ಸುವರ್ಣಗಿರಿ ವೈಭವ ನೆನಪಿಸುವ ಗರುಡೋತ್ಸವ

| Published : Apr 01 2024, 12:53 AM IST

ಸುವರ್ಣಗಿರಿ ವೈಭವ ನೆನಪಿಸುವ ಗರುಡೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ತಿರುಪತಿ ಮಾದರಿಯಲ್ಲಿ ಪಟ್ಟಣದ ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿ ಜಾತ್ರೆ ನಡೆಯುತ್ತಿದ್ದು, ಭಾನುವಾರ ಬೆಳಗಿನ ಜಾವ ಕಲ್ಯಾಣದ ನಂತರ ಗರುಡೋತ್ಸವ ಮೆರವಣಿಗೆ ವೈಭವದಿಂದ ನೆರವೇರಿತು.

ತಿರುಪತಿ ಮಾದರಿಯಲ್ಲಿ ನಡೆಯುತ್ತಿರುವ ಕನಕಗಿರಿ ಜಾತ್ರೆ

ಕನ್ನಡಪ್ರಭ ವಾರ್ತೆ ಕನಕಗಿರಿ

ತಿರುಪತಿ ಮಾದರಿಯಲ್ಲಿ ಪಟ್ಟಣದ ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿ ಜಾತ್ರೆ ನಡೆಯುತ್ತಿದ್ದು, ಭಾನುವಾರ ಬೆಳಗಿನ ಜಾವ ಕಲ್ಯಾಣದ ನಂತರ ಗರುಡೋತ್ಸವ ಮೆರವಣಿಗೆ ವೈಭವದಿಂದ ನೆರವೇರಿತು.

ಕಣ್ಣಿದ್ದವರು ಕನಕಗಿರಿ ನೋಡಬೇಕು, ಕಾಲಿದ್ದವರು ಹಂಪಿ ನೋಡಬೇಕೆನ್ನುವ ನಾಣ್ಣುಡಿಯಂತೆ ಕನಕಗಿರಿ ಕ್ಷೇತ್ರ ಎರಡನೇ ತಿರುಪತಿ ಎಂದು ಹೆಸರಾಗಿದೆ. ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ೧೪ ದಿನಗಳ ಕಾಲ ನಡೆಯುವ ಉತ್ಸವಗಳ ಪೈಕಿ ಗರುಡೋತ್ಸವವು ಪ್ರಮುಖ ಉತ್ಸವವಾಗಿದೆ. ತಿರುಪತಿಯಲ್ಲಿ ನಡೆದಂತೆ ಇಲ್ಲಿ ಕನಕಾಚಲ, ಶ್ರೀದೇವಿ, ಭೂದೇವಿಯರ ಕಲ್ಯಾಣ ರೂಢಿಯಲ್ಲಿದೆ.

ಕನಕಾಚಲನ ವಿವಾಹವು ಶ್ರೀದೇವಿ ಹಾಗೂ ಭೂದೇವಿಯರೊಂದಿಗೆ ನಡೆದು ನಂತರ ಬೆಳಗಿನ ಜಾವ ಶ್ರೀ ಕನಕಾಚಲನು ಗರುಡ ವಾಹನನಾಗಿ ಉತ್ಸವ ಏರುತ್ತಾನೆ. ಬಳಿಕ ಸಾವಿರಾರು ಭಕ್ತರು ದಿವಟಿಗೆಯಲ್ಲಿ ಕರ್ಪೂರ, ಕೊಬ್ಬರಿಯುರಿಸಿದ ಬೆಳಕಿನ ಮೆರವಣಿಗೆಯಲ್ಲಿ ಗೋವಿಂದಾ... ಗೋವಿಂದಾ.... ಎಂದು ಸ್ಮರಣೆ ಮಾಡುತ್ತಾ ಗ್ರಾಮದ ಪಶ್ಚಿಮ ದಿಕ್ಕಿನಲ್ಲಿರುವ ಹನುಮಂತನ ದೇವಸ್ಥಾನಕ್ಕೆ ತೆರಳಿ ಬಳಿಕ ಸ್ವ-ಸ್ಥಾನಕ್ಕೆ ಬರುತ್ತಾನೆ.

ದೂರದ ತಿರುಪತಿಯ ತಿಮ್ಮಪ್ಪನ ಸನ್ನಿಧಿಯಲ್ಲಿ ನಡೆಯುವ ಕಲ್ಯಾಣೋತ್ಸವ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನೋಡಲು ಸಾಧ್ಯವಾಗದೆ ಇರುವ ಭಕ್ತರು ಕನಕಗಿರಿಯ ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿ ಕ್ಷೇತ್ರಕ್ಕೆ ಬಂದು ವೀಕ್ಷಿಸಿ ಕಣ್ತುಂಬಿಕೊಂಡರು. ಭಕ್ತರು ಹೂವಿನಹಾರ, ತೆಂಗಿನಕಾಯಿ, ಆರತಿ ಮಾಡಿಸುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು.

ಶನಿವಾರ ರಾತ್ರಿಯಿಂದ ಆರಂಭವಾದ ಕನಕಾಚಲಪತಿಯ ಕಲ್ಯಾಣೋತ್ಸವದಲ್ಲಿ ಜಿಲ್ಲಾಧಿಕಾರಿ ನಳಿನ್ ಅತುಲ್, ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಿಗೋಡಿ, ತಹಸೀಲ್ದಾರ ವಿಶ್ವನಾಥ ಮುರುಡಿ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.

ನಂತರ ರಾಜಬೀದಿಯಲ್ಲಿ ನಡೆಯುವ ಗರುಡೋತ್ಸವ ಮೆರವಣಿಗೆಯಲ್ಲಿ ಸಚಿವ ಶಿವರಾಜ ತಂಗಡಗಿ, ಮಾಜಿ ಶಾಸಕ ಬಸವರಾಜ ದಡೇಸೂಗುರು, ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟೂರ್, ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಸಚಿವ ತಂಗಡಗಿ ಉತ್ಸವಕ್ಕೆ ಹೆಗಲು ಕೊಟ್ಟು ಭಕ್ತಿ ಮೆರೆದರು.

ಬಾಕ್ಸ್ಭಕ್ತರಿಗೆ ಉಪಾಹಾರ ವಿತರಣೆ

ನೆರೆಯ ಜಿಲ್ಲೆಗಳಿಂದ ಹಾಗೂ ತಾಲೂಕಿ ನಾನಾ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಸಂಘ, ಸಿದ್ಧ ವಿನಾಯಕ ಬ್ರೀಕ್ಸ್ ಸೇರಿದಂತೆ ಅನೇಕ ದಾನಿಗಳು ಚಿತ್ರಾನ್ನ, ಪಲಾವ್, ಉಪ್ಪಿಟ್ಟು, ಸಿರಾ, ವಗ್ಗರಣೆ ಸೇರಿದಂತೆ ಇತರ ಉಪಾಹಾರ ವಿತರಿಸಿದರು. ದೇವಸ್ಥಾನ ಸಮಿತಿ ವತಿಯಿಂದ ಅಮೃತ ಕಲಷ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು.

31ಕೆಎನ್‌ಕೆ-3

ಶ್ರೀ ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿ ಜಾತ್ರೆ ಅಂಗವಾಗಿ ಗರುಡೋತ್ಸವವು ವೈಭವದಿಂದ ಜರುಗಿತು.