ಸಾರಾಂಶ
-ನಗದಿಯಾತ್ ಕೈಗಾರಿಕ ಪ್ರದೇಶಕ್ಕೆ ಭೇಟಿ ನೀಡಿ ಗಾರ್ಮೆಂಟ್ ಫ್ಯಾಕ್ಟರಿಯ ಸ್ಥಳ ಪರಿಶೀಲಿಸಿದ ಶಾಸಕ ಕೆ.ಎಸ್.ಆನಂದ್
-----ಕನ್ನಡಪ್ರಭವಾರ್ತೆ ಕಡೂರು
ಕಡೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಗದಿಯಾತ್ ಕಾವಲು ಕೈಗಾರಿಕಾ ಪ್ರದೇಶದಲ್ಲಿ ಆರಂಭವಾಗಲಿರುವ ಗಾರ್ಮೆಂಟ್ಸ್ ಫ್ಯಾಕ್ಟರಿ ಕಡೂರಿನ ನಿರುದ್ಯೋಗ ಸಮಸ್ಯೆಯ ಪರಿಹಾರದ ನಿಟ್ಟಿನಲ್ಲಿ ಗಣನೀಯ ಪಾತ್ರ ವಹಿಸಲಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಕಡೂರಿನ ನಗದಿಯಾತ್ ಕಾವಲಿನ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಹೊರವಲಯದಲ್ಲಿರುವ ನಗದಿಯಾತ್ ಕಾವಲಿನಲ್ಲಿ 263 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಯಾಗುತ್ತಿದೆ. ಈಗಾಗಲೇ ಹಲವಾರು ಕೈಗಾರಿಕೆಗಳಿಗೆ ನಿಯಮಾನುಸಾರ ಹಂಚಿಕೆ ಮಾಡಲಾಗುತ್ತಿದೆ. ಈ ಕೈಗಾರಿಕಾ ಪ್ರದೇಶದಲ್ಲಿ ವಿವಿಧ ಕೈಗಾರಿಕೆಗಳು ಆರಂಭವಾಗುವ ಮೂಲಕ ಕಡೂರು ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದರು.ನಮ್ಮ ಕ್ಷೇತ್ರದಲ್ಲಿನ ಜ್ವಲಂತ ಸಮಸ್ಯೆಗಳಲ್ಲಿ ನಿರುದ್ಯೋಗವೂ ಒಂದಾಗಿತ್ತು. ನಿರುದ್ಯೋಗ ಸಮಸ್ಯೆ ಪರಿಹರಿಸುವಲ್ಲಿ ಆದ್ಯತೆ ನೀಡುತ್ತೇನೆಂದು ವಿಧಾನಸಭಾ ಚುನಾವಣಾ ಪೂರ್ವದಲ್ಲೆ ಪ್ರಚಾರದ ವೇಳೆಯಲ್ಲಿ ಜನತೆಗೆ ಮಾತು ಕೊಟ್ಟಿದ್ದೆ. ಆ ನಿಟ್ಟಿನಲ್ಲಿ ಶಾಸಕನಾದ ಕೂಡಲೇ ಬೆಂಗಳೂರಿನಲ್ಲಿ ಹಲವಾರು ಗಾಮೇಂಟ್ಸ್ ಕಾರ್ಖಾನೆಗಳಿಗೆ ಭೇಟಿ ನೀಡಿದೆ. ಬೆಂಗಳೂರಿನ ಪ್ರತಿಷ್ಠಿತ ಮ್ಯಾಪ್ ಗಾರ್ಮೆಂಟ್ಸ್ ಸಂಸ್ಥೆಯೊಡನೆ ಮಾತನಾಡಿದಾಗ ಅವರು ಕಡೂರಿನಲ್ಲಿ ಗಾಮೆರ್ಂಟ್ಸ್ ಆರಂಭಕ್ಕೆ ಒಲವು ತೋರಿದರು. ಈ ಕುರಿತು ಮುಖ್ಯಮಂತ್ರಿಗಳ ಸಹಕಾರ ಪಡೆದು ಜೊತೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಸಿಂಗ್ ಕಟಾರಿಯಾ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರ ಫಲವಾಗಿ ಆ ಸಂಸ್ಥೆಗೆ 11 ಕೋಟಿ ಕಟ್ಟಿಸಿ 20 ಎಕರೆ ಜಾಗ ಮಂಜೂರಾಗಿದೆ. ದೊಡ್ಡ ಪ್ರಮಾಣದ ಗಾಮೆರ್ಂಟ್ಸ್ ತಲೆಯೆತ್ತಲಿದೆ. 5ಸಾವಿರ ಉದ್ಯೋಗ ಸ್ಥಳೀಯವಾಗಿ ಮಹಿಳೆಯರಿಗೆ ದೊರೆಯಲಿದೆ. ಬಯಲು ಭಾಗದ ಮಹಿಳೆಯರು ಉದ್ಯೋಗ ಅರಸಿ ಬೇರೆಡೆಗೆ ಹೋಗುವುದು ಗಣನೀಯ ಕಡಿಮೆಯಾಗಲಿದೆ. ಸದ್ಯದಲ್ಲಿಯೇ ಗಾರ್ಮೆಂಟ್ಸ್ ಕಾರ್ಖಾನೆಯ ಭೂಮಿ ಪೂಜೆ ನೆರವೇರಲಿದೆ ಎಂದರು.
ಚುನಾವಣಾ ಪೂರ್ವದಲ್ಲಿ ಮಹಿಳೆಯರಿಗೆ ಮತ್ತು ಯುವಕರಿಗೆ ಉದ್ಯೋಗ ದೊರಕಿಸುವುದಕ್ಕೆ ಆದ್ಯತೆ ನೀಡುತ್ತೇನೆ ಎಂಬ ಮಾತು ಉಳಿಸಿಕೊಂಡ ತೃಪ್ತಿ ದೊರೆತಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಚೆಕ್ ಪೋಸ್ಟ್ ರವಿ, ಪಿಎಸ್‍ಐ ಪವನ್ ಕುಮಾರ್, ಪ್ರಕಾಶ್, ಮಂಜುನಾಥ್ ಇದ್ದರು.
-----ಫೋಟೊ: ಕಡೂರು ಶಾಸಕ ಕೆ.ಎಸ್.ಆನಂದ್ ನಗದೀಯತ್ ಕೈಗಾರಿಕ ಪ್ರದೇಶಕ್ಕೆ ಭೇಟಿ ನೀಡಿ ಗಾರ್ಮೆಂಟ್ ಫ್ಯಾಕ್ಟರಿಯ ಸ್ಥಳ ಪರಿಶೀಲಿಸಿದರು.
15ಕೆಡಿಆರ್2