ಪಾರ್ಕ್‌ನಲ್ಲಿ ಕಸ ವಿಲೇವಾರಿ ಘಟಕ ಅವೈಜ್ಞಾನಿಕ ನಿರ್ಧಾರ

| Published : Jun 12 2024, 12:33 AM IST

ಪಾರ್ಕ್‌ನಲ್ಲಿ ಕಸ ವಿಲೇವಾರಿ ಘಟಕ ಅವೈಜ್ಞಾನಿಕ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕ ಉದ್ಯಾನವನ ವನದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಮುಂದಾಗಿರುವ ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಧಾರವನ್ನು ವಿರೋಧಿಸಿ ಎಸ್.ಎ.ರವೀಂದ್ರನಾಥ ನಗರ ನಾಗರೀಕ ಹಿತರಕ್ಷಣಾ ಸಮಿತಿ ಹಾಗೂ ಸ್ಥಳೀಯ ನಿವಾಸಿಗಳು ದಾವಣಗೆರೆಯಲ್ಲಿ ಪ್ರತಿಭಟಿಸಿದ್ದಾರೆ.

- ಎಸ್.ಎ.ರವೀಂದ್ರನಾಥ ನಗರ ನಾಗರೀಕ ಹಿತರಕ್ಷಣಾ ಸಮಿತಿ ನೇತೃತ್ವದ ಪ್ರತಿಭಟನೆಯಲ್ಲಿ ಎಂ.ಆನಂದ ಆಕ್ರೋಶ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಸಾರ್ವಜನಿಕ ಉದ್ಯಾನವನ ವನದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಮುಂದಾಗಿರುವ ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಧಾರವನ್ನು ವಿರೋಧಿಸಿ ಎಸ್.ಎ.ರವೀಂದ್ರನಾಥ ನಗರ ನಾಗರೀಕ ಹಿತರಕ್ಷಣಾ ಸಮಿತಿ ಹಾಗೂ ಸ್ಥಳೀಯ ನಿವಾಸಿಗಳು ಪ್ರತಿಭಟಿಸಿದರು.

ನಗರದ ಹೊರವಲಯದ ಪಾಲಿಕೆ 41ನೇ ವಾರ್ಡ್‌ನ ರಿ.ಸ.ನಂ. 62ರ ನಿವೇಶನ ಸಂಖ್ಯೆ 154ರ ಸಾರ್ವಜನಿಕ ಉದ್ಯಾನವನವಿದೆ. ಆದರೆ, ಈಗ ಅದೇ ಉದ್ಯಾನ ವನದಲ್ಲಿ ಪಾಲಿಕೆ ಅಧಿಕಾರಿಗಳು ಏಕಾಏಕಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಹೊರಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟಿ, ಬಿಜೆಪಿ ಜಿಲ್ಲಾ ಮುಖಂಡ ಎಂ.ಆನಂದ್ ಪ್ರತಿಭಟನೆಯಲ್ಲಿ ಮಾತನಾಡಿ, ಪಾಲಿಕೆಯ 41ನೇ ವಾರ್ಡ್‌ನ ಈ ಜಾಗವು ಸಾರ್ವಜನಿಕ ಉದ್ಯಾನವನವಾಗಿದೆ. ಆದರೆ, ಪಾಲಿಕೆ ಅಧಿಕಾರಿಗಳ ಅವೈಜ್ಞಾನಿಕ ಯೋಜನೆ, ಆಲೋಚನೆಯಿಂದಾಗಿ ಎಸ್.ಎ. ರವೀಂದ್ರನಾಥ ನಗರದ ನಿವಾಸಿಗಳಿಗೆ ಹಾಗೂ ಇಂಡಸ್ಟ್ರಿಯಲ್ ಏರಿಯಾದ ಕಾರ್ಮಿಕರಿಗೆ ತೀವ್ರ ತೊಂದರೆಯಾಗಲಿದೆ. ಯಾವುದೇ ಕಾರಣಕ್ಕೂ ಇಲ್ಲಿ ಕಸ ವಿಲೇವಾರಿ ಘಟಕ ಆರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ದಾವಣಗೆರೆ ಹೊರವಲಯದ ಲೋಕಿಕೆರೆ ರಸ್ತೆಯಲ್ಲಿ ಜಿಪಂ ಕಚೇರಿ ಎದುರಿನ ವಿಶಾಲವಾದ ಪಾರ್ಕ್ ಇದಾಗಿದೆ. ಪಾರ್ಕ್ ಪಕ್ಕದಲ್ಲೇ ಇಂಡಸ್ಟ್ರಿಯಲ್ ಏರಿಯಾ, ಸಾವಿರಾರು ಮನೆಗಳಿವೆ. ಜನವಸತಿ ಪ್ರದೇಶವೂ ಇದಾಗಿದೆ. ಶ್ರೀ ಚೌಡೇಶ್ವರಿ ದೇವಸ್ಥಾನ, ಶ್ರೀ ಭೂತಪ್ಪನ ದೇವಸ್ಥಾನಗಳಿದ್ದು, ನಿತ್ಯ ನೂರಾರು ಭಕ್ತರು ಭೇಟಿ ನೀಡುತ್ತಾರೆ. ಇದೇ ಜಾಗದಲ್ಲಿ ಟೌನ್ ಹಾಲ್‌ ಮತ್ತು ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಕಾಯ್ದಿರಿಸಿರುವುದು ನಕಾಶೆಯಲ್ಲೇ ವಿವರಿಸಲಾಗಿದೆ. ಹೀಗಿದ್ದೂ ಘಟಕ ಸ್ಥಾಪನೆ ನಿರ್ಧಾರ ಏಕೆ ಎಂದರು.

ಇದೇ ಪಾರ್ಕ್‌ ಜಾಗದಲ್ಲಿ ಈ ಹಿಂದೆ ಜಿಲ್ಲಾಧಿಕಾರಿ, ಜಿಪಂ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಸತಿ ಗೃಹಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಅದೂ ನನೆಗುದಿಗೆ ಬಿದ್ದಿದೆ. ಇಂತಹ ಪ್ರಮುಖ, ಮುಖ್ಯ ಪ್ರದೇಶದಲ್ಲೇ ಕಸ ವಿಲೇವಾರಿ ಘಟಕ ಸ್ಥಾಪಿಸಲು ಪಾಲಿಕೆ ಅಧಿಕಾರಿಗಳು ಮುಂದಾಗಿರುವುದು ಸರಿಯಲ್ಲ. ಮೊಂಡಾಟ ಕೈಬಿಟ್ಟು, ಸಾರ್ವಜನಿಕ ಉದ್ಯಾನವನ ಜಾಗವನ್ನು ಕಾಪಾಡಲಿ. ಪಾರ್ಕ್‌ಗೆ ಮೀಸಲಿಟ್ಟ ಜಾಗ ಅದೇ ಉದ್ದೇಶಕ್ಕೆ ಬಳಕೆ ಆಗಬೇಕೆಂಬುದನ್ನು ಮರೆಯಬಾರದು ಎಂದು ತಿಳಿಸಿದರು.

ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಲು ಉದ್ಯಾನವನಕ್ಕೆ ಭೇಟಿ ನೀಡಿದ್ದ ಪಾಲಿಕೆ ಎಂಜಿನಿಯರ್‌ಗಳಿಗೆ ಸಮಿತಿ ಪದಾಧಿಕಾರಿಗಳು, ಉಭಯ ದೇವಸ್ಥಾನಗಳ ಭಕ್ತರು, ಮಹಿಳೆಯರು, ಹಿರಿಯ ನಾಗರೀಕರು ಎಚ್ಚರಿಕೆ ನೀಡಿ, ಪಾರ್ಕ್‌ನಲ್ಲಿ ಕಸ ತಂದು ಸುರಿಯದಂತೆ ತಾಕೀತು ಮಾಡಿದರು.

ಪ್ರತಿಭಟನೆಯಲ್ಲಿ ಸಮಿತಿ ಗೌರವಾಧ್ಯಕ್ಷ ಎಸ್.ಮಲ್ಲನಗೌಡ, ಅಧ್ಯಕ್ಷ ಎನ್‌.ಸಿದ್ದರಾಮಪ್ಪ, ಎಸ್.ಆರ್‌.ಸೋಮಶೇಖರಪ್ಪ, ಎನ್‌.ಎಸ್. ಮಹೇಶ್ವರಪ್ಪ, ಜಿ.ಕರಿಬಸಪ್ಪ, ಸಿ.ಕೆ.ಶಿವಪ್ಪ, ನೂರಾರು ನಿವಾಸಿಗಳು ಪಾಲ್ಗೊಂಡಿದ್ದರು.

- - - ಕೋಟ್‌ ಪಾಲಿಕೆ ಅಧಿಕಾರಿಗಳು ಹಠಕ್ಕೆ ಬಿದ್ದು ಇಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಿದರೆ ಜನರಲ್ಲಿ ಅನಾರೋಗ್ಯ ಸೃಷ್ಟಿಯಾಗಲಿದೆ. ಆದ್ದರಿಂದ ಘಟಕ ನಿರ್ಮಾಣ ನಿರ್ಧಾರವನ್ನು ಪಾಲಿಕೆ ಆಯುಕ್ತರು ತಕ್ಷಣ ಕೈಬಿಡಬೇಕು. ಸ್ಪಂದಿಸದಿದ್ದರೆ ಸಮಿತಿ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು, ಇಂಡಸ್ಟ್ರಿಯಲ್ ಏರಿಯಾದ ಕಾರ್ಮಿಕರು, ಮಾಲೀಕರು, ರೈಸ್ ಮಿಲ್‌ಗಳ ಮಾಲೀಕರು, ವ್ಯಾಪಾರಸ್ಥರು, ಸ್ಥಳೀಯ ಸಂಸ್ಥೆಗಳ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸುತ್ತೇವೆ

- ಎಂ.ಆನಂದ್‌, ಬಿಜೆಪಿ ಮುಖಂಡ

- - - -11ಕೆಡಿವಿಜಿ8:

ದಾವಣಗೆರೆ ಹೊರವಲಯದ ಎಸ್.ಎ.ರವೀಂದ್ರನಾಥ ನಗರದ ಪಾರ್ಕ್ ಜಾಗನಲ್ಲಿ ಕಸ ವಿಲೇವಾರಿ ಘಟಕ ನಿರ್ಮಿಸುವ ವಿಚಾರ ಕೈ ಬಿಡುವಂತೆ ಒತ್ತಾಯಿಸಿ ಮಂಗಳವಾರ ನಾಗರೀಕ ಹಿತರಕ್ಷಣಾ ಸಮಿತಿ ಹಾಗೂ ಬಿಜೆಪಿ ಮುಖಂಡ ಎಂ.ಆನಂದ್‌ ನೇತೃತ್ವದಲ್ಲಿ ನಿವಾಸಿಗಳು, ಕಾರ್ಮಿಕರು ಪ್ರತಿಭಟಿಸಿದರು.