ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಕೊರತೆಯೂ ಸಾರ್ವಜನಿಕರನ್ನು ಕಂಗೆಡಿಸಿದೆ. ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಜನರು ನೇರವಾಗಿ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಬುಕ್ಕಿಂಗ್ ಮಾಡುತ್ತಿದ್ದಾರೆ. ಆದರೆ ಬುಕ್ ಮಾಡಿದ ಬಳಿಕ ಸುಮಾರು 28 ದಿನಗಳ ನಂತರ ಮಾತ್ರ ಸಿಲಿಂಡರ್ ದೊರೆಯಲಿದೆ ಎಂದು ಏಜೆನ್ಸಿಯವರು ತಿಳಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ವಿಶ್ವವಿಖ್ಯಾತ ಪ್ರವಾಸಿ ಕೇಂದ್ರ ಬೇಲೂರಲ್ಲಿ ಗ್ಯಾಸ್ ಸಿಲಿಂಡರ್ ಕೊರತೆಯಿಂದ ಸಾರ್ವಜನಿಕರು , ಹೋಟೆಲ್ ಹಾಗೂ ತಿಂಡಿಗಾಡಿಯವರು ಆಹಾರ ತಯಾರಿಕೆಗೆ ಪರದಾಡುವಂತಾಗಿದೆ.

ಪಟ್ಟಣದ ದೊಡ್ಡ ಹೋಟೆಲ್‌ಗಳಲ್ಲಿ ದಿನನಿತ್ಯ ಸುಮಾರು 7ರಿಂದ 8 ವಾಣಿಜ್ಯ ಸಿಲಿಂಡರ್‌ಗಳನ್ನು ಬಳಸಲಾಗುತ್ತಿತ್ತು. ಆದರೆ ಕಳೆದ ಮೂರು ದಿನಗಳಿಂದ ಕೇವಲ 2 ಸಿಲಿಂಡರ್‌ಗಳು ಮಾತ್ರ ಪೂರೈಕೆಯಾಗುತ್ತಿರುವುದರಿಂದ ಊಟೋಪಚಾರ ತಯಾರಿಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಕೆಲ ಹೋಟೆಲ್‌ಗಳಲ್ಲಿ ಗ್ಯಾಸ್ ಕೊರತೆಯಿಂದ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಮಾತ್ರ ಅಡುಗೆ ಮಾಡುವಂತಹ ಪರಿಸ್ಥಿತಿ ಎದುರಾಗಿದೆ.

ಸೌದೆ ಒಲೆ ಗತಿ:

ಇಲ್ಲಿನ ದೇಗುಲ ರಸ್ತೆಯಲ್ಲಿರುವ ಹೋಟೆಲ್ ಅನಘ ಗ್ರ್ಯಾಂಡ್ ನ ಲೋಕೇಶ್ ಮಾತನಾಡಿ, ವಾಣಿಜ್ಯ ಸಿಲಿಂಡರ್ ಗಳು ಸಮರ್ಪಕವಾಗಿ ದೊರೆಯದ ಕಾರಣ ಮೆನು ಪ್ರಕಾರ ಅಡುಗೆ ಮಾಡಲು ಆಗುತ್ತಿಲ್ಲ. ಗ್ಯಾಸ್ ಬಳಸಿ ಮಾಡುವ ಪೂರಿ, ದೋಸೆ, ಇಡ್ಲಿಯಂಥ ತಿನಿಸುಗಳಿಗೆ ಬ್ರೇಕ್ ಹಾಕಲಾಗುತ್ತಿದೆ. ಸೌದೆ ಒಲೆ ಬಳಸಿ ಮಾಡುವ ಅಡುಗೆಗೆ ಇನ್ನು ಮುಂದೆ ಪ್ರಾಮುಖ್ಯತೆ ನೀಡಬೇಕಿದೆ. ಎರಡು ದಿನ ಮಾತ್ರ ಸಿಲಿಂಡರ್ ಗಳು ಲಭ್ಯವಿದ್ದು, ಮುಂದೆ ಏನು ಮಾಡುವುದು ಎಂಬ ತಲೆಬಿಸಿ ಹೆಚ್ಚಾಗುತ್ತಿದೆ ಎಂದು ತಮ್ಮ ಆತಂಕ ಹೊರ ಹಾಕಿದರು.

ಸ್ವೀಟ್ ತಯಾರಕರಿಗೂ ತಲೆಬಿಸಿ:

ಇದೇ ಸಮಸ್ಯೆ ತಿಂಡಿ ಗಾಡಿಗಳಿಗೂ ಹಾಗೂ ಖಾರ ಮತ್ತು ಸಿಹಿ ತಯಾರಿಕಾ ಅಂಗಡಿಗಳಿಗೂ ತಟ್ಟಿದೆ. ಸಾಮಾನ್ಯವಾಗಿ ದಿನಕ್ಕೆ 8ರಿಂದ 10 ವಾಣಿಜ್ಯ ಸಿಲಿಂಡರ್‌ಗಳನ್ನು ಬಳಸುತ್ತಿದ್ದ ಸಿಹಿ ಪದಾರ್ಥ ತಯಾರಿಕಾ ಅಂಗಡಿಗಳಿಗೆ ಕಳೆದ ನಾಲ್ಕು ದಿನಗಳಿಂದ ಸಮರ್ಪಕವಾಗಿ ಗ್ಯಾಸ್ ಸಿಲಿಂಡರ್‌ಗಳು ಪೂರೈಕೆಯಾಗುತ್ತಿಲ್ಲ. ಮುಂದಿನ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನ ಆರ್ಡರ್‌ಗಳನ್ನು ಸ್ವೀಕರಿಸಿದ್ದ ಕೆಲವು ಅಂಗಡಿಗಳು ಈಗ ಸಂಕಷ್ಟಕ್ಕೆ ಸಿಲುಕಿವೆ. ವಿಶೇಷವಾಗಿ ಹೋಳಿಗೆ ಹಾಗೂ ಕುರುಕಲು ತಿಂಡಿಗಳ ತಯಾರಿಕೆಗೆ ಗ್ಯಾಸ್ ಕೊರತೆಯಿಂದ ಅಡಚಣೆ ಉಂಟಾಗಿದೆ ಎಂದು ಜೆ.ಪಿ. ನಗರದ ವಿಶ್ವನಾಥ್ ಸ್ವೀಟ್ ಮಾಲೀಕರು ಹೇಳುತ್ತಾರೆ.

ತಿಂಡಿ ಗಾಡಿಗಳಿಗೂ ಸಂಕಷ್ಟ :

ಇನ್ನು ಪಟ್ಟಣದ ದೇಗುಲ ಸಮೀಪ, ಬಸ್ ನಿಲ್ದಾಣದ ಬಳಿ ಹಾಗೂ ಇತರೆ ವೃತ್ತಗಳಲ್ಲಿ ನಿಲ್ಲುವ ತಿಂಡಿ ಗಾಡಿಗಳಿಗೂ ಗ್ಯಾಸ್ ಟ್ರಬಲ್ ತಪ್ಪಿಲ್ಲ. ಮಸಾಲೆ ಪುರಿ, ಪಲಾವ್, ಇಡ್ಲಿ- ವಡೆಯಂತಹ ಬಿಸಿ ಬಿಸಿ ಪದಾರ್ಥಗಳನ್ನು ಗ್ರಾಹಕರಿಗೆ ಕೊಡಬೇಕಾಗಿದ್ದು, ಗ್ಯಾಸ್ ಸಿಲಿಂಡರ್ ಕೊರತೆಯಿಂದ ತಳ್ಳುವ ಗಾಡಿಗಳು ಮನೆಯಲ್ಲಿ ನಿಲ್ಲಬೇಕಾಗಿದೆ.

ಕಾಳ ಸಂತೆಯಲ್ಲಿ ದುಪ್ಪಟ್ಟು ಹಣ:

ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಕೊರತೆಯೂ ಸಾರ್ವಜನಿಕರನ್ನು ಕಂಗೆಡಿಸಿದೆ. ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಜನರು ನೇರವಾಗಿ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಬುಕ್ಕಿಂಗ್ ಮಾಡುತ್ತಿದ್ದಾರೆ. ಆದರೆ ಬುಕ್ ಮಾಡಿದ ಬಳಿಕ ಸುಮಾರು 28 ದಿನಗಳ ನಂತರ ಮಾತ್ರ ಸಿಲಿಂಡರ್ ದೊರೆಯಲಿದೆ ಎಂದು ಏಜೆನ್ಸಿಯವರು ತಿಳಿಸುತ್ತಿದ್ದಾರೆ.

ಪಟ್ಟಣದ ಚನ್ನಕೇಶವ ಗ್ಯಾಸ್ ಏಜೆನ್ಸಿಯಲ್ಲಿ ಮೊದಲೇ ಬುಕ್ಕಿಂಗ್ ಮಾಡಿದ್ದವರಿಗೂ ಸಿಲಿಂಡರ್ ದೊರೆಯದೆ ದುಪ್ಪಟ್ಟು ಹಣಕೊಟ್ಟು ಕೊಳ್ಳುವ ಸ್ಥಿತಿ ಎದುರಾಗಿದೆ. ಗ್ಯಾಸ್ ಸಿಲಿಂಡರ್ ಅಭಾವದಿಂದ ಹೋಟೆಲ್ ಹಾಗೂ ಸಾರ್ವಜನಿಕ ಜೀವನದ ಮೇಲೂ ಪರಿಣಾಮ ಬೀರುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸಮಸ್ಯೆ ಪರಿಹರಿಸಿ ವಾಣಿಜ್ಯ ಹಾಗೂ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳನ್ನು ಸಮರ್ಪಕವಾಗಿ ಪೂರೈಸುವಂತೆ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.