ಜನವಸತಿ ಪ್ರದೇಶದಲ್ಲಿ ತ್ಯಾಜ್ಯ ಸಂಗ್ರಹ, ಪ್ರತಿಭಟನೆ

| Published : Feb 14 2025, 12:32 AM IST

ಜನವಸತಿ ಪ್ರದೇಶದಲ್ಲಿ ತ್ಯಾಜ್ಯ ಸಂಗ್ರಹ, ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಜನವಸತಿ ಪ್ರದೇಶದಲ್ಲಿ ತ್ಯಾಜ್ಯ ಹಾಕುತ್ತಿದ್ದ ಪುರಸಭೆಯ ತ್ಯಾಜ್ಯ ವಿಲೇವಾರಿ ಗಾಡಿಗಳನ್ನು ನಿಲ್ಲಿಸಿ, ಅವುಗಳನ್ನು ಹಿಂದಕ್ಕೆ ಕಳುಹಿಸಿ ಪ್ರತಿಭಟಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.

ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸದ ಕಾರಟಗಿ ಪುರಸಭೆ ವಿರುದ್ಧ ಆಕ್ರೋಶ

ಕನ್ನಡಪ್ರಭ ವಾರ್ತೆ ಕಾರಟಗಿ

ಜನವಸತಿ ಪ್ರದೇಶದಲ್ಲಿ ತ್ಯಾಜ್ಯ ಹಾಕುತ್ತಿದ್ದ ಪುರಸಭೆಯ ತ್ಯಾಜ್ಯ ವಿಲೇವಾರಿ ಗಾಡಿಗಳನ್ನು ನಿಲ್ಲಿಸಿ, ಅವುಗಳನ್ನು ಹಿಂದಕ್ಕೆ ಕಳುಹಿಸಿ ಪ್ರತಿಭಟಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.

ಇಲ್ಲಿನ ೧೩ನೇ ವಾರ್ಡ್‌ನ ಸಂತೆ ಮಾರುಕಟ್ಟೆಯ ಹಿಂದುಗಡೆಯ ಸಾರಿಗೆ ಸಂಸ್ಥೆಗೆ ಸೇರಿದ ಜಮೀನಿನಲ್ಲಿ ಪುರಸಭೆ ತ್ಯಾಜ್ಯ ಸಂಗ್ರಹಿಸುತ್ತಿದೆ. ಇದರಿಂದ ಸುತ್ತಲ ಪರಿಸರ ಮಲಿನಗೊಂಡು ದುರ್ವಾಸನೆ ಮತ್ತು ಹೊಗೆ ಎದ್ದು ನಿವಾಸಿಗಳಿಗೆ ಉಸಿರಾಡುವುದಕ್ಕೆ ಸಂಕಷ್ಟ ತಂದೊಡ್ಡಿದೆ.

ಈ ಬಗ್ಗೆ ಸ್ಥಳೀಯ ನಿವಾಸಿಗಳು, ಪಕ್ಕದ ಗುರು ಭವನದ ಶಿಕ್ಷಕರು, ಪೊಲೀಸ್ ವಸತಿಗೃಹದಲ್ಲಿ ವಾಸಿಸುವವರು, ಸಿದ್ದೇಶ್ವರ ಬಯಲು ರಂಗಮಂದಿರದ ಮುಂದಿನ ಮೈದಾನದಲ್ಲಿ ಬೆಳಗ್ಗೆ ವಾಯು ವಿಹಾರ ಬರುವವರು ಪುರಸಭೆಗೆ ದೂರು ನೀಡಿದ್ದರು. ಆದರೆ ಪುರಸಭೆ ಅಧಿಕಾರಿಗಳು ತ್ಯಾಜ್ಯ ವಿಲೇವಾರಿಗೆ ಸ್ಥಳವೇ ಇಲ್ಲ ಎನ್ನುವ ಸಬೂಬು ಹೇಳುತ್ತಿದ್ದರು.

ಪುರಸಭೆಯ ಈ ನಡೆಗೆ ರೋಸಿ ಹೋದ ವಾರ್ಡ್‌ ನಿವಾಸಿಗಳು ಬೆಳಗ್ಗೆಯಿಂದಲೇ ತ್ಯಾಜ್ಯ ಹಾಕಲು ಬರುವ ಗಾಡಿಗಳನ್ನು ತಡೆದು ಪ್ರತಿಭಟಿಸಿದರು. ಪ್ರತಿಭಟನೆ ನೇತೃತ್ವವಹಿಸಿದ್ದ ದಲಾಲಿ ವರ್ತಕರ ಸಂಘದ ಅಧ್ಯಕ್ಷ ಬಸವರಾಜ ಪಗಡದಿನ್ನಿ ಮತ್ತು ಜಿ. ಯಂಕನಗೌಡ ಮಾತನಾಡಿ, ಕಾರಟಗಿ ಪಟ್ಟಣದ ತ್ಯಾಜ್ಯವನ್ನೆಲ್ಲ ತಂದು ಇಲ್ಲಿ ಸಂಗ್ರಹಿಸುತ್ತಿರುವುದರಿಂದ ಇಡೀ ದಲಾಲಿ ಬಜಾರ್, ಗುರುಭವನ, ಪೊಲೀಸ್ ವಸತಿಗೃಹ, ಕೋಟೆ ಪ್ರದೇಶದ ನಿವಾಸಿಗಳಿಗೆ ಕಷ್ಟವಾಗುತ್ತಿದೆ. ತ್ಯಾಜ್ಯಕ್ಕೆ ಬೆಂಕಿ ಬಿದ್ದು, ಅದರಿಂದ ಏಳುವ ಹೊಗೆಯಿಂದ ನಮಗೆಲ್ಲ ಉಸಿರಾಡುವುದಕ್ಕೆ ಕಷ್ಟವಾಗುತ್ತಿದೆ. ಈ ಬಗ್ಗೆ ಅದೆಷ್ಟೋ ಬಾರಿ ಮುಖ್ಯಾಧಿಕಾರಿ ಸುರೇಶ ಶೆಟ್ಟರ್‌ ಅವರಿಗೆ ತಿಳಿಸಿದ್ದೇವೆ. ಅವರು ಸ್ಪಂದಿಸದ ಹಿನ್ನೆಲೆಯಲ್ಲಿ ಜಿಲ್ಲಾ ಕೋಶಾಧ್ಯಕ್ಷರಿಗೂ) ದೂರು ಸಲ್ಲಿಸಿದ್ದೇವೆ. ಆದರೂ ಪ್ರಯೋಜನವಾಗದ ಕಾರಣ ಸಚಿವ ಶಿವರಾಜ ತಂಗಡಗಿ ಅವರ ಗಮನಕ್ಕೂ ತಂದಿದ್ದೇವೆ. ಆದರೆ ಪುರಸಭೆಯವರು ಮಾತ್ರ ಇಲ್ಲಿ ಕಸ ಹಾಕುವುದನ್ನು ನಿಲ್ಲಿಸಲಿಲ್ಲ. ಹೀಗಾಗಿ ತ್ಯಾಜ್ಯ ಸಾಗಿಸುವ ವಾಹನಗಳನ್ನು ತಡೆದು ಹಿಂದಕ್ಕೆ ಕಳುಹಿಸಿದ್ದೇವೆ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ತ್ಯಾಜ್ಯವನ್ನು ಪುರಸಭೆ ಮುಂದೆ ಸುರುವಿ ಪ್ರತಿಭಟಿಸುತ್ತೇವೆ ಎಂದು ಹೇಳಿದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟರ್‌ ಅವರನ್ನು ಪ್ರತಿಭಟನೆ ನಡೆಸುತ್ತಿದ್ದವರು ತರಾಟೆಗೆ ತೆಗೆದುಕೊಂಡರು. ಕೊನೆಗೆ ಮುಖ್ಯಾಧಿಕಾರಿ ಈ ಸ್ಥಳದಲ್ಲಿ ತ್ಯಾಜ್ಯ ಹಾಕುವುದನ್ನು ತಕ್ಷಣದಿಂದ ಸ್ಥಗಿತಗೊಳಿಸುವುದಾಗಿ ಹೇಳಿದರು.ಯರಡೋಣಾ ಗ್ರಾಮದ ಬಳಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಾಗ ಗುರುತಿಸಲಾಗಿದ್ದು, ಇನ್ನೊಂದು ತಿಂಗಳಲ್ಲಿ ಅಲ್ಲಿ ಘಟಕ ನಿರ್ಮಾಣವಾಗಲಿದೆ. ಅನಂತರ ಕಾರಟಗಿ ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ನೀಗಲಿದೆ ಎಂದರು.

ಈ ವೇಳೆ ನಾಮನಿರ್ದೇಶಿತ ಸದಸ್ಯ ವೀರೇಶ ಗದ್ದಿ ಮುದುಗಲ್, ಹನುಮಂತಪ್ಪ ಮೂಲಿಮನಿ, ಶರಣಯ್ಯಸ್ವಾಮಿ ಖಾನಾವಳಿ, ಸುನೀಲ್ ಮೂಲಿಮನಿ, ಮಂಜುನಾಥ ನಾಯಕ, ವೀರೇಶ ಯಾದಗಿರಿ, ಹೀರಾಲಾಲ್ ಸಿಂಗ್, ರವಿಕುಮಾರ ಕೋಟೆ, ದಿನೇಶ ಶೇಟ್, ತಿರುಪತಿ ಸಿಂಗ್, ಮಂಜುನಾಥ ಇನ್ನಿತರರು ಇದ್ದರು.