ಠರಾವಿನಲ್ಲಿ ಸಲಹೆ ಸೇರಿಸದ ಅಧಿಕಾರಿಗಳ ವಿರುದ್ಧ ಗರಂ

| Published : Mar 01 2024, 02:21 AM IST

ಸಾರಾಂಶ

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸದಸ್ಯರು ಸೂಚಿಸಿದ ವಿಷಯಗಳ ಮತ್ತು ಹಿಂದಿನ ವರ್ಷದಲ್ಲಿ ಬಾಕಿ ಉಳಿದ ಯೋಜನೆಗಳನ್ನು ಸೇರ್ಪಡೆ ಮಾಡಿ ಪರಿಷ್ಕೃತ ಬಜೆಟ್‌ನ್ನು ಅನುಮೋದನೆಗೆ ಸರ್ಕಾರಕ್ಕೆ ಕಳಿಸಿಕೊಡುವಂತೆ ಮೇಯರ್‌ ವೀಣಾ ಬರದ್ವಾಡ ರೂಲಿಂಗ್‌ ನೀಡಿದರು

ಹುಬ್ಬಳ್ಳಿ: ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿದ ವಿಷಯಗಳನ್ನು ಠರಾವಿನಲ್ಲಿ ನಮೂದಿಸುವುದೇ ಇಲ್ಲ. ಸಲಹೆ ಸೂಚನೆಗಳನ್ನು ಪಾಲಿಸುವುದಿಲ್ಲ. ಇದೆಲ್ಲದಕ್ಕೂ ಉದಾಹರಣೆಯಲ್ಲಿ ಬಜೆಟ್‌.!

ಇಲ್ಲಿನ ಪಾಲಿಕೆ ಸಾಮಾನ್ಯಸಭೆಯಲ್ಲಿ ಪಕ್ಷಬೇಧ ಮರೆತು ಎಲ್ಲ ಸದಸ್ಯರು ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮೇಯರ್‌ ಮಾತಿಗೂ ಬೆಲೆ ಇಲ್ಲ. ಸಾಮಾನ್ಯ ಸಭೆಯನ್ನು ನಡೆಸುವುದಾದರೂ ಏಕೆ? ನಿಮ್ಮ ಇಚ್ಛೆಯಂತೆ ನೀವು ಮಾಡುವುದಾದರೆ ಸಾಮಾನ್ಯ ಸಭೆಯಾದರೂ ಯಾಕೆ ಬೇಕು? ಎಂದು ಪ್ರಶ್ನಿಸಿದರು.

ಆಗಿದ್ದೇನು?: ಹಿಂದೆ ಬಜೆಟ್‌ ಮಂಡನೆ ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಸಲಹೆ ನೀಡಲಾಗಿದೆ. ಎಲ್ಲ ಸದಸ್ಯರು ಸಲಹೆ ಸೂಚನೆ ನೀಡಿದ್ದರು. ಆದರೆ ಯಾವೊಂದು ಸಲಹೆ ಸೇರಿಸುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ. ಏಕೆ ಹೀಗೆ. ಹಾಗಾದರೆ ಈ ಸಭೆ ನಡೆಸುವ ಉದ್ದೇಶವಾದರೂ ಏನು? ಎಂದು ಮಾಜಿ ಮೇಯರ್‌ ಈರೇಶ ಅಂಚಟಗೇರಿ ಪ್ರಶ್ನಿಸಿದರು. ಇದಕ್ಕೆ ಪಕ್ಷ ಭೇದ ಮರೆತು ಧ್ವನಿಗೂಡಿಸಿ ಮುಖ್ಯಲೆಕ್ಕಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಬರುವ ಆದಾಯಕ್ಕೂ ಮಾಡುವ ವೆಚ್ಚಕ್ಕೆ ಬ್ಯಾಲೆನ್ಸ್‌ ಶೀಟ್‌ ಹೊಂದಾಣಿಕೆ ಮಾಡಲಾಗಿದೆ. ಅಷ್ಟೊಂದು ಪಾಲಿಕೆ ಮತ್ತು ಸರ್ಕಾರದಿಂದ ಬರುತ್ತದೆಯೇ ಪ್ರಶ್ನಿಸಿದ ಸದಸ್ಯ ವೀರಣ್ಣ ಸವಡಿ, 6 ವರ್ಷಗಳ ಹಿಂದೆ ಮುಖ್ಯಲೆಕ್ಕಾಧಿಕಾರಿ ಮಾಡಿದ್ದ ಸಣ್ಣ ತಪ್ಪಿಗೆ ಪಾಲಿಕೆ ಆರ್ಥಿಕವಾಗಿ ತೊಂದರೆ ಅನುಭವಿಸುವಂತಾಗಿದೆ. ಸದ್ಯದ ಬಜೆಟ್‌ನಲ್ಲಿ ಖರ್ಚು ಜಾಸ್ತಿ, ಆದಾಯ ಕಡಿಮೆ ಬರುವಂತಿದೆ. ಸದಸ್ಯರು ನೀಡಿರುವ ಸಲಹೆಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಇದಕ್ಕೆ ಧ್ವನಿಗೂಡಿಸಿದ ಈರೇಶ ಅಂಚಟಗೇರಿ, ಕಲಾಭವನ ನವೀಕರಣಕ್ಕೆ ₹1 ಕೋಟಿ ಮೀಸಲಿರಿಸಲಾಗಿತ್ತು. ಇದೀಗ ಟೆಂಡರ್‌ ಕರೆಯಲಾಗಿದೆ. ಬಜೆಟ್‌ನಲ್ಲಿ ಅನುದಾನ ನೀಡದೇ ಹೇಗೆ ಹಣ ಹೊಂದಿಸುತ್ತೀರಿ, ಇದೇ ರೀತಿ ಹಲವು ಪ್ರಕರಣಗಳಿವೆ ಎಂದು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್‌ನ ಇಮ್ರಾನ್‌ ಯಲಿಗಾರ ಕೂಡ ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯರು ನೀಡುವ ಸಲಹೆಗಳನ್ನು ಠರಾವ್‌ ಪುಸ್ತಕದಲ್ಲಿ ನಮೂದಿಸುತ್ತಿಲ್ಲ ಎಂದು ಎಲ್ಲ ಸದಸ್ಯರು ಆಕ್ಷೇಪಿಸಿದರು. ಪಾಲಿಕೆಯಲ್ಲಿ ಆಡಳಿತ ಸರಿ ಇಲ್ಲವೆಂದು ಕಾಂಗ್ರೆಸ್‌ನ ಸೆಂದಿಲಕುಮಾರ್‌ ಬಿಜೆಪಿಗರ ಕಾಲೆಳೆದರು.

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸದಸ್ಯರು ಸೂಚಿಸಿದ ವಿಷಯಗಳ ಮತ್ತು ಹಿಂದಿನ ವರ್ಷದಲ್ಲಿ ಬಾಕಿ ಉಳಿದ ಯೋಜನೆಗಳನ್ನು ಸೇರ್ಪಡೆ ಮಾಡಿ ಪರಿಷ್ಕೃತ ಬಜೆಟ್‌ನ್ನು ಅನುಮೋದನೆಗೆ ಸರ್ಕಾರಕ್ಕೆ ಕಳಿಸಿಕೊಡುವಂತೆ ಮೇಯರ್‌ ವೀಣಾ ಬರದ್ವಾಡ ರೂಲಿಂಗ್‌ ನೀಡಿದರು.

ವಾಗ್ವಾದಕ್ಕೆ ಕಾರಣವಾದ ಕೋಳಿಕೆರೆ !: ಧಾರವಾಡದ ಕೋಳಿಕೆರೆ ಹೂಳೆತ್ತುವ ಕಾಮಗಾರಿ ವಿಷಯ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಭಾರಿ ಗದ್ದಲಕ್ಕೆ ಕಾರಣವಾಯಿತು. ಗಮನ ಸೆಳೆಯುವ ವಿಷಯ ಮಂಡಿಸಿದ ಶಂಕರ ಶೆಳಕೆ, ಸದಸ್ಯರ ಗಮನಕ್ಕೆ ತರದೇ ಕಾಮಗಾರಿ ನಡೆಸಲಾಗುತ್ತಿದೆ. ಆ ಬಗ್ಗೆ ಕೇಳಿದರೆ ಬೆದರಿಕೆ ಕರೆ ಬರುತ್ತವೆ ಎಂದು ಅಳಲು ತೋಡಿಕೊಂಡರು.

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಹೆಸರು ಪ್ರಸ್ತಾಪಿಸದೇ ಟೀಕಿಸಿದಾಗ ಕಾಂಗ್ರೆಸ್‌ ಸದಸ್ಯರು ಆಕ್ಷೇಪಿಸಿದರು. ಒಬ್ಬರೇ ಅಧಿಕಾರಿಯನ್ನೇಕೆ ಟಾರ್ಗೇಟ್‌ ಮಾಡುವುದು. ಎಲ್ಲ ಅಧಿಕಾರಿಗಳನ್ನು ಕರೆಯಿಸಿ, ಯಾರ್‍ಯಾರು ಯಾವ ರೀತಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂಬುದನ್ನೆಲ್ಲ ಪರಿಶೀಲಿಸೋಣ ಎಂದರು. ಈ ವೇಳೆ ಆಡಳಿತ- ಪ್ರತಿಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು.

ಕಲಾಪದ ಬಾವಿಗಿಳಿದು ಒಬ್ಬರಿಗೊಬ್ಬರು ಆರೋಪ- ಪ್ರತ್ಯಾರೋಪ ಮಾಡಲು ಶುರು ಮಾಡಿದರು. ಇದರಿಂದ ಸಭೆಯಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಾಗದಂತಾಯಿತು. ಬಳಿಕ ಮೇಯರ್‌ 15 ನಿಮಿಷ ಸಭೆಯನ್ನು ಮುಂದೂಡಿದರು.

ಬಳಿಕ ಸೇರಿದ ಸಭೆಯಲ್ಲಿ ಈ ವಿಷಯ ಇಷ್ಟಕ್ಕೇ ಬಿಟ್ಟು, ಅದನ್ನು ಪ್ರತ್ಯೇಕವಾಗಿ ಚರ್ಚಿಸುವಂತೆ ವೀರಣ್ಣ ಸವಡಿ ಸಲಹೆ ನೀಡಿದರು.

ಎಐಎಂಐಎಂ ಸದಸ್ಯ ನಜೀರ ಅಹ್ಮದ್‌ ಹೊನ್ಯಾಳ, ಇದು 82 ಸದಸ್ಯರ ನೋವು. ಮುಂದೆ ಹೀಗಾಗದಂತೆ ನೋಡಿಕೊಳ್ಳಲು, ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳುವ ಪ್ರತಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಇತರ ಯಾವುದೇ ಕಾರ್ಯಕ್ರಮಗಳಿಗೆ ಆಯಾ ವಾರ್ಡ್‌ ಸದಸ್ಯರನ್ನು ಕಡ್ಡಾಯವಾಗಿ ಆಹ್ವಾನಿಸಬೇಕೆಂಬ ನಿರ್ಣಯ ಮಂಡಿಸಬೇಕೆಂದು ಸಲಹೆ ಮಾಡಿದರು. ಇದಕ್ಕೆ ಮೇಯರ್‌ ಸಹಮತ ವ್ಯಕ್ತಪಡಿಸಿ ರೂಲಿಂಗ್‌ ನೀಡಿದರು.

ಮೇಯರ್‌ಗೆ ಮುಜುಗರ: ಮೇದಾರ ಓಣಿಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಿದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್‌ ಯಂತ್ರ ಅಳವಡಿಸಲು ಈ ಹಿಂದೆಯೇ ಹೇಳಲಾಗಿತ್ತು. ಮೇಯರ್‌ ಅವರು ಕೂಡ ಈ ಬಗ್ಗೆ ತಿಳಿಸಿದ್ದರು ಎಂದು ಸದಸ್ಯೆ ಸುನಿತಾ ಬುರಬುರೆ ಪ್ರಸ್ತಾಪಿಸಿದರು. ಆದರೆ ಅಧಿಕಾರಿಗಳು, ಯೋಜನಾ ವಿಭಾಗಕ್ಕಾಗಲಿ, ವೈದ್ಯಕೀಯ ವಿಭಾಗಕ್ಕಾಗಲಿ ಈ ಬಗ್ಗೆ ಯಾವುದೇ ಪ್ರಸ್ತಾವನೆಯೇ ಬಂದಿಲ್ಲ ಎಂದು ತಿಳಿಸಿದರು.

ಮೇಯರ್‌ ಮಾತನ್ನು ಅಧಿಕಾರಿಗಳು ಕೇಳುತ್ತಿಲ್ಲ. ಇನ್ಯಾರು ಕೇಳುತ್ತಾರೆ ಎಂದು ಪ್ರತಿಪಕ್ಷ ನಾಯಕಿ ಸುವರ್ಣ ಕಲ್ಲಕುಂಟ್ಲ ಛೇಡಿಸಿದರು. ಇದರಿಂದ ಮೇಯರ್‌ ತೀವ್ರ ಮುಜುಗರ ಅನುಭವಿಸಿದರು.

ಸಭಾಭವನಕ್ಕೆ ವಾರದಲ್ಲಿ ಭೂಮಿಪೂಜೆ: ಪಾಲಿಕೆ ಸಭಾಭವನ ನಿರ್ಮಾಣಕ್ಕೆ ಸಂಬಂಧಿಸಿ ಟೆಂಡರ್‌ ಪ್ರಕ್ರಿಯೆಗಳು ಗುರುವಾರ ಪೂರ್ಣಗೊಳ್ಳಲಿದ್ದು, ಗುತ್ತಿಗೆದಾರರಿಗೆ ಶೀಘ್ರ ಕಾರ್ಯಾದೇಶ ನೀಡುವುದಾಗಿ ಸುಪರಿಂಡೆಂಟ್‌ ಎಂಜಿನಿಯರ್‌ ಇ.ತಿಮ್ಮಪ್ಪ ಸಭೆಗೆ ತಿಳಿಸಿದರು. ಲೋಕಸಭೆ ಚುನಾವಣೆ ಘೋಷಣೆಗೆ ಮುನ್ನವೇ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಬೇಕು. ಜತೆಗೆ ಸದಸ್ಯರಿಗೆ ಪ್ರಾಜೆಕ್ಟ್‌ನ್ನು ವಿವರಿಸಬೇಕೆಂದು ತಿಳಿಸಿದರು.