ಸಾರಾಂಶ
ಹರಪನಹಳ್ಳಿ: ಲೋಕಸಭಾ ಚುನಾವಣೆ ದಿನಾಂಕ ಪ್ರಕಟಗೊಂಡು ಎಲ್ಲೆಡೆ ಚುನಾವಣಾ ಪ್ರಚಾರ ಜೋರಿದೆ. ಆದರೆ ಹರಪನಹಳ್ಳಿ ತಾಲೂಕಿನಲ್ಲಿ ಬಿಸಿಲಿನ ಕಾವು ಹೆಚ್ಚಾಗುತ್ತಲಿದೆ ಹೊರತು ಚುನಾವಣಾ ಕಾವು ಹೆಚ್ಚುತ್ತಿಲ್ಲ.ಜನರು ಚುನಾವಣಾ ಸುದ್ದಿಗಿಂತ ಬಿಸಿಲಿನ ತಾಪದ ಕುರಿತು ಮಾತನಾಡುತ್ತಾ ಮಳೆ ಬರಬೇಕು ಎಂದು ಗೊಣಗುತ್ತಾರೆ. ಕಲ್ಲಂಗಡಿ ಹಣ್ಣು, ಎಳನೀರು, ಮಜ್ಜಿಗೆ ತಂಪು ಪಾನೀಯಗಳಿಗೆ ಮೊರೆ ಹೋಗಿದ್ದಾರೆ.
ಹರಪನಹಳ್ಳಿ ಪಟ್ಟಣದಲ್ಲಿ ಗುರುವಾರ ಮಧ್ಯಾಹ್ನ 39 -40 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪ ಇತ್ತು. ಇದರಿಂದ ಜನರು ಹೊರಗೆ ಬಾರದೇ ರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದವು.ಚುರುಕುಗೊಳ್ಳದ ಚುನಾವಣಾ ಚಟುವಟಿಕೆ: ಈ ಹಿಂದೆ ಬಿಜೆಪಿಯವರು ಗೊಂದಲದ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಮಾಡಿದ ನಂತರ ಕಾಂಗ್ರೆಸ್ ಕಾರ್ಯಕರ್ತರ ಸಭೆ ಜರುಗಿತು. ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜಿ.ಕರುಣಾಕರರೆಡ್ಡಿ ಹಾಗೂ ಅವರ ಬೆಂಬಲಿಗರು ಪಾಲ್ಗೊಳ್ಳದೇ ಇದ್ದುದು, ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಹಾಗೂ ಅವರ ಬೆಂಬಲಿಗರು ಪಾಲ್ಗೊಳ್ಳದೇ ಇರುವುದು ಎರಡೂ ಪಕ್ಷದಲ್ಲಿ ಸ್ವಲ್ಪ ಮಟ್ಟಿನ ಗೊಂದಲ ಕಂಡು ಬಂದಿತ್ತು.
ಮಾಜಿ ಶಾಸಕ ಜಿ.ಕರುಣಾಕರ ರೆಡ್ಡಿ ಬಿಜೆಪಿ ಅಭ್ಯರ್ಥಿ ಪರ ಇನ್ನು ಚುನಾವಣಾ ಪ್ರಚಾರಕ್ಕೆ ಇಳಿದಿಲ್ಲ. ಅವರ ನಿಲುವು ಇನ್ನೂ ಸ್ಪಷ್ಟವಾಗಿಲ್ಲ.ಈಚೆಗೆ ಕಾಶಿಮಠದ ಆವರಣದಲ್ಲಿ ಬಿಜೆಪಿ ಎಸ್ಸಿ, ಎಸ್ಟಿ ಕಾರ್ಯಕರ್ತರ ಸಭೆ ಜರುಗಿದ್ದರೆ, ಪಟ್ಟಣದ ಆಚಾರ ಬಡಾವಣೆಯ ಪಿ.ಟಿ. ಪರಮೇಶ್ವರನಾಯ್ಕ ಅವರ ನಿವಾಸದಲ್ಲಿ ಅವರ ಬೆಂಬಲಿಗರು, ಕಾರ್ಯಕರ್ತರು ಸಭೆ ನಡೆಸಿ ಸಮಾಲೋಚನೆ ನಡೆಸಿದ್ದಾರೆ.
ದಾವಣಗೆರೆಯ ಬೇರೆ ಕಡೆ ಹಳ್ಳಿ ಹಳ್ಳಿಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಮತ ಬೇಟೆ ಆರಂಭಿಸಿದ್ದರೆ ಹರಪನಹಳ್ಳಿಯಲ್ಲಿ ಎರಡೂ ಪಕ್ಷದವರು ಒಂದೊಂದು ಸಭೆ ಮಾಡಿದ್ದು ಬಿಟ್ಟರೆ ಮತ್ತೇನು ನಡೆದಿಲ್ಲ.ಕಾಂಗ್ರೆಸ್ ಪಕ್ಷದ ಟಿಕೆಟ್ ವಂಚಿತ ಜಿ.ಬಿ. ವಿನಯಕುಮಾರ ತಾಲೂಕಿನ ಕೆಲವೊಂದು ಗ್ರಾಮಗಳಲ್ಲಿ ಸಂಚರಿಸಿ ಟಿಕೆಟ್ ಸಿಗದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ಮಾತ್ರ ಚುನಾವಣಾ ಆಯೋಗದವರು ವಹಿಸಿದ ಕೆಲಸ, ಕಾರ್ಯಗಳಾದ ಮತದಾನ ಜಾಗೃತಿ , ಸಖಿ ಮತಗಟ್ಟೆ ಗುರುತಿಸುವುದು ಸೇರಿದಂತೆ ಮುಂತಾದ ಕಾರ್ಯಕ್ರಮಗಳನ್ನು ಮಾಡುತ್ತಾ ಸಾಗಿದ್ದಾರೆ.ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಸಾವಿರಾರು ಜನರನ್ನು ಸೇರಿಸಿ ಈಗಾಗಲೇ ಒಂದು ಕಾರ್ಯಕ್ರಮ ಮಾಡಿದ್ದೇವೆ. ಶೀಘ್ರ ಅಭ್ಯರ್ಥಿ ಕರೆಸಿಕೊಂಡು ಗ್ರಾಪಂವಾರು ಪ್ರಚಾರ ಕಾರ್ಯವನ್ನು ಶಾಸಕರ ನೇತೃತ್ವದಲ್ಲಿ ಹಮ್ಮಿಕೊಳ್ಳುತ್ತೇವೆ ಎನ್ನುತ್ತಾರೆ ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ.
ಬಿಜೆಪಿ ಎಸ್ಸಿ, ಎಸ್ಟಿ ಮೋರ್ಚಾ ಸಭೆ ಮಾಡಿದ್ದೇವೆ, ಅಭ್ಯರ್ಥಿ ದಿನಾಂಕ ಕೊಟ್ಟ ಕೂಡಲೇ ಗ್ರಾಪಂವಾರು ಪ್ರಚಾರ ಕಾರ್ಯ ಹಮ್ಮಿಕೊಳ್ಳುತ್ತೇವೆ, ನಮಗೆ ಉತ್ತಮ ವಾತಾವರಣವಿದೆ ಎನ್ನುತ್ತಾರೆ ಮಂಡಲ ಅಧ್ಯಕ್ಷ ಹರಪನಹಳ್ಳಿ ಕೆ.ಲಕ್ಷ್ಮಣ.