ಬೆಳ್ಳೂರು ಕ್ರಾಸ್ ನಲ್ಲಿ ಶೀಘ್ರ ಗಾರ್ಮೆಂಟ್ಸ್ ಫ್ಯಾಕ್ಟರಿ ಆರಂಭ

| Published : Oct 11 2023, 12:45 AM IST

ಸಾರಾಂಶ

ಯುವ ಜನರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಶೀಘ್ರದಲ್ಲಿಯೇ ಬೆಳ್ಳೂರು ಕ್ರಾಸ್‌ನಲ್ಲಿ ಒಂದು ಗಾರ್ಮೆಂಟ್ಸ್ ಫ್ಯಾಕ್ಟರಿ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ನಾಗಮಂಗಲ: ಕ್ಷೇತ್ರದ ಯುವ ಜನರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಶೀಘ್ರದಲ್ಲಿಯೇ ಬೆಳ್ಳೂರು ಕ್ರಾಸ್‌ನಲ್ಲಿ ಒಂದು ಗಾರ್ಮೆಂಟ್ಸ್ ಫ್ಯಾಕ್ಟರಿ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ತಾಲೂಕಿನ ಬೆಳ್ಳೂರಿನಲ್ಲಿ ಎಂಡಿಸಿಸಿ ಬ್ಯಾಂಕ್ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ 63 ಸ್ವಸಹಾಯ ಗುಂಪುಗಳಿಗೆ 3.58 ಕೋಟಿ ರು.ಗಳ ಬಡ್ಡಿರಹಿತ ಸಾಲ ಮಂಜೂರಾತಿ ಪತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮೊದಲು ಬೆಳ್ಳೂರು ಕ್ರಾಸ್ ನಂತರ ಮಂಡ್ಯ, ಕೊಪ್ಪ ಮತ್ತು ದೇವಲಾಪುರ ಹ್ಯಾಂಡ್‌ಪೋಸ್ಟ್‌ನಲ್ಲಿ ಒಂದೊಂದು ಗಾರ್ಮೆಂಟ್ಸ್ ಫ್ಯಾಕ್ಟರಿ ಆರಂಭಿಸುವ ಮೂಲಕ ಕ್ಷೇತ್ರದ ಯುವ ಜನರಿಗೆ ಉದ್ಯೋಗ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು. ತಾಲೂಕಿನ 17 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ಸಾಲ ಸೌಲಭ್ಯ ಒದಗಿಸಲು ಈ ಹಿಂದೆ ಎಂಡಿಸಿಸಿ ಬ್ಯಾಂಕ್‌ನಿಂದ 2 ರಿಂದ 3ಕೋಟಿ ರು. ಮಾತ್ರ ಸಾಲ ಸೌಲಭ್ಯ ಸಿಗುತ್ತಿತ್ತು. ಆದರೆ, ಕೃಷಿ ಪತ್ತಿನ ಸಹಕಾರ ಸಂಘಗಳ ವ್ಯಾಪ್ತಿಯ ಸ್ವ ಸಹಾಯ ಸಂಘಗಳು ಮತ್ತು ರೈತರ ಕೃಷಿ ಚಟುವಟಿಕೆ ಉದ್ದೇಶಕ್ಕಾಗಿ ಎಂಡಿಸಿಸಿ ಬ್ಯಾಂಕ್‌ನಿಂದ 134 ಕೋಟಿ ರು. ಸಾಲ ಸಿಗುತ್ತಿದೆ. ಇದರಲ್ಲಿ 80 ರಿಂದ 90 ಪ್ರತಿಶತ ಬಡ್ಡಿರಹಿತ ಸಾಲವಾಗಿದೆ. 5 ಲಕ್ಷ ರು. ಮೇಲ್ಪಟ್ಟು ಸಾಲ ಪಡೆದವರಿಗೆ ಮಾತ್ರ ಬಡ್ಡಿ ವಿಧಿಸಲಾಗುವುದು. ಈ ಯೋಜನೆಯನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಚುನಾವಣೆಯಲ್ಲಿ ಸ್ವಸಹಾಯ ಸಂಘದ ಎಲ್ಲ ಸದಸ್ಯರೂ ನಮಗೆ ಮತ ಕೊಟ್ಟಿರುವುದಿಲ್ಲ. ಆದರೂ ಸಹ ಯೋಜನೆಯ ಲಾಭ ಎಲ್ಲರಿಗೂ ಸಿಗಬೇಕು ಮತ್ತು ನಮಗೆ ಅವಕಾಶ ಸಿಕ್ಕಾಗ ಜನರಿಗೆ ಅನುಕೂಲ ಮಾಡಬೇಕೆಂಬ ಉದ್ದೇಶದಿಂದ ಯಾರನ್ನೂ ವಿಂಗಡಿಸದೆ ಪ್ರತಿ ಸಂಘಕ್ಕೂ ಬಡ್ಡಿರಹಿತ ಸಾಲ ನೀಡಬೇಕೆಂದು ಎಂಡಿಸಿಸಿ ಬ್ಯಾಂಕ್ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯವರಿಗೆ ನಿರ್ದೇಶನ ನೀಡಿದ್ದೇನೆ ಎಂದು ಹೇಳಿದರು. ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು: ತಾಲೂಕಿನ ಆದಿಚುಂಚನಗಿರಿ ಸೇರಿದಂತೆ 128 ಹಳ್ಳಿಗಳಿಗೆ ಮಾರ್ಕೋನಹಳ್ಳಿ ಜಲಾಶಯದಿಂದ ಪೂರೈಕೆ ಮಾಡುವ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸುವ ಜೊತೆಗೆ, ಮುಂದಿನ ಎರಡು ವರ್ಷದಲ್ಲಿ ತಾಲೂಕಿನ ಇನ್ನುಳಿದ ಎಲ್ಲ ಗ್ರಾಮಗಳ ಪ್ರತಿ ಮನೆಗೂ ಕೊಳಾಯಿ ಮೂಲಕ ನೀರು ಪೂರೈಸಲು ಅಗತ್ಯ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ಚಲುವರಾಯಸ್ವಾಮಿ ಪತ್ನಿ ಧನಲಕ್ಷ್ಮಿ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ನಿರ್ದೇಶಕ ಕೆ.ವಿ.ದಿನೇಶ್, ಬೆಳ್ಳೂರು ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಮ್ಮದ್ ಯಾಸೀನ್ ಮಾತನಾಡಿದರು. ವೇದಿಕೆಯಲ್ಲಿ ಸ್ವಸಹಾಯ ಗುಂಪುಗಳಿಗೆ ಬಡ್ಡಿರಹಿತ ಸಾಲ ಮಂಜೂರಾತಿ ಪತ್ರಗಳನ್ನು ವಿತರಣೆ ಮಾಡಲಾಯಿತು. ಸಮಾರಂಭದಲ್ಲಿ ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಚ್.ಎಸ್.ನರಸಿಂಹಯ್ಯ, ಕೆ.ಎ.ಚಂದ್ರಶೇಖರ್, ಎಸ್‌ಎಲ್‌ಡಿಬಿ ನಿರ್ದೇಶಕ ತಿಮ್ಮರಾಯಿಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮಾಜಿ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ಆರ್,ಕೃಷ್ಣೇಗೌಡ, ಅಲ್ಪಹಳ್ಳಿ ಡಿ.ಕೃಷ್ಣೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಸಿ.ಚೇತನ್‌ಕುಮಾರ್, ಮಹಿಳಾ ಕಾಂಗ್ರೆಸ್ ಮುಖಂಡೆ ಯಶೋದಮ್ಮ, ಸಿಡಿಪಿಓ ಕೃಷ್ಣಮೂರ್ತಿ, ಎಂಡಿಸಿಸಿ ಬ್ಯಾಂಕ್ ಅಧಿಕಾರಿ ಎಂ.ಡಿ.ವನಜಾಕ್ಷಿ, ಮೇಲ್ವಿಚಾರಕರಾದ ಪಿ.ಜೆ.ಜೈಪ್ರಕಾಶ್, ಇ.ಎನ್.ಪ್ರಕಾಶ್, ಎನ್.ಚಂದ್ರಶೇಖರ್, ೧೭ಸಂಘಗಳ ಸಿಇಓಗಳು ಸೇರಿದಂತೆ ಎರಡು ಸಾವಿರಕ್ಕೂ ಅಧಿಕ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು ಇದ್ದರು.