ಗ್ಯಾಸ್‌ ಸಿಲಿಂಡರ್‌ ಸ್ಫೋಟ: ತಾಯಿ, ಮೂವರು ಮಕ್ಕಳು ಗಂಭೀರ ಗಾಯ

| Published : Dec 09 2024, 12:48 AM IST

ಸಾರಾಂಶ

ಗ್ಯಾಸ್‌ ಸೋರಿಕೆ ವಾಸನೆಗೆ ಎದ್ದ ತಾಯಿ ಖುಬ್ರಾ ಲೈಟ್‌ ಸ್ವಿಚ್‌ ಹಾಕಿದ್ದು ಸಿಲಿಂಡರ್‌ ಸ್ಫೋಟಕ್ಕೆ ಕಾರಣ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್ ಪುಟ್ಟರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಳ್ಳಾಲ

ಗ್ಯಾಸ್ ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ ಮನೆಯಲ್ಲಿದ್ದ ತಾಯಿ ಹಾಗೂ ಮೂವರು ಮಕ್ಕಳು ಗಂಭೀರ ಗಾಯಗೊಂಡ ಘಟನೆ ಮಂಜನಾಡಿ ಗ್ರಾಮ ವ್ಯಾಪ್ತಿಯ ಖಂಡಿಕ ಎಂಬಲ್ಲಿ ನಡೆದಿದೆ. ಗಾಯಾಳುಗಳನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ.

ತಾಯಿ ಖುಬ್ರಾ ಹಾಗೂ ಮೂವರು ಮಕ್ಕಳಾದ ಮೆಅದಿಯಾ, ಮಝಿಯಾ, ಮಾಯಿದಾ ಬೆಂಕಿಯಿಂದ ಸುಟ್ಟು ಗಂಭೀರ ಗಾಯಗೊಂಡವರು.

ಖಂಡಿಕ ನಿವಾಸಿ ಮುತ್ತಲಿಬ್ ಎಂಬವರ ಮನೆಯಲ್ಲಿ ತಾಯಿ ಮತ್ತು ಮೂವರು ಮಕ್ಕಳು ಒಂದೇ ಕೊಠಡಿಯಲ್ಲಿ ಮಲಗಿದ್ದರು. ಶನಿವಾರ ಮಧ್ಯರಾತ್ರಿ ವೇಳೆ ದೊಡ್ಡ ಸದ್ದು ಕೇಳಿಸಿದೆ. ಈ ಘಟನೆಯಲ್ಲಿ ಮನೆಯ ಮೇಲ್ಛಾವಣಿ ಸಂಪೂರ್ಣ ಹಾರಿ ಹೋಗಿದೆ. ಕಿಟಕಿ, ಮಲಗಿದ ಕೊಠಡಿಗೆ ಸಂಪೂರ್ಣ ಹಾನಿಯಾಗಿದೆ. ತಾಯಿ, ಮಕ್ಕಳು ಮಲಗಿದ ಮಂಚ ಸಂಪೂರ್ಣ ಸುಟ್ಟು ಕರಕಲಾಗಿವೆ.

ಘಟನೆ ಸಂದರ್ಭ ನೋಡಿದ ಸ್ಥಳೀಯ ವ್ಯಕ್ತಿಯೊಬ್ಬರು ಬೊಬ್ಬೆ ಹೊಡೆದಿದ್ದು, ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಬೆಂಕಿ ನಂದಿಸಿದ್ದಾರೆ.

ಗ್ಯಾಸ್‌ ಸೋರಿಕೆ ವಾಸನೆಗೆ ಎದ್ದ ತಾಯಿ ಖುಬ್ರಾ ಲೈಟ್‌ ಸ್ವಿಚ್‌ ಹಾಕಿದ್ದು ಸಿಲಿಂಡರ್‌ ಸ್ಫೋಟಕ್ಕೆ ಕಾರಣ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್ ಪುಟ್ಟರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.