ಸಾರಾಂಶ
ಗೋಕರ್ಣ: ಇಲ್ಲಿನ ಮುಖ್ಯ ಕಡಲತೀರದ ವಾಹನ ನಿಲುಗಡೆ ಸ್ಥಳದಲ್ಲಿ ದಿನದಿಂದ ದಿನಕ್ಕೆ ಕಸದ ರಾಶಿ ಬೀಳುತ್ತಿದ್ದು, ಇದನ್ನು ಸ್ವಚ್ಛಗೊಳಿಸಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ವಿಶಾಲ ಕಡಲತೀರದಲ್ಲಿ ಪ್ರವಾಸಿ ವಾಹನಗಳ ನಿಲುಗಡೆಗೊಳಿಸಲು ಅವಕಾಶ ನೀಡಲಾಗಿದೆ. ಗ್ರಾಮ ಪಂಚಾಯಿತಿ ವತಿಯಿಂದ ಖಾಸಗಿಯವರಿಗೆ ಟೆಂಡರ್ ಮೂಲಕ ಪ್ರವಾಸಿ ವಾಹನ ನಿಲುಗಡೆ ಶುಲ್ಕ ಆಕರಿಸುತ್ತಿದ್ದು, ಇದರ ಜತೆ ಹತ್ತು ರುಪಾಯಿ ಸ್ವಚ್ಛತಾ ಫೀ ಪಡೆಯಲಾಗುತ್ತಿದೆ. ಪ್ರತಿ ದಿನ ನೂರಾರು ಪ್ರವಾಸಿ ವಾಹನಗಳಿಂದ ಬರುವ ಆದಾಯವು ಬರುತ್ತಿದೆ. ಆದರೆ ತ್ಯಾಜ್ಯಗಳನ್ನು ಎಸೆಯದಂತೆ ಪ್ರವಾಸಿಗರಿಗೆ ತಿಳಿ ಹೇಳುವುದು ಹಾಗೂ ಬಿದ್ದ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ. ಆದರೆ ಈ ಜವಾಬ್ದಾರಿಯನ್ನು ಗ್ರಾಪಂ ಅಥವಾ ಪಾರ್ಕಿಂಗ್ ಟೆಂಡರ್ ಪಡೆದವರು ತೆಗೆದುಕೊಳ್ಳಬೇಕೋ ಎಂಬುದನ್ನು ನಿರ್ಧರಿಸಿ, ತ್ವರಿತ ಕ್ರಮ ಜರುಗಿಸ ಬೇಕಿದೆ.ಕುಡಿಯಲು ನೀರಿಲ್ಲ, ಸ್ನಾನಕ್ಕೆ ಉಪ್ಪು ನೀರು: ಇನ್ನೂ ಒಂದು ಚಿಕ್ಕ ವಾಹನಕ್ಕೆ ಇಪ್ಪತ್ತು ಹಾಗೂ ಸ್ವಚ್ಛತಾ ಫೀ ₹10 ಸೇರಿ ₹30 ಕೊಟ್ಟ ಪ್ರವಾಸಿಗ ಶುದ್ಧ ಕುಡಿಯುವ ನೀರು ಹುಡುಕಿದರೆ ಹಾಳಾದ ಘಟಕ ಕಣ್ಣಿಗೆ ಬೀಳುತ್ತದೆ. ಆನಂತರ ಅಂಗಡಿಗೆ ಹೋಗಿ ಹಣ ಕೊಟ್ಟು ನೀರು ಪಡೆಯಬೇಕಿದೆ. ಇನ್ನೂ ಸಮುದ್ರ ಸ್ನಾನ ಮಾಡಿ ಇಲ್ಲಿರುವ ಸುಲಭ ಶೌಚಾಲಯ ಹಾಗೂ ಸ್ನಾನಗೃಹದಲ್ಲಿ ಸ್ನಾನಕ್ಕೆ ಬಂದರೆ ಪ್ರವಾಸಿಗರಿಗೆ ಉಪ್ಪು ನೀರು ದೊರೆಯುತ್ತಿದೆ. ರಾತ್ರಿಯಾದರೆ ಈ ಭಾಗದಲ್ಲಿ ಕತ್ತಲೆಯ ಕೂಪವಾಗಿದ್ದು, ಟಾರ್ಚ್ ಹಿಡಿದು ಅತ್ತಿತ್ತ ಅಲೆದಾಡುವ ಪರಿಸ್ಥಿತಿ ಇದೆ. ಕಳ್ಳರ ಭಯವು ಇದೆ. ಹೀಗೆ ಲಕ್ಷಾಂತರ ರುಪಾಯಿ ಆದಾಯ ಬಂದರೂ ಸೌಲಭ್ಯಗಳು ಮಾತ್ರ ಶೂನ್ಯವಾಗಿದೆ. ಪಾರ್ಕಿಂಗ್ ಟೆಂಡರ್ ಪಡೆದವರಿಗೆ ಸ್ವಚ್ಛತಾ ಸಿಬ್ಬಂದಿ ನೇಮಿಸುವಂತೆ ಈಗಾಗಲೇ ನೋಟಿಸ್ ನೀಡಲಾಗಿದೆ. ಈ ಬಗ್ಗೆ ಮತ್ತೊಮ್ಮೆ ಸೂಚಿಸಿ, ಕಡಲತೀರದಲ್ಲಿ ರಾಶಿ ಬಿದ್ದ ಕಸ ತೆಗೆಯಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೋಕರ್ಣ ಪಿಡಿಒ ವಿನಯಕುಮಾರ ಹೇಳಿದರು.