ಗರಿಗೆದರಿದ ಹರಪನಹಳ್ಳಿ ಪುರಸಭಾ ರಾಜಕೀಯ ಚಟುವಟಿಕೆ

| Published : Aug 07 2024, 01:04 AM IST

ಗರಿಗೆದರಿದ ಹರಪನಹಳ್ಳಿ ಪುರಸಭಾ ರಾಜಕೀಯ ಚಟುವಟಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ 27 ಪುರಸಭಾ ಸದಸ್ಯರ ಪೈಕಿ 12 ಮಹಿಳಾ ಸದಸ್ಯರು ಅರ್ಹರಾಗಿದ್ದಾರೆ.

ಬಿ.ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಕಳೆದ 15 ತಿಂಗಳಿನಿಂದ ಆಡಳಿತಾಧಿಕಾರಿಗಳ ಆಡಳಿತದಲ್ಲಿದ್ದ ಇಲ್ಲಿಯ ಪುರಸಭೆಗೆ ಕೊನೆಗೂ ರಾಜ್ಯ ಸರ್ಕಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ (ಎಸ್ಸಿ) ಮೀಸಲಾಗಿದೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ 27 ಪುರಸಭಾ ಸದಸ್ಯರ ಪೈಕಿ 12 ಮಹಿಳಾ ಸದಸ್ಯರು ಅರ್ಹರಾಗಿದ್ದಾರೆ. ಉಪಾಧ್ಯಕ್ಷ ಸ್ಥಾನದ ಎಸ್ಸಿ ಮೀಸಲಾತಿಯಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಮಾತ್ರ ಇಬ್ಬರು ಅರ್ಹತೆ ಪಡೆದಿದ್ದಾರೆ.

ಕಳೆದ ಮೂರೂವರೆ ವರ್ಷಗಳ ಹಿಂದೆ ಪುರಸಭೆಯ 27 ವಾರ್ಡ್‌ಗಳಿಗೆ ಚುನಾವಣೆ ನಡೆದಾಗ ಕಾಂಗ್ರೆಸ್‌ -14, ಬಿಜೆಪಿ -10, ಜೆಡಿಎಸ್‌ -1 ಹಾಗೂ ಪಕ್ಷೇತರರು -2 ಹೀಗೆ ಸ್ಥಾನಗಳು ಲಭಿಸಿದ್ದವು.

ಇಬ್ಬರು ಪಕ್ಷೇತರರು ಹಾಗೂ ಒಬ್ಬ ಜೆಡಿಎಸ್‌ ಸದಸ್ಯರು ಕಾಂಗ್ರೆಸ್‌ ಬೆಂಬಲಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸದಸ್ಯರ ಸಂಖ್ಯೆ 17ಕ್ಕೆ ಏರಿಕೆಯಾಗಿತ್ತು. ಅಂದಿನ ಸಂಸದ, ಶಾಸಕರು ಸೇರಿ ಬಿಜೆಪಿ ಸದಸ್ಯರ ಸಂಖ್ಯೆ 12 ಆಗಿದ್ದವು.

ಬಿಜೆಪಿಗಿಂತ 5 ಸದಸ್ಯರು ಹೆಚ್ಚಿಗೆ ಇದ್ದರೂ ಕಾಂಗ್ರೆಸ್‌ನಲ್ಲಿನ ಬಣ ರಾಜಕೀಯ, ಭಿನ್ನಮತದಿಂದ ಬಿಜೆಪಿಯ ಮಂಜುನಾಥ ಇಜಂತಕರ್‌ ಅಧ್ಯಕ್ಷರಾಗಿ ಆಯ್ಕೆಯಾಗಿ 18 ತಿಂಗಳು ಸೇವೆ ಸಲ್ಲಿಸಿ ರಾಜೀನಾಮೆ ನೀಡಿದ್ದರು.

ನಂತರ ಪುನಃ ಕಾಂಗ್ರೆಸ್‌ ಪಕ್ಷದಲ್ಲಿ ಭಿನ್ನಮತ ಸರಿಹೋಗದ ಹಿನ್ನೆಲೆಯಲ್ಲಿ ಬಿಜೆಪಿಯ ಹರಾಳು ಅಶೋಕ ಅಧ್ಯಕ್ಷರಾಗಿ ಆಯ್ಕೆಯಾಗಿ 10 ತಿಂಗಳು ಸೇವೆ ಸಲ್ಲಿಸಿದ ನಂತರ ಮೊದಲಿನ ಮೀಸಲಾತಿಯ ಎರಡೂವರೆ ವರ್ಷದ ಅವಧಿ ಪೂರ್ಣಗೊಂಡು ಆಡಳಿತಾಧಿಕಾರಿಗಳ ನೇಮಕವಾಗಿತ್ತು.

ಆಡಳಿತಾಧಿಕಾರಿಗಳ ನೇಮಕವಾಗಿ 15 ತಿಂಗಳ ನಂತರ ಪುನಃ ಎರಡನೇ ಅವಧಿಗೆ ಸರ್ಕಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಸಾಮಾನ್ಯ ಮಹಿಳೆ ಹಾಗೂ ಎಸ್ಸಿ ಮೀಸಲಾತಿ ಪ್ರಕಟಿಸಿದೆ.

ಸಾಮಾನ್ಯ ಸಭೆಗಳಿಲ್ಲದೆ ಅಲ್ಲಲ್ಲಿ ಕುಳಿತು ಕಾಲಹರಣ ಮಾಡುತ್ತಿದ್ದ ಪುರಸಭಾ ಸದಸ್ಯರು ಮೀಸಲಾತಿ ಪ್ರಕಟವಾದ ಕೂಡಲೇ ಚುರುಕಾಗಿದ್ದು ರಾಜಕೀಯ ಚಟುವಟಿಕೆ ಗರಿಗೆದರಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಇತರ ಸದಸ್ಯರ, ಮುಖಂಡರ ಮನೆಬಾಗಿಲಿಗೆ ಎಡತಾಕುತ್ತಿದ್ದಾರೆ.

ಒಂದು ವರ್ಷದಲ್ಲಿ ಬದಲಾದ ರಾಜಕೀಯ ಹಿನ್ನೆಲೆಯಲ್ಲಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ, ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ಮತಗಳು ಸೇರಿ ಕಾಂಗ್ರೆಸ್ ಪಕ್ಷಕ್ಕೆ 19 ಮತಗಳಾಗಲಿವೆ. ಬಿಜೆಪಿಯವು 10 ಮತಗಳಿವೆ.

ಆದರೆ ಪುರಸಭೆಯ ಸದಸ್ಯರ ಅವಧಿ ಇನ್ನು ಕೇವಲ 15 ತಿಂಗಳು ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಇಲ್ಲ ಅಧ್ಯಕ್ಷ ಉಪಾದ್ಯಕ್ಷರ ಆಯ್ಕೆ ನಂತರ 30 ತಿಂಗಳು ಎಂದು ಹೇಳುತ್ತಾರೆ. ಅಧಿಕಾರಿಗಳಿಗೆ ಈ ಕುರಿತು ಸರಿಯಾದ ಸ್ಪಷ್ಟತೆ ಇಲ್ಲ.

ಸಾಕಷ್ಟು ಬಹುಮತ ಇರುವ ಕಾಂಗ್ರೆಸ್‌ ಪಕ್ಷದಲ್ಲಿ ಸಾಮಾನ್ಯ ಮಹಿಳೆಯರು ಎಂಟು ಜನರು ಅಧ್ಯಕ್ಷ ಸ್ಥಾನಕ್ಕೆ ಅರ್ಹರಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಮೂರನೇ ವಾರ್ಡಿನ ಶೋಭಾ, 21ನೇ ವಾರ್ಡಿನ ಎಚ್‌.ಕೊಟ್ರೇಶ ಮಾತ್ರ ಕಾಂಗ್ರೆಸ್‌ ಪಕ್ಷದಲ್ಲಿ ಅರ್ಹರಿದ್ದಾರೆ. ಇದೀಗ ಮೀಸಲಾತಿ ಪ್ರಕಟವಾಗಿದೆ, ಶೀಘ್ರದಲ್ಲಿ ಚುನಾವಣೆ ದಿನಾಂಕ ನಿಗದಿಯಾಗಲಿದೆ.

15 ತಿಂಗಳು ಆಡಳಿತಾಧಿಕಾರಿಗಳ ಆಡಳಿತವಿತ್ತು. ನಾವು ಇದ್ದೂ ಇಲ್ಲದಂತೆ ಇದ್ದೆವು. ಒಂದೂ ಸಭೆ ನಡೆದಿಲ್ಲ. ಇದೀಗ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದೆ. ಶಾಸಕರ, ಕಾಂಗ್ರೆಸ್ಸಿನ ಎಲ್ಲರ ವಿಶ್ವಾಸ ಪಡೆದು ಈ ಬಾರಿ ಪಕ್ಷವನ್ನು ಪುರಸಭೆಯಲ್ಲಿ ಆಡಳಿತಕ್ಕೆ ತರುತ್ತೇವೆ. ನಮಗೆ ಇಲ್ಲಿಂದ ಎರಡೂವರೆ ವರ್ಷ ಅವಧಿ ಸಿಗಬೇಕು. ಇಲ್ಲದಿದ್ದರೆ ಕೋರ್ಟ್ ಮೊರೆ ಹೋಗುತ್ತೇವೆ ಎನ್ನುತ್ತಾರೆ ಹರಪನಹಳ್ಳಿ ಪುರಸಭಾ ಸದಸ್ಯ ಎಂ.ವಿ. ಅಂಜಿನಪ್ಪ.