ಸಾರಾಂಶ
ತಾಲೂಕಿನ ತಳಕು ಹೋಬಳಿಯ ಗೌರಸಮುದ್ರ ಗ್ರಾಮದ ಖಾಸಗಿ ಬಾರ್ ಮುಚ್ಚುವಂತೆ ಗ್ರಾಮಸ್ಥರು, ಮಹಿಳೆಯರು, ಗ್ರಾಮ ಪಂಚಾಯಿತಿ ಸದಸ್ಯರು ಅಹೋರಾತ್ರಿ ಧರಣಿ ನಡೆಸಿ ಬಾರ್‌ಗೆ ಬೀಗಜಡಿದು ಪ್ರತಿಭಟಿಸಿದ್ದರು. ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗ್ರಾಮದ ಬಾರ್ ಮುಚ್ಚಬೇಕೆಂದು ಆಗ್ರಹಿಸಿದ್ದರು.
ಕನ್ನಡಪ್ರಭವಾರ್ತೆ ಚಳ್ಳಕೆರೆ
ತಾಲೂಕಿನ ತಳಕು ಹೋಬಳಿಯ ಗೌರಸಮುದ್ರ ಗ್ರಾಮದ ಖಾಸಗಿ ಬಾರ್ ಮುಚ್ಚುವಂತೆ ಗ್ರಾಮಸ್ಥರು, ಮಹಿಳೆಯರು, ಗ್ರಾಮ ಪಂಚಾಯಿತಿ ಸದಸ್ಯರು ಅಹೋರಾತ್ರಿ ಧರಣಿ ನಡೆಸಿ ಬಾರ್‌ಗೆ ಬೀಗಜಡಿದು ಪ್ರತಿಭಟಿಸಿದ್ದರು. ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗ್ರಾಮದ ಬಾರ್ ಮುಚ್ಚಬೇಕೆಂದು ಆಗ್ರಹಿಸಿದ್ದರು.ಕಳೆದ ಎರಡು ದಿನಗಳಿಂದ ಗ್ರಾಮದ ಬಾರ್ ಮುಚ್ಚುವಂತೆ ಪ್ರತಿಭಟನೆ ಹೆಚ್ಚಾದ ಹಿನ್ನೆಲೆ ತಹಸೀಲ್ದಾರ್ ರೇಹಾನ್‌ಪಾಷ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿದರು. ತಹಸೀಲ್ದಾರ್ ವಾಹನ ಕಂಡಕೂಡಲೇ ಮಹಿಳೆಯರು ಹಾಗೂ ಯುವಕರು ಕಾರು ತಡೆದು ನಮ್ಮ ಗ್ರಾಮದ ಬಾರ್ ಮುಚ್ಚಬೇಕೆಂದು ಪಟ್ಟುಹಿಡಿದರು. ಕಾರನ್ನು ಸುತ್ತುವರೆದ ಹಿನ್ನೆಲೆ ಕಾವೇರಿದ ವಾತಾವರಣ ಉಂಟಾಗಿತ್ತು.
ಈ ಸಂದರ್ಭದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ತಹಸೀಲ್ದಾರ್, ಗ್ರಾಮದ ಬಾರನ್ನು ಮುಚ್ಚುವ ಕುರಿತು ಅಬಕಾರಿ ಇಲಾಖೆ ಮುಖ್ಯಸ್ಥರೇ ಜವಾಬ್ದಾರಿ ವಹಿಸಬೇಕಿದೆ. ಪ್ರಸ್ತುತ ಅವರು ಬೆಂಗಳೂರಿನ ತರಬೇತಿ ಕಾರ್ಯಗಾರದಲ್ಲಿ ಇರುವ ಕಾರಣ, ಅವರನ್ನು ಕರೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಓಬಣ್ಣ ಮಾತನಾಡಿ, ಕಳೆದ ಎರಡು ದಿನಗಳಿಂದ ಬಾರ್ ಮುಚ್ಚುವಂತೆ ಪ್ರತಿಭಟನೆ ನಡೆಸುತ್ತಿದ್ದೇವೆ. ತಹಸೀಲ್ದಾರ್ ಅಬಕಾರಿ ಇಲಾಖೆ ಅಧಿಕಾರಿಗಳನ್ನು ಕರೆಸುವ ಭರವಸೆ ನೀಡಿರುವುದರಿಂದ ಸ್ವಲ್ಪ ಅವಕಾಶ ನೀಡೋಣವೆಂದು ಪ್ರತಿಭಟನಾಕಾರರಿಗೆ ಮನವೊಲಿಸಿದರು. ತಹಸೀಲ್ದಾರ್ ಸಹ ದೂರವಾಣಿ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಶಿಕುಮಾರ್, ಈರಣ್ಣ, ನಾಗರಾಜು, ಗ್ರಾಮಸ್ಥರಾದ ಭಾಗ್ಯಮ್ಮ, ಮಾರಕ್ಕ, ನಾಗರಾಜ, ರಾಜಶೇಖರ, ಚಂದ್ರಶೇಖರ, ಪಾಲಕ್ಕ, ಉಷಾ, ಸುಧಾ, ಗಂಗಮ್ಮ, ಗೌರಮ್ಮ, ಮುರುಳಿ, ನಾಗರಾಜು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.