ಕಾವೇರಿ ನದಿ ದಡದಲ್ಲಿ ತ್ಯಾಜ್ಯ ರಾಶಿ

| Published : May 31 2025, 12:24 AM IST

ಸಾರಾಂಶ

ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ತ್ಯಾಜ್ಯಗಳನೆಲ್ಲ ಹಲವಾರು ವರ್ಷಗಳಿಂದ ತಂದು ಇಲ್ಲಿ ಸುರಿಯಲಾಗುತ್ತಿದ್ದು, ಇಡೀ ವಾತಾವರಣ ಕಲುಷಿತವಾಗಿದೆ. ಇದರಿಂದ ಸಾಂಕ್ರಾಮಿಕ ರೋಗದ ಭೀತಿ ಜನರಲ್ಲಿ ಮೂಡಿದೆ.

ಚೆರಿಯಪರಂಬುವಿನಲ್ಲಿ ಸಾಂಕ್ರಮಿಕ ರೋಗ ಭೀತಿ । ಕ್ರಮಕ್ಕೆ ಆಗ್ರಹ

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಚೆರಿಯಪರಂಬುವಿನ ಕಾವೇರಿ ನದಿ ದಡದಲ್ಲಿ ದಿನನಿತ್ಯ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದ್ದು, ಇದು ದುರ್ನಾತ ಬೀರುತ್ತಿರುವುದಲ್ಲದೆ ಮಾರಕ ರೋಗಗಳಿಗೂ ಕಾರಣವಾಗಿದೆ.ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ತ್ಯಾಜ್ಯಗಳನೆಲ್ಲ ಹಲವಾರು ವರ್ಷಗಳಿಂದ ತಂದು ಇಲ್ಲಿ ಸುರಿಯಲಾಗುತ್ತಿದ್ದು, ಇಡೀ ವಾತಾವರಣ ಕಲುಷಿತವಾಗಿದೆ. ಇದರಿಂದ ಸಾಂಕ್ರಾಮಿಕ ರೋಗದ ಭೀತಿ ಜನರಲ್ಲಿ ಮೂಡಿದೆ.ಇದೇ ಪರಿಸರದಲ್ಲಿ ಸುಮಾರು 150ಕ್ಕೂ ಅಧಿಕ ಕುಟುಂಬಗಳು ವಾಸಿಸುತಿದೆ. ಪಕ್ಕದಲ್ಲಿ ಕಾವೇರಿ ನದಿ ಹರಿಯುತ್ತಿದ್ದು, ನದಿಯ ದಡದಲ್ಲಿ ಪಟ್ಟಣದ ತ್ಯಾಜ್ಯಗಳನೆಲ್ಲ ತಂದು ಸುರಿಯಲಾಗುತ್ತಿದೆ.ಕಸ ವಿಲೇವಾರಿಗೆ ಸೂಕ್ತ ತಾಣ ಸಿಗುತ್ತಿಲ್ಲವೇ ಎಂದು ಪ್ರಶ್ನೆ ನಾಗರಿಕರನ್ನು ಕಾಡುತ್ತಿದೆ.ನದಿ ತಟದಲ್ಲಿ ತ್ಯಾಜ್ಯಗಳನ್ನು ಸುರಿಯುತ್ತಿರುವುದರಿಂದ ಜಾನುವಾರು, ನಾಯಿ, ಪಕ್ಷಿಗಳು ತಮ್ಮ ಆಹಾರವನ್ನು ಹುಡುಕುತ್ತಿರುವುದು ಸಾಮಾನ್ಯವಾಗಿದೆ.ಈಗ ಮಳೆ ಸುರಿಯುತ್ತಿದ್ದು, ಈ ತ್ಯಾಜ್ಯ ಹರಿದು ಕಾವೇರಿ ಒಡಲನ್ನು ಸೇರುತ್ತಿದೆ. ಇದೇ ನೀರನ್ನು ಶುದ್ಧೀಕರಿಸದೆ ನೇರವಾಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಸಾರ್ವಜನಿಕರಿಗೆ ಕುಡಿಯಲು ಸರಬರಾಜು ಮಾಡುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.ಸಂಬಂಧಪಟ್ಟವರು ಇದನ್ನು ಗಂಭೀರವಾಗಿ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಅತ್ಯವಶ್ಯಕ.

--------------------------

ಸ್ಥಳೀಯ ಪಂಚಾಯಿತಿ ಏನು ಮಾಡುತ್ತಿದೆ? ಕಾವೇರಿ ಹೊಳೆಗೆ ಇಲ್ಲಿನ ತ್ಯಾಜ್ಯದ ನೀರು ಸೇರುತ್ತಿದೆ. ಇಲ್ಲಿನ ಅಧಿಕಾರಿಗಳಿಗೆ ಕಣ್ಣು ಕಾಣಲ್ವಾ? ಆದಷ್ಟು ಬೇಗ ಇದನ್ನು ನಿಲ್ಲಿಸಿ, ಇಲ್ಲವಾದಲ್ಲಿ ಇಲ್ಲಿನ ನೀರನ್ನು ಅಧಿಕಾರಿಗಳಿಗೆ ಕುಡಿಸಬೇಕಾಗುತ್ತದೆ.। ರವಿಗೌಡ

ಅಧ್ಯಕ್ಷರು ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ