ಅನಿಲ ಸೋರಿಕೆ ದುರಂತ: ಮೃತರ ಕುಟುಂಬಕ್ಕೆ ಸಿದ್ದರಾಮಯ್ಯ ಸಾಂತ್ವನ

| Published : May 24 2024, 12:54 AM IST

ಸಾರಾಂಶ

ಅನಿಲ ಸೋರಿಕೆಯಿಂದ ಇಡೀ ಕುಟುಂಬ ನಾಶವಾಗಿದೆ. ಕುಮಾರಸ್ವಾಮಿ ಅವರು ಕಡೂರು ತಾಲೂಕಿನವರು. ಕುಮಾರಸ್ವಾಮಿ ಅವರು ಕುಟುಂಬ ಸಮೇತರಾಗಿ ಮೈಸೂರಿನಲ್ಲಿ ಚಿಕ್ಕದಾದ ಸ್ವಂತ ಮನೆ ಮಾಡಿಕೊಂಡು, ಇಸ್ತ್ರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅವರ ಮಕ್ಕಳೂ ಕೂಡ ಓದಿಕೊಂಡಿದ್ದರು.

ಕನ್ನಡಪ್ರಭ ವಾರ್ತೆ ಮೈಸೂರು

ಅನಿಲ ಸೋರಿಕೆಯಿಂದಾಗಿ ಮೃತರಾದ ನಾಲ್ವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂತ್ವನ ಹೇಳಿದರು.

ನಗರದ ಯರಗನಹಳ್ಳಿಗೆ ಗುರುವಾರ ಸಂಜೆ ಭೇಟಿ ನೀಡಿದ ಅವರು ಮೃತ ಕುಮಾರಸ್ವಾಮಿ ಅವರ ತಂದೆ, ತಂಗಿ, ಅತ್ತೆ ಮತ್ತು ಮಾವನನ್ನು ಭೇಟಿಯಾಗಿ ಸಾಂತ್ವನ ಹೇಳಿದರು.

ಅನಿಲ ಸೋರಿಕೆಯಿಂದ ಇಡೀ ಕುಟುಂಬ ನಾಶವಾಗಿದೆ. ಕುಮಾರಸ್ವಾಮಿ ಅವರು ಕಡೂರು ತಾಲೂಕಿನವರು. ಕುಮಾರಸ್ವಾಮಿ ಅವರು ಕುಟುಂಬ ಸಮೇತರಾಗಿ ಮೈಸೂರಿನಲ್ಲಿ ಚಿಕ್ಕದಾದ ಸ್ವಂತ ಮನೆ ಮಾಡಿಕೊಂಡು, ಇಸ್ತ್ರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅವರ ಮಕ್ಕಳೂ ಕೂಡ ಓದಿಕೊಂಡಿದ್ದರು.

ಈಗ ನಮ್ಮ ಜತೆ ಕುಮಾರಸ್ವಾಮಿ ಅವರ ತಂದೆ, ತಂಗಿ, ಅತ್ತೆ ಮತ್ತು ಮಾವ ಇದ್ದಾರೆ. ಅವರ ಕುಟುಂಬಕ್ಕೆ ತಲಾ 3 ಲಕ್ಷದಂತೆ 12 ಲಕ್ಷ ಪರಿಹಾರವನ್ನು ಜಿಲ್ಲಾ ಮಂತ್ರಿ ಡಾ.ಎಚ್‌.ಸಿ. ಮಹದೇವಪ್ಪ ಘೋಷಿಸಿದ್ದಾರೆ. ನಾನು ಅದನ್ನು ಅನುಮೋದಿಸಿದ್ದೇನೆ ಎಂದರು.

ಅವರ ಕುಟುಂಬಕ್ಕೆ ಕುಮಾರಸ್ವಾಮಿ ಅವರ ಸಾವಿನ ದುಃಖ ಭರಿಸವ ಶಕ್ತಿ ನೀಡಲಿ ಎಂದು ಅವರು ಪ್ರಾರ್ಥಿಸಿದರು.

ಈ ವೇಳೆ ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ, ಕೆ. ವೆಂಕಟೇಶ್‌, ಶಾಸಕ ತನ್ವೀರ್‌ಸೇಠ್‌, ವಿಧಾನ ಪರಿಷತ್‌ಸದಸ್ಯ ಗೋವಿಂದರಾಜು, ನಗರ ಪಾಲಿಕೆ ಮಾಜಿ ಸದಸ್ಯೆ ರಜಿನಿ ಅಣ್ಣಯ್ಯ ಮೊದಲಾದವರು ಇದ್ದರು.

ತಗಡೂರು ಕಲುಷಿತ ನೀರಿನಿಂದ ವಾಂತಿಭೇದಿ: ಎಇಇ, ಪಿಡಿಒ ಅಮಾನತುಕನ್ನಡಪ್ರಭ ವಾರ್ತೆ ನಂಜನಗೂಡು

ತಾಲೂಕಿನ ತಗಡೂರು ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದಾಗಿ 100 ಹೆಚ್ಚು ಜನರಿಗೆ ವಾಂತಿ ಭೇದಿ ಕಂಡು ಬಂದ ಹಿನ್ನಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಂಜನಗೂಡು ಉಪ ವಿಭಾಗದ ಎಇಇ ಶಿವಕುಮಾರ್ ಹಾಗೂ ಗ್ರಾಪಂ ಪಿಡಿಒ ದಿವಾಕರ್‌ ಅವರನ್ನು ಅಮಾನತುಗೊಳಿಸಲಾಗಿದೆ.ತಗಡೂರು ಗ್ರಾಮದಲ್ಲಿ ಕಳೆದ ಐದಾರು ದಿನಗಳ ಹಿಂದೆ ಕಲುಷಿತ ನೀರು ಸೇವನೆಯಿಂದಾಗಿ ನೂರಕ್ಕೂ ಹೆಚ್ಚು ವಾಂತಿಬೇಧಿ ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡವು ತಗಡೂರು ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿ ತಗಡೂರು ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮವನ್ನು ಕೈಗೊಳ್ಳದಿರುವುದನ್ನು ಅಧಿಕಾರಿಗಳು ಗಮನಿಸಿ, ಸ್ಥಳೀಯ ಅಧಿಕಾರಿಗಳ ಕರ್ತವ್ಯ ಲೋಪವನ್ನು ಗುರ್ತಿಸಿ ಜಿಲ್ಲಾ ಪಂಚಾಯತಿಗೆ ವರದಿ ನೀಡಿದ್ದರು. ಈ ಹಿನ್ನಲೆಯಲ್ಲಿ ಜಿಪಂ ಸಿಇಒ ಕೆ.ಎಂ. ಗಾಯತ್ರಿ ಅವರು ಸ್ಥಳೀಯ ಪಿಡಿಒ ದಿವಾಕರ್‌ ಅವರನ್ನು ಗುರುವಾರ ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಜೊತೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಎಇಇ ಶಿವಕುಮಾರ್‌ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಸರ್ಕಾರದಿಂದ ಗುರುವಾರ ಆದೇಶ ಹೊರಡಿಸಲಾಗಿದೆ.