ಕೇಂದ್ರ ಸರ್ಕಾರವು 2026ರ ಜೂನ್ 29ರಿಂದ ಜಾರಿಗೆ ಬರುವಂತೆ ಹೊಸ ಇಪಿಎಫ್ ಯೋಜನೆ ಜಾರಿಗೆ ತಂದಿದೆ. ಇದನ್ನು ವಿರೋಧಿಸಿ ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗಾರ್ಮೆಂಟ್ಸ್ ನೌಕರರು ಪ್ರತಿಭಟನೆ ನಡೆಸಿದ್ದಾರೆ.
ಧಾರವಾಡ:
ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ಇಪಿಎಫ್ ಯೋಜನೆ ವಿರೋಧಿಸಿ ರಾಯಾಪುರದ ಶಾಹಿ ಎಕ್ಸ್‌ಪೋರ್ಟ್ ಗಾರ್ಮೆಂಟ್ಸ್‌ನ ಸಾವಿರಾರು ಮಹಿಳಾ ನೌಕರರು ಗುರುವಾರ ಏಕಾಏಕಿ ಹು-ಧಾ ರಸ್ತೆ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಿದರು.ಕೇಂದ್ರ ಸರ್ಕಾರವು 2026ರ ಜೂನ್ 29ರಿಂದ ಜಾರಿಗೆ ಬರುವಂತೆ ಹೊಸ ಇಪಿಎಫ್ ಯೋಜನೆ ಜಾರಿಗೆ ತಂದಿದೆ. ಇದನ್ನು ವಿರೋಧಿಸಿ ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗಾರ್ಮೆಂಟ್ಸ್ ನೌಕರರು ಪ್ರತಿಭಟನೆ ನಡೆಸಿದ್ದಾರೆ. ಅಂತೆಯೇ, ಧಾರವಾಡದಲ್ಲೂ ದೊಡ್ಡ ಮಟ್ಟದ ಪ್ರತಿಭಟನೆ ನಡೆಯಿತು. ಬೇಡಿಕೆ ಈಡೇರುವ ವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಮಹಿಳಾ ನೌಕರರು ಪಟ್ಟು ಹಿಡಿದರು. ರಸ್ತೆಯಲ್ಲಿಯೇ ಕುಳಿತ ಪರಿಣಾಮ ರಸ್ತೆ ಬಂದ್ ಆಗಿ ಪ್ರಯಾಣಿಕರಿಗೆ ತೀವ್ರ ಸಮಸ್ಯೆಯಾಯಿತು.
ಬೆಳಗ್ಗೆ 9.30ರಿಂದ ಮಧ್ಯಾಹ್ನ 2ರ ವರೆಗೆ ನಡೆದ ಪ್ರತಿಭಟನೆಯಿಂದ ಹುಬ್ಬಳ್ಳಿಯಿಂದ ಧಾರವಾಡ ಹೋಗುವ ರಸ್ತೆ ಸಂಪೂರ್ಣ ಬಂದ್ ಆಗಿ ತೀವ್ರ ಟ್ರಾಫಿಕ್ ಸಮಸ್ಯೆ ಉಂಟಾಯಿತು. ವಿದ್ಯಾಗಿರಿ ಠಾಣೆ ಪೊಲೀಸರು ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳ ಸಮಾಧಾನಕ್ಕೆ ಒಪ್ಪದ ಮಹಿಳಾ ನೌಕರರು ರಸ್ತೆ ಬಿಟ್ಟು ಏಳಲಿಲ್ಲ. ನಂತರ ಸ್ಥಳಕ್ಕೆ ಪೊಲೀಸ್ ಆಯುಕ್ತ ಭೂಷಣ ಬೋರಸೆ, ಹೆಚ್ಚುವರಿ ಜಿಲ್ಲಾಧಿಕಾರಿ, ಸಹಾಯಕ ಕಾರ್ಮಿಕ ಅಧಿಕಾರಿಗಳು ಬಂದು ತಮ್ಮ ಬೇಡಿಕೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಕುರಿತು ಮನವರಿಕೆ ಮಾಡಿದ ನಂತರ ಮಹಿಳಾ ಕಾರ್ಮಿಕರು ತಮ್ಮ ಕಾರ್ಯಕ್ಕೆ ತೆರಳಿದರು.ಮಹಿಳಾ ನೌಕರರಾದ ರತ್ನಾ ಉಮಚಿಗಿ, ನೀಲಮ್ಮ ಚಾವರದ, ರಾಧಿಕಾ ಸುರೇಬಾನ್, ಕುಸುಮಾ ಮಡಿವಾಳರ, ಭಾರತಿ ಗೊಲ್ಲರ, ಶಬೀನಾ ತಮ್ಮ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಎದುರು ಹೇಳಿಕೊಂಡರು.