ಸಾರಾಂಶ
ವಿವೇಕನಗರದಲ್ಲಿ ಡೋಬಿಹಳ್ಳಕ್ಕೆ ಯಾವುದೇ ಅನಾಹುತಗಳು ನಡೆಯದಂತೆ ತಡೆಗೋಡೆ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಪಟ್ಟಣದ ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವೇಕನಗರದಲ್ಲಿ ಡೋಬಿಹಳ್ಳಕ್ಕೆ ಕೆಲ ಸಾರ್ವಜನಿಕರು ನಿತ್ಯವೂ ಕಸ ಸೇರಿದಂತೆ ವಿವಿಧ ತ್ಯಾಜ್ಯ ತಂದು ಎಸೆಯುತ್ತಿದ್ದು ಗ್ರಾಪಂ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಿವೇಕನಗರದಲ್ಲಿ ಡೋಬಿಹಳ್ಳಕ್ಕೆ ಯಾವುದೇ ಅನಾಹುತಗಳು ನಡೆಯಬಾರದು ಎಂದು ತಡೆಗೋಡೆ ನಿರ್ಮಿಸಿದ್ದು, ಅದೇ ಜಾಗದಲ್ಲಿ ಕೆಲ ಸಾರ್ವಜನಿಕರು ಪ್ರತೀ ದಿನ ಕಸ ತಂದು ಹಾಕುತ್ತಿದ್ದು, ಇದು ಡೋಬಿಹಳ್ಳಕ್ಕೆ ಸೇರ್ಪಡೆಗೊಳ್ಳುತ್ತಿದೆ. ಡೋಬಿಹಳ್ಳದ ನೀರು ಹರಿದು ಭದ್ರಾನದಿಗೆ ಹೋಗಲಿದ್ದು, ನೀರಿನೊಂದಿಗೆ ಇಲ್ಲಿ ಹಾಕಿದ ಕಸವೂ ಭದ್ರಾನದಿ ಒಡಲು ಸೇರುತ್ತಿದೆ. ಇದರಿಂದ ಭದ್ರಾನದಿ ಒಡಲು ಕಲುಷಿತಗೊಳ್ಳುತ್ತಿದೆ. ಕಸ ಹಾಕುವ ಜನರಿಗೆ ಕೆಲವು ಸಾರ್ವಜನಿಕರು ಕಸ ಹಾಕದಂತೆ ಎಚ್ಚರಿಸಿದರೂ ಸಹ ಯಾವುದೇ ರೀತಿ ಸ್ಪಂದಿಸದೆ ಮತ್ತೆ ತಮ್ಮದೇ ಚಾಳಿ ಮುಂದುವರೆಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.ಬಿ.ಕಣಬೂರು ಗ್ರಾಪಂನಿಂದ ವಾರಕ್ಕೆ ಎರಡು ದಿನ ಕಸದ ಟ್ರ್ಯಾಕ್ಟರ್ ಅನ್ನು ಎಲ್ಲಾ ವಾರ್ಡ್ ಗೆ ಕಳುಹಿಸುತ್ತಿದ್ದರೂ ಸಹ ಕೆಲವು ಸಾರ್ವಜನಿಕರು ಕಸವನ್ನು ವಾಹನಕ್ಕೆ ನೀಡದೆ ಅಲ್ಲಲ್ಲಿ ಎಸೆಯುತ್ತಿದ್ದಾರೆ. ಕೆಲವೆಡೆ ಕಸದ ತೊಟ್ಟಿಗಳನ್ನು ಇಟ್ಟಿದ್ದರೂ ಸಹ ಅಲ್ಲಿಗೂ ಸಹ ಕಸವನ್ನು ಸಾರ್ವಜನಿಕರು ಹಾಕುತ್ತಿಲ್ಲ. ಇದರಿಂದಾಗಿ ಪರಿಸರ ಮಾಲಿನ್ಯವಾಗುತ್ತಿದೆ. ಗ್ರಾಪಂನವರು ಕಟ್ಟುನಿಟ್ಟಾಗಿ ಮನೆಗಳ ಮಾಲೀಕರಿಗೆ ಸೂಚನೆ ನೀಡಿ ಕಸವನ್ನು ವಾಹನಕ್ಕೆ ನೀಡುವಂತೆ ನಿರ್ದೇಶನ ನೀಡಬೇಕು ಎನ್ನುತ್ತಾರೆ ಸ್ಥಳೀಯರು.-- ಕೋಟ್---ವಿವೇಕನಗರದಲ್ಲಿ ಕೆಲವರು ಡೋಬಿಹಳ್ಳಕ್ಕೆ ಪ್ಲಾಸ್ಟಿಕ್, ಗಾಜಿನ ಬಾಟಲಿ ಸೇರಿದಂತೆ ಹಲವು ತ್ಯಾಜ್ಯ ಹಾಕುತ್ತಿದ್ದು, ಇದರಿಂದ ನೀರಿನ ಮೂಲ ಕಲುಷಿತಗೊಳ್ಳುತ್ತಿದೆ. ಬಿ.ಕಣಬೂರು ಗ್ರಾಪಂನವರು ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ಕಸ ಹಾಕುವವರ ವಿರುದ್ಧ ಕ್ರಮಕೈಗೊಂಡು ದಂಡ ವಿಧಿಸಬೇಕಿದೆ.- ಅನ್ನಪೂರ್ಣಮ್ಮ, ಸ್ಥಳೀಯ ನಿವಾಸಿ.ವಿವೇಕನಗರದಲ್ಲಿ ಡೋಬಿಹಳ್ಳಕ್ಕೆ ಕಸ ಎಸೆದಿರುವ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗುವುದು. ಈಗಾಗಲೇ ಗ್ರಾಮಕ್ಕೆ ಕಸದ ವಾಹನ ತೆರಳುತ್ತಿದೆ. ಯಾರು ವಾಹನಕ್ಕೆ ಕಸ ನೀಡುತ್ತಿಲ್ಲ ಎಂದು ಸಹ ಪರಿಶೀಲಿಸಲಾಗುವುದು. ಕಸ ಎಸೆದು ಪರಿಸರ ಮಾಲಿನ್ಯ ಮಾಡುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು.
- ಕಾಶಪ್ಪ, ಬಿ.ಕಣಬೂರು ಗ್ರಾಪಂ ಪಿಡಿಒ.೧೨ಬಿಹೆಚ್‌ಆರ್ ೭:ಬಾಳೆಹೊನ್ನೂರಿನ ವಿವೇಕನಗರದಲ್ಲಿ ಡೋಬಿಹಳ್ಳಕ್ಕೆ ಕಸವನ್ನು ಎಸೆದು ಮಲಿನ ಮಾಡಿರುವುದು.