ಸ್ಲಂಗಳಲ್ಲಿ ಕಸದ ಸಾಮ್ರಾಜ್ಯವೇ ಸೃಷ್ಟಿ

| Published : Dec 07 2024, 12:30 AM IST

ಸಾರಾಂಶ

ಚರಂಡಿ ಬ್ಲಾಕ್‌ ಆದರೆ ಮುಗಿಯಿತು ವಾರಗಟ್ಟಲೇ ರಸ್ತೆಯಲ್ಲಿ ನೀರು ಹರಿಯುತ್ತದೆ. ಬೀದಿಯಲ್ಲಿ ಮ್ಯಾನ್‌ಹೋಲ್‌ ಎದ್ದು ಕಾಣುತ್ತವೆ. ಇದಕ್ಕೆ ಮಹಿಳೆಯರು, ಮಕ್ಕಳು ಎಡವಿ ಬಿದ್ದು ಅನೇಕರು ಕೈ-ಕಾಲು ಮುರಿದುಕೊಂಡ ಉದಾಹರಣೆಗಳಿವೆ.

ಬಾಲಕೃಷ್ಣ ಜಾಡಬಂಡಿ

ಹುಬ್ಬಳ್ಳಿ:

ಇಲ್ಲಿಗೆ ಕಾಲಿಟ್ಟರೆ ಸಾಕು ಕಸದ ಸಾಮ್ರಾಜ್ಯ, ಚರಂಡಿಯಿಂದ ಬರುವ ದುರ್ನಾತ, ಹಲವು ವರ್ಷಗಳಿಂದ ರಸ್ತೆಯನ್ನೇ ಕಾಣದ ಬೀದಿ ನಿಮ್ಮನ್ನು ಸ್ವಾಗತಿಸುತ್ತದೆ.

ಇದು ಮಹಾನಗರ ವ್ಯಾಪ್ತಿಯ ಘೋಷಿತ ಕೊಳಗೇರಿ ಪ್ರದೇಶವಾದ ಹೆಗ್ಗೇರಿಯ ಮಾರುತಿ ನಗರದ ದುಸ್ಥಿತಿ. ಈ ಪ್ರದೇಶ 1993ರಲ್ಲಿ ಕೊಳಚೆ ಪ್ರದೇಶವೆಂದು ಸರ್ಕಾರದಿಂದ ಘೋಷಣೆಯಾಗಿದೆ. ಇಲ್ಲಿ ಸುಮಾರು 1000ಕ್ಕೂ ಅಧಿಕ ಮನೆಗಳಿವೆ. 4608ಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. 2634 ಮಹಿಳೆಯರು, 2074 ಪುರುಷರಿದ್ದಾರೆ. ಅದರಲ್ಲಿ 2000 ಎಸ್ಸಿ, 400 ಎಸ್ಟಿ, 2208 ಜನರು ಅಲ್ಪಸಂಖ್ಯಾತ ಹಾಗೂ ಹಿಂದುಳಿದವರಿದ್ದಾರೆ.ಈ ಪ್ರದೇಶ ಮಹಾನಗರದಲ್ಲಿ ಅತ್ಯಂತ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ರಸ್ತೆ, ಚರಂಡಿ, ಕಸದ ಸಮಸ್ಯೆಯಿಂದಾಗಿ ಸ್ಲಂ ನಿವಾಸಿಗಳು ಅಕ್ಷರಶಃ ನಲುಗಿ ಹೋಗಿದ್ದಾರೆ.

ಚರಂಡಿ ನೀರು ಕುಡಿಯುವ ನೀರಿನಲ್ಲಿ ಸೇರ್ಪಡೆಯಾಗುತ್ತಿದೆ. ಇದರಿಂದ ನೀರು ಬಂದಾಗ ಒಂದು ಗಂಟೆ ನೀರು ಹರಿಬಿಟ್ಟು ಆ ಮೇಲೆ ನೀರನ್ನು ತುಂಬಿಕೊಳ್ಳುತ್ತಾರಂತೆ ಇಲ್ಲಿನ ಜನರು. ಇದರಿಂದ ಈ ಭಾಗದ ಜನರು ಜ್ವರ, ಕೆಮ್ಮುವಿನಂತಹ ಸಾಂಕ್ರಾಮಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ.

ಚರಂಡಿ, ಕಸದ ಸಮಸ್ಯೆಯಿಂದಾಗಿ ಇಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಕತ್ತಲಾದರೆ ಸಾಕು ಮನುಷ್ಯರಿಗಿಂತ ಸೊಳ್ಳೆಗಳ ಸಂಖ್ಯೆಯೇ ಇಲ್ಲಿ ಹೆಚ್ಚಾಗಿರುತ್ತದೆ. ಯಾಕಾದರೂ ಸಂಜೆಯಾಗುತ್ತದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಇಲ್ಲಿನ ನಿವಾಸಿಗಳು.

ಚರಂಡಿ ಅದ್ವಾನ:

ಚರಂಡಿ ಬ್ಲಾಕ್‌ ಆದರೆ ಮುಗಿಯಿತು ವಾರಗಟ್ಟಲೇ ರಸ್ತೆಯಲ್ಲಿ ನೀರು ಹರಿಯುತ್ತದೆ. ಬೀದಿಯಲ್ಲಿ ಮ್ಯಾನ್‌ಹೋಲ್‌ ಎದ್ದು ಕಾಣುತ್ತವೆ. ಇದಕ್ಕೆ ಮಹಿಳೆಯರು, ಮಕ್ಕಳು ಎಡವಿ ಬಿದ್ದು ಅನೇಕರು ಕೈ-ಕಾಲು ಮುರಿದುಕೊಂಡ ಉದಾಹರಣೆಗಳಿವೆ. ಇದನ್ನು ಸರಿಪಡಿಸುವ ಕೆಲಸಕ್ಕೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಮುಂದಾಗುತ್ತಿಲ್ಲ.

ನಿತ್ಯ ಕಸ ಸಂಗ್ರಹ ಮಾಡುವ ವಾಹನ ಬರುತ್ತದೆ. ಆದರೆ ಬಹುತೇಕರು ವಾಹನ ವಾಪಸ್‌ ತೆರಳಿದ ಮೇಲೆ ಬಂದು ರಸ್ತೆ ಮೇಲೆ ಕಸ ಸುರಿಯುತ್ತಾರೆ. ಯಾಕೆ ಇಲ್ಲಿ ಕಸ ಹಾಕುತ್ತೀರಿ ಎಂದು ಒಬ್ಬ ಮಹಿಳೆಗೆ ಕೇಳಿದರೆ ಎಲ್ಲರೂ ಹಾಕ್ತಾರೆ ಅದಕ್ಕೆ ಹಾಕಿದೆ ಎನ್ನುತ್ತಾರೆ.

ಇದು ಅವರ ಮನಸ್ಥಿತಿಯಾಗಿದೆ. ಇದನ್ನು ಬದಲಾಯಿಸಲು ಆಡಳಿತ ವ್ಯವಸ್ಥೆ ಇದುವರೆಗೆ ಯಾವುದೇ ಪ್ರಯತ್ನ ಮಾಡಿಲ್ಲ ಎನ್ನುವ ಆರೋಪವಿದೆ.

ಅರ್ಧ ದಿನ ಬರುವ ನೀರನ್ನೇ ವಾರಕ್ಕೆ ಆಗುವಷ್ಟು ಹಿಡಿದಿಟ್ಟುಕೊಂಡು ಜೀವನ ನಡೆಸಬೇಕು. ನಮ್ಮ ಪ್ರದೇಶದಲ್ಲಿ ಏಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಲ್ಲ. ನಾವು ಪಾಲಿಕೆಗೆ ಕಂದಾಯ ಕಟ್ಟುತ್ತೇವೆ. ಶ್ರೀಮಂತರು ವಾಸಿಸುವ ಪ್ರದೇಶಗಳಿಗೆ ನಿರಂತರ ನೀರು ನೀಡಲಾಗುತ್ತಿದೆ. ನಮಗೆ ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಬಡವರಾಗಿ ಹುಟ್ಟುವುದು ತಪ್ಪೇ ಎಂದು ಪ್ರಶ್ನಿಸುತ್ತಾರೆ ಇಲ್ಲಿನ ಜನರು.

ಹೆಣ್ಣು ಕೊಡುವವರು ಯಾರಾದರೂ ಇಲ್ಲಿಗೆ ಬಂದರೆ ದಾರಿಯಲ್ಲಿರುವ ಗಲೀಜನ್ನು ನೋಡಿ ಓಡಿ ಹೋಗುತ್ತಾರೆ ಎಂದು ಕುಹಕವಾಡುತ್ತಾರೆ ಮಾರುತಿನಗರದ ನಿವಾಸಿ ರಾಮಂಜಿ ಹೊಸಪೇಟೆ.

ಇನ್ನು ಹೊಸೂರಿನ ವೀರಮಾರುತಿ ನಗರದಲ್ಲಿಯೂ ಕಸ ವಿಲೇವಾರಿ, ಕುಡಿಯುವ ನೀರಿನ ಸಮಸ್ಯೆ ಜೀವಂತವಾಗಿದೆ. ಕಸ ಹಾಕಲು ಇಲ್ಲಿ ಸರಿಯಾಗಿ ವಾಹನಗಳು ಬರುವುದಿಲ್ಲ. ಖಾಲಿ ಜಾಗ, ಮುಖ್ಯ ರಸ್ತೆಯಲ್ಲಿ ಬಂದ್‌ ಆಗಿರುವ ಸಾರ್ವಜನಿಕ ಶೌಚಾಲಯವೇ ಕಸ ಎಸೆಯುವ ತಾಣವಾಗಿದೆ ಎನ್ನುತ್ತಾರೆ ವೀರಮಾರುತಿನಗರದ ನಿವಾಸಿ ಮಹಾದೇವಪ್ಪ ಗಾಣಿಗೇರ.

ಹುಬ್ಬಳ್ಳಿಯ ಬಹುತೇಕ ಕೊಳಗೇರಿ ಪ್ರದೇಶಗಳಲ್ಲಿ ಗುಂಡಿ ಬಿದ್ದ ರಸ್ತೆಗಳು, ದೀಪ ಕಾಣದ ಬೀದಿಗಳು, ಡಾಂಬರು, ಸಿಮೆಂಟನ್ನು ಕಾಣದ ಬೀದಿಗಳು ಸಾಕಷ್ಟಿವೆ. ಇವುಗಳ ಅಭಿವೃದ್ಧಿ ಮಾಡಬೇಕಾದ ಕೊಳಗೇರಿ ಮಂಡಳಿ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಮಾತ್ರ ಮೌನ ವಹಿಸಿರುವುದು ದುರಂತವಾಗಿದೆ.ಕಸದ ಗಾಡಿಗಳು ಸರಿಯಾಗಿ ಬರಲ್ಲ. ಇದರಿಂದ ರಸ್ತೆಯ ಬದಿಯಲ್ಲಿಯೇ ಜನರು ಕಸ ಎಸೆಯುತ್ತಾರೆ. ಇನ್ನು ವಾರಕ್ಕೊಮ್ಮೆ ಪೂರೈಸುವ ನೀರನ್ನು ಒಂದು ದಿನ ಪೂರ್ತಿಯಾಗಿ ಬಿಡಬೇಕು ಎಂದು ನಾಗಮ್ಮ ಬೆಳ್ಳಿಗಟ್ಟಿ ಹೇಳಿದರು.ಇಲ್ಲಿ ಏನೇ ಸಮಸ್ಯೆಯಾದರೂ ಅಧಿಕಾರಿಗಳು ಸರಿಯಾಗಿ ಸ್ಪಂದನೆ ಮಾಡಲ್ಲ. ಚರಂಡಿ ಸಂಪೂರ್ಣ ಬ್ಲಾಕ್‌ ಆದರೂ ಸ್ಥಳೀಯರೇ ಹರಸಾಹಸಪಟ್ಟು ಮಾಡಬೇಕಾಗಿದೆ. ರಸ್ತೆ, ಕಸದ ಸಮಸ್ಯೆ ಬಗೆಹರಿಸಬೇಕು ಎಂದು ಮಕ್ತುಂಹುಸೇನ ಧಾರವಾಡ ತಿಳಿಸಿದರು.

ಮಾರುತಿ ನಗರದಲ್ಲಿ ಹೊಸ ಚರಂಡಿ ಜೊತೆಗೆ ಉತ್ತಮ ರಸ್ತೆ ನಿರ್ಮಾಣ ಮಾಡಬೇಕು. ಕಸ ಚೆಲ್ಲದಂತೆ ಸ್ಲಂನ ಜನರಲ್ಲಿ ಅಧಿಕಾರಿಗಳು ಜಾಗೃತಿ ಮೂಡಿಸಬೇಕು. ಕಸದ ತೊಟ್ಟಿ ಇಟ್ಟು ಸ್ವಚ್ಛತೆ ಕಾಪಾಡಬೇಕು ಎಂದು ರಾಜೇಂದ್ರ ಕಲಕೇರಿ ಹೇಳಿದರು.