ಮದ್ದೂರು ಪುರಸಭೆಗೆ ಕಸ ಸಂಗ್ರಹ, ವಿಲೇವಾರಿ ವಾಹನ ವಿತರಣೆ

| Published : Mar 03 2025, 01:45 AM IST

ಸಾರಾಂಶ

ಮಹಿಳೆಯರ ಆರ್ಥಿಕ ಸ್ವಾವಲಂಬನೆ ಬದುಕಿಗಾಗಿ ಉಜ್ಜೀವನ್ ಬ್ಯಾಂಕ್ ಮಹಿಳೆಯರಿಗೆ ವ್ಯಾಪಾರೋದ್ಯಮದ ಸಾಲ, ಪಶು ಸಾಕಾಣಿಕೆ, ಗೃಹ ಸುಧಾರಣೆ ಸಾಲದೊಂದಿಗೆ ಅವರ ಆರ್ಥಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಕೆಲಸ ಮಾಡುತ್ತಿದೆ. ಚೋಟಿ ಕದಂ ಯೋಜನೆಯಡಿ ಸಾರ್ವಜನಿಕರ ಮೂಲ ಸೌಲಭ್ಯಕ್ಕೆ ಮತ್ತು ಆರೋಗ್ಯ ವಿಭಾಗಗಳ ಸೇವೆ ಬಗ್ಗೆ ಸಾಮಾಜಿಕ ಕಳಕಳಿ ಹೊಂದಿರುವುದು ಮೆಚ್ಚುಗೆಯ ಸಂಗತಿ.

ಕನ್ನಡಪ್ರಭ ವಾರ್ತೆ ಮದ್ದೂರು

ಉಜ್ಜೀವನ್ ಫೈನಾನ್ಸ್ ಬ್ಯಾಂಕ್‌ನಿಂದ ಪಟ್ಟಣದ ಪುರಸಭೆಗೆ ಕಸ ಸಂಗ್ರಹ ಮತ್ತು ವಿಲೇವಾರಿ ವಾಹನವನ್ನು ಕೊಡುಗೆಯಾಗಿ ನೀಡಲಾಯಿತು.

ಪುರಸಭೆ ಆವರಣದಲ್ಲಿ ಉಜ್ಜೀವನ್ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ಎಂ.ಪಿ.ಶ್ರೀಕಾಂತ್ ಬ್ಯಾಂಕ್‌ನ ಚೋಟಿ ಕದಂ ಯೋಜನೆ ಅಡಿ ಕಸ ವಿಲೇವಾರಿ ವಾಹನವನ್ನು ಅಧ್ಯಕ್ಷೆ ಕೋಕಿಲ ಅರುಣ್ ಅವರಿಗೆ ಹಸ್ತಾಂತರಿಸಿದರು.

ನಂತರ ಕೋಕಿಲ ಮಾತನಾಡಿ, ಮಹಿಳೆಯರ ಆರ್ಥಿಕ ಸ್ವಾವಲಂಬನೆ ಬದುಕಿಗಾಗಿ ಉಜ್ಜೀವನ್ ಬ್ಯಾಂಕ್ ಮಹಿಳೆಯರಿಗೆ ವ್ಯಾಪಾರೋದ್ಯಮದ ಸಾಲ, ಪಶು ಸಾಕಾಣಿಕೆ, ಗೃಹ ಸುಧಾರಣೆ ಸಾಲದೊಂದಿಗೆ ಅವರ ಆರ್ಥಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಕೆಲಸ ಮಾಡುತ್ತಿದೆ ಎಂದರು.

ಚೋಟಿ ಕದಂ ಯೋಜನೆಯಡಿ ಸಾರ್ವಜನಿಕರ ಮೂಲ ಸೌಲಭ್ಯಕ್ಕೆ ಮತ್ತು ಆರೋಗ್ಯ ವಿಭಾಗಗಳ ಸೇವೆ ಬಗ್ಗೆ ಸಾಮಾಜಿಕ ಕಳಕಳಿ ಹೊಂದಿರುವುದು ಮೆಚ್ಚುಗೆಯ ಸಂಗತಿ ಎಂದರು.

ಉಜ್ಜೀವನ್ ಬ್ಯಾಂಕಿನ ಶಾಖಾ ವ್ಯವಸ್ಥಾಪಕ ಎಂ.ಪಿ.ಶ್ರೀಕಾಂತ್ ಮಾತನಾಡಿ, ಯೋಜನೆಯಡಿ ಕಡು ಬಡವರಿಗಾಗಿ ಮೂಲ ಸೌಲಭ್ಯ ಅಭಿವೃದ್ಧಿ ಕಾರ್ಯ ರೂಪಿಸಿ ಸೇವೆ ಸಲ್ಲಿಸುತ್ತಿದೆ ಎಂದರು. ಬ್ಯಾಂಕ್‌ ಚೋಟಿ ಕದಂ ಯೋಜನೆಯಡಿ ತನ್ನ ವಹಿವಾಟಿನ ಜೊತೆಗೆ ಪರಿಸರ ಮತ್ತು ಆರೋಗ್ಯ ವಿಭಾಗಗಳ ಸೇವೆಗಳಾದ ಕುಡಿಯುವ ನೀರು ಪೂರೈಕೆ, ಸಾರ್ವಜನಿಕ ಶೌಚಾಲಯ, ಬಸ್ ತಂಗುದಾಣ ನಿರ್ಮಾಣದ ಜೊತೆಗೆ ಶಾಲೆ ಮತ್ತು ಆರೋಗ್ಯ ಕೇಂದ್ರಗಳ ನವೀಕರಣಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಬ್ಯಾಂಕ್‌ ಸಾರ್ವಜನಿಕ ಕ್ಷೇತ್ರ ಅಭಿವೃದ್ಧಿಗೆ ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಸಂಸ್ಥೆ ಪ್ರಧಾನ ವ್ಯವಸ್ಥಾಪಕರಾದ ಶಂಕರ್ ವಿಕಾಸ್, ಸಂದೀಪ್ ಜೈನ್, ಶ್ರೀನಿವಾಸ ಮೂರ್ತಿ, ರವಿಚಂದ್ರ, ಕೆ.ಎಂ. ತಾಶಿಪ್, ವಿಜಯ್ ಕುಮಾರ್, ಮಹೇಶ್, ಹಾಗೂ ಪುರಸಭೆ ಸಿಬ್ಬಂದಿಗಳು ಮತ್ತು ಬ್ಯಾಂಕಿನ ಫಲಾನುಭವಿಗಳು ಭಾಗವಹಿಸಿದ್ದರು.