಿಕಾರಕ್ಕೆ ದೂರು ನೀಡುವ ಮೂಲಕ ನ್ಯಾಯ ಪಡೆಯಬೇಕು. ಏಕೆಂದರೆ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಭಾರತದ ಸಂವಿಧಾನ ಎಲ್ಲರ ಹಕ್ಕುಗಳನ್ನು ರಕ್ಷಿಸುವ ಖಾತರಿ ಒದಗಿಸುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ. ರಂಗೇಗೌಡ ಮಾತನಾಡಿ, ಶಿಕ್ಷಣ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಾಗಿದ್ದು ಇದರಿಂದ ಜೀವನ ರೂಪಿಸಿಕೊಳ್ಳುವುದು ಮಾತ್ರವಲ್ಲದೆ ಯಾವುದೆ ರೀತಿಯಮಾನವ ಹಕ್ಕುಗಳ ಉಲ್ಲಂಘನೆಗೆ ಅವಕಾಶ ನೀಡದಿರುವ ಬಗ್ಗೆ ಅರಿವು ಮೂಡಿಸುತ್ತದೆ. ಆದ್ದರಿಂದ ಗಂಭೀರ ಅಧ್ಯಯನದಲ್ಲಿ ತೊಡಗುವಂತೆ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಸುಂದರ್ ರಾಜ್ ಕ್ರಿಯಾ ಸಂಸ್ಥೆಯ 2025 ರ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ತಮ್ಮ ಸಂಸ್ಥೆಯಿಂದ ಆರ್ಥಿಕ ದುರ್ಬಲರಿಗೆ ನೀಡಲಾಗುವ ಕಾನೂನು ಸೇವೆಗಳನ್ನು ವಿವರಿಸಿದರು

ಕ್ರಿಯಾದ ಪ್ರಧಾನ ಸಂಯೋಜಕಿ ಮಂದಾರ ಎಸ್.ಉಡುಪಿ ಪ್ರಾಸ್ತಾವಿಕ ಭಾಷಣ ಮಾಡಿ, ಕ್ರಿಯಾ ಸಂಸ್ಥೆಯ ವಿವಿಧ ಮಹಿಳಾ ಮತ್ತು ಯುವ ಕೇಂದ್ರಿತ ಉಚಿತ ಸಮಾಜ ಸೇವಾ ಕಾರ್ಯದಕುರಿತು ತಿಳಿಸಿ ಅವುಗಳನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು. ಕ್ರಿಯಾ ಸಂಸ್ಥಾಪಕ ಪ್ರಸನ್ನಕುಮಾರ್ ಕೆರಗೋಡು ಮಾತನಾಡಿದರು. ನಿಲಯ ಪಾಲಕಿ ಶಶಿಕಲಾ, ಕ್ರಿಯಾ ಸಂಯೋಜಕರಾದ ಕುಮಾರ್, ಲೋಕೇಶ್ ಇದ್ದರು.