ಸಾರಾಂಶ
- ಹೊನ್ನಾಳಿ ಶಾಸಕ, ಜಿಪಂ ಸಿಇಒ, ತಹಸೀಲ್ದಾರ್ ನೇತೃತ್ವದ ತಂಡ ಪರಿಶೀಲನೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ನ್ಯಾಮತಿ ತಾಲೂಕಿನ ಯರಗನಾಳ್ ಗ್ರಾಮದ ಗೌಡನ ಕೆರೆ ಕೋಡಿ ಬಿದ್ದು ಗ್ರಾಮಕ್ಕೆ ಕೆರೆ ನೀರು ನುಗ್ಗಿ ಅವಾಂತರ ಸೃಷ್ಠಿಸಿದೆ. ಮಂಗಳವಾರ ಶಾಸಕ ಡಿ.ಜಿ.ಶಾಂತನಗೌಡ, ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಇಟ್ನಾಳ್ ಸೇರಿದಂತೆ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ, ಅತಿವೃಷ್ಟಿ ಹಾನಿಗಳ ಪರಿಶೀಲನೆ ನಡೆಸಿತು.ಸೋಮವಾರ ತಡರಾತ್ರಿ ಗ್ರಾಮದ ಜನವಸತಿ ಪ್ರದೇಶಗಳು, ಚರಂಡಿ, ರಸ್ತೆಗಳಿಗೆ ಭಾರಿ ಪ್ರಮಾಣದ ನೀರು ನುಗ್ಗಿದೆ. 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ತಾಲೂಕು ಆಡಳಿತ ಕೂಡಲೇ ಎಚ್ಚೆತ್ತು, ಸ್ಥಳಕ್ಕೆ ಆಗಮಿಸಿ ಎಸ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜನರನ್ನು ಗ್ರಾಮದ ಸಮುದಾಯ ಭವನದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದರು. ಸಂತ್ರಸ್ತರಿಗೆ ಊಟ, ವಸತಿ ಸೌಲಭ್ಯಗಳನ್ನು ಒದಗಿಸಿದರು.
ಮಂಗಳವಾರ ಶಾಸಕ ಶಾಂತನಗೌಡ ಅತಿವೃಷ್ಟಿ ಹಾನಿ ಪರಿಶೀಲಿಸಿದರು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ, ಜೆ.ಸಿ.ಬಿ. ಯಂತ್ರಗಳ ಮೂಲಕ ನೀರು ಕಟ್ಟಿಕೊಂಡ ಗ್ರಾಮದ ಎಲ್ಲ ಕಾಲುವೆಗಳನ್ನು ತೆರವುಗೊಳಿಸಿ, ಸರಾಗವಾಗಿ ಮಳೆನೀರು ಹರಿಹೋಗುವಂತೆ ಮಾಡುವ ಕೆಲಸಕ್ಕೆ ಚಾಲನೆ ನೀಡಿದರು.ಶಾಸಕರು ಮಾತನಾಡಿ, ತಾಲೂಕಿನಲ್ಲಿ ಶಾಲಾ ಕೊಠಡಿಗಳ ಸ್ಥಿತಿಗತಿಗಳ ಬಗ್ಗೆ ಅಧಿಕಾರಿಗಳೊಂದಿಗೆ 8 ಬಾರಿ ಸಭೆ ನಡೆಸಿದ್ದೇನೆ. ಈಗಾಗಲೇ 120 ಶಾಲಾ ಕೊಠಡಿಗಳ ರಿಪೇರಿಗಳಿಗೆ ₹4 ಕೋಟಿ ಅನುದಾನ ನೀಡಲಾಗಿದೆ. ಪ್ರಕೃತಿ ವಿಕೋಪ ನಿಧಿಯಿಂದ ₹2 ಕೋಟಿ,, ಶಾಸಕರ ನಿಧಿಯಿಂದ ₹1 ಕೋಟಿ, ಜಿಪಂ ಅನುದಾನದಿಂದ ₹1 ಕೋಟಿ ನೀಡಲಾಗಿದೆ ಎಂದು ವಿವರಿಸಿದರು.
ಅತಿವೃಷ್ಟಿಗೆ ಹಾಳಾಗಿರುವ ರಸ್ತೆ, ಚರಂಡಿ, ಮೂಲಸೌಲಭ್ಯಗಳ ವ್ಯವಸ್ಥೆಗಳನ್ನು ಸರಿಪಡಿಸುವ ಕುರಿತು ಅಧಿಕಾರಿಗಳು ಎಂಜಿನಿಯರ್‌ಗಳು ಸಮಗ್ರ ವರದಿ ತಯಾರಿಸಿ ಪ್ರಸ್ತಾವನೆ ಸಲ್ಲಿಸಬೇಕು. ಅನಂತರ ಅನುದಾನ ಮಂಜೂರಾತಿಗೆ ಕ್ರಮ ವಹಿಸಲಾಗುವುದು ಎಂದು ಶಾಸಕರು ಹೇಳಿದರು.ಜಿಪಂ ಸಿಇಒ ಸುರೇಶ್ ಮಾತನಾಡಿ, 15ನೇ ಹಣಕಾಸು ಯೋಜನೆಯಡಿ, ಶೇ.30ರಷ್ಟು ಕುಡಿಯುವ ನೀರಿಗಾಗಿ, ಶೇ.30ರಷ್ಟು ನೈರ್ಮಲ್ಯ ಕಾರ್ಯಗಳಿಗೆ ನಿಗದಿ ಮಾಡಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗೆ ₹19 ಲಕ್ಷ ಅನುದಾನ ನೀಡಿದೆ. ನರೇಗಾ ಯೋಜನೆಯಡಿ ಜಿಪಂ ಹಂತದಲ್ಲಿ ₹4 ಕೋಟಿ, ತಾಪಂ ಹಂತದಲ್ಲಿ ₹2 ಕೋಟಿ ಮಂಜೂರಾಗಿದ್ದು, ನ್ಯಾಮತಿ ತಾಲೂಕಿಗೆ ಈಗಾಗಲೇ ₹1.65 ಕೋಟಿ ಅನುದಾನ ಮಂಜೂರಾಗಿದೆ ಎಂದರು.
ಇದೀಗ ಯರಗನಾಳ್ ಗ್ರಾಮದ ಕೆರೆ ಕೋಡಿಬಿದ್ದು ಸಾಕಷ್ಟು ತೊಂದರೆಯಾಗಿವೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ತಡೆಯಲು ಕೆರೆ ಕೆಳಭಾಗದಲ್ಲಿ ಸುಮಾರು ₹35 ಲಕ್ಷದಲ್ಲಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಜೊತೆಗೆ ರಸ್ತೆ, ಚರಂಡಿ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸುವ ಬಗ್ಗೆಯೂ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.ಹೊನ್ನಾಳಿ ಉಪವಿಭಾಗದ ಉಪವಿಭಾಗಾಧಿಕಾರಿ ವಿ.ಅಭಿಷೇಕ್, ನ್ಯಾಮತಿ ತಾಲೂಕು ತಹಸೀಲ್ದಾರ್ ಗೋವಿಂದಪ್ಪ, ನ್ಯಾಮತಿ ತಾಪಂ ಇಒ ರಾಘವೇಂದ್ರ, ಯರಗನಾಳ್ ಗ್ರಾಪಂ ಅಧ್ಯಕ್ಷೆ ಸವಿತಾ, ಉಪಾಧ್ಯಕ್ಷರು, ಸದಸ್ಯರು, ಪಿಡಿಒ ಮಂಜುನಾಥ್, ಪ್ರದೀಪ್, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.
- - --22ಎಚ್.ಎಲ್.ಐ1: ಅತಿವೃಷ್ಠಿಯಿಂದ ಯರಗನಾಳ್ ಗ್ರಾಮದ ಗೌಡನಕರೆ ಕೋಡಿ ಬಿದ್ದು ಗ್ರಾಮದಲ್ಲಿ ನೀರು ನುಗ್ಗಿರುವುದು. -22ಎಚ್.ಎಲ್,ಐ1ಎ: ಯರಗನಾಳ್‌ನಲ್ಲಿ ಗೌಡನಕೆರೆ ನೀರು ನುಗ್ಗಿದ್ದು, ಮಂಗಳವಾರ ಶಾಸಕ ಡಿ.ಜಿ.ಶಾಂತನಗೌಡ, ಜಿಪಂ ಸಿಇಒ ಸುರೇಶ್ ಇಟ್ನಾಳ್, ತಹಸೀಲ್ದಾರ್ ಗೋವಿಂದ ಮತ್ತಿತರ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ಹಾನಿ ಪರಿಶೀಲಿಸಿತು.