ಅಂಗನವಾಡಿ ಮಕ್ಕಳ ದಾಹ ನೀಗಿಸಲು ಬಾವಿ ತೆಗೆಯುತ್ತಿರುವ ಗೌರಿ

| Published : Feb 08 2024, 01:31 AM IST

ಅಂಗನವಾಡಿ ಮಕ್ಕಳ ದಾಹ ನೀಗಿಸಲು ಬಾವಿ ತೆಗೆಯುತ್ತಿರುವ ಗೌರಿ
Share this Article
  • FB
  • TW
  • Linkdin
  • Email

ಸಾರಾಂಶ

ಅಂಗನವಾಡಿ ಮಕ್ಕಳಿಗೆ ಕುಡಿಯುವ ನೀರಿನ ಕೊರತೆ ನೀಗಿಸಲು ಬಾವಿ ಅವಶ್ಯಕತೆಯ ಕುರಿತು ಸ್ಥಳೀಯ ಗ್ರಾಪಂಗೆ ಮಾಹಿತಿ ನೀಡಿದರೂ, ಗಮನ ಹರಿಸದೆ ಇರುವುದರಿಂದ ಗೌರಿ ನಾಯ್ಕ ಎಂಬ ಮಹಿಳೆ ಸ್ವ-ಆಸಕ್ತಿಯಿಂದ ಬಾವಿ ತೋಡುವ ಕೆಲಸದಲ್ಲಿ ನಿರತಳಾಗಿದ್ದಾರೆ.

ಶಿರಸಿ:

ಅಂಗನವಾಡಿ ಮಕ್ಕಳಿಗೆ ಕುಡಿಯುವ ನೀರಿನ ಕೊರತೆ ನೀಗಿಸಲು ಬಾವಿ ಅವಶ್ಯಕತೆಯ ಕುರಿತು ಸ್ಥಳೀಯ ಗ್ರಾಪಂಗೆ ಮಾಹಿತಿ ನೀಡಿದರೂ, ಗಮನ ಹರಿಸದೆ ಇರುವುದರಿಂದ ಗೌರಿ ನಾಯ್ಕ ಎಂಬ ಮಹಿಳೆ ಸ್ವ-ಆಸಕ್ತಿಯಿಂದ ಬಾವಿ ತೋಡುವ ಕೆಲಸದಲ್ಲಿ ನಿರತಳಾಗಿದ್ದಾರೆ.

ಗಣೇಶನಗರದ ಗೌರಿ ನಾಯ್ಕ (೫೫) ಇಳಿವಯಸ್ಸಿನಲ್ಲಿಯೂ ಮಕ್ಕಳಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ನೀರು ಒದಗಿಸಬೇಕೆಂಬ ಉತ್ಸಾಹ ಮತ್ತು ಸಾಹಸಕ್ಕೆ ಕೈ ಹಾಕಿದ್ದಾರೆ. ಈಕೆ ನಗರದಂಚಿನ ಗಣೇಶನಗರದ ಅಂಗನವಾಡಿ ಕೇಂದ್ರ-೬ರ ಆವಾರದ ಹಿಂಬದಿಯಲ್ಲಿ ಏಕಾಂಗಿಯಾಗಿ ಬಾವಿ ತೋಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಕಳೆದ ಒಂದು ವಾರದಿಂದ ಈ ಕೆಲಸ ನಡೆಸುತ್ತಿದ್ದು ಸುಮಾರು ಆರೆಂಟು ಅಡಿ ತೋಡಿದ್ದಾರೆ.ಗಣೇಶನಗರವು ನಗರ ವ್ಯಾಪ್ತಿಗೆ ಸಮೀಪದಲ್ಲಿದ್ದರೂ ಹುತ್ಗಾರ ಗ್ರಾಪಂಗೆ ಸೇರಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ಈ ಪ್ರದೇಶದ ನಿವಾಸಿಗಳು ನೀರಿನ ತುಟಾಗ್ರತೆ ಎದುರಿಸುತ್ತಾರೆ. ಗ್ರಾಪಂನಿಂದ ನೀರು ಸರಬರಾಜು ಆದರೂ, ಗಣೇಶನಗರ ಎತ್ತರದ ಪ್ರದೇಶದಲ್ಲಿ ಇರುವುದರಿಂದ ಸ್ಥಳೀಯವಾಗಿ ಜಲಮೂಲ ಲಭ್ಯವಿಲ್ಲ. ಹೀಗಾಗಿ ಪ್ರತಿ ಬೇಸಿಗೆಯಲ್ಲಿ ನೀರಿನ ಅಭಾವ ಶುರುವಾಗುತ್ತದೆ. ಇದನ್ನು ನೀಗಿಸಲು ಪಣ ಮತ್ತು ಛಲ ತೊಟ್ಟಿರುವ ಮಹಿಳೆಯು, ಮಣ್ಣನ್ನು ಅಗೆದು ಸುಮಾರು ೪ ಅಡಿ ಸುತ್ತಳತೆಯ ಬಾವಿ ತೋಡಿ ನೀರು ಉಕ್ಕಿಸುವ ಪ್ರಯತ್ನಕ್ಕೆ ಮುಂದಾಗಿರುವುದು ಗಮನಸೆಳೆಯುತ್ತಿದೆ.

ಹ್ಯಾಟ್ರಿಕ್ ಸಾಧನೆ:ಗೌರಿ ಸಿ. ನಾಯ್ಕ ನೀರಿನ ಕೊರತೆ ನೀಗಿಸಬೇಕು ಎಂಬ ಕಾರಣಕ್ಕೆ ತನ್ನ ಮನೆಯ ಹಿಂಬದಿಯಲ್ಲಿ ಕಳೆದ ಆರು ವರ್ಷಗಳ ಹಿಂದೆ ಒಬ್ಬಳೆ ೬೫ ಅಡಿ ಆಳದ ಬಾವಿ ತೋಡಿದ್ದಾರೆ. ಅದರಂತೆ ಕಳೆದ ನಾಲ್ಕು ವರ್ಷಗಳ ಹಿಂದೆ ಮನೆಯ ಹಿಂಬದಿಯಲ್ಲಿ ೪೫ ಅಡಿ ಆಳದ ಇನ್ನೊಂದು ಬಾವಿ ತೋಡಿದ್ದರು. ಈಗ ಅಂಗನವಾಡಿಯಲ್ಲಿ ನೀರಿನ ತೊಂದರೆ ನೀಗಿಸಿಲು ಸ್ವ ಆಸಕ್ತಿಯಿಂದ ಇನ್ನೊಂದು ಬಾವಿ ತೆಗೆಯುವ ಸಾಹಸಕ್ಕೆ ಮುಂದಾಗಿದ್ದಾರೆ.ಗಣೇಶನಗರದ ಅಂಗನವಾಡಿ ಕೇಂದ್ರ-೬ರಲ್ಲಿ ೧೫ ಮಕ್ಕಳು ಇದ್ದಾರೆ. ಹುತ್ಗಾರ ಗ್ರಾಪಂನಿಂದ ಎರಡು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತದೆ. ಆದರೆ ಕುಡಿಯುವುದಕ್ಕೆ ಹತ್ತಿರದ ಬಾವಿಯಿಂದ ನಿತ್ಯ ನೀರು ಹೊತ್ತು ತರಬೇಕಾಗುತ್ತದೆ. ಇದನ್ನು ಗಮನಿಸಿದ್ದ ಗೌರಿ ನಾಯ್ಕ ಕಳೆದ ವರ್ಷದ ಅವಧಿಯಿಂದ ಅಂಗನವಾಡಿ ಆವಾರದಲ್ಲಿ ಬಾವಿ ತೋಡುವುದಾಗಿ ಹೇಳುತ್ತಾ ಬಂದಿದ್ದರು. ಇದೀಗ ಅವರೇ ಸ್ವಯಂ ಆಗಿ ಬಾವಿ ತೋಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುತ್ತಾರೆ ಅಂಗನವಾಡಿ ಶಿಕ್ಷಕಿ ಜ್ಯೋತಿ ನಾಯ್ಕ.ಒಬ್ಬರೇ ಪರಿಶ್ರಮ:ಸಲಾಕೆ, ಹಾರೆ, ಬುಟ್ಟಿ ಬಳಸಿಕೊಂಡು ಬಾವಿ ತೆಗೆಯುವುದಕ್ಕೆ ಮುಂದಾಗಿದ್ದಾಳೆ. ಒಬ್ಬರೇ ಮಣ್ಣು ಮೇಲಕ್ಕೆ ಹಾಕಿ, ಹಾಗೆಯೇ ಕೆಳಗಡೆ ಇಳಿದು ಬಾವಿ ತೋಡುತ್ತಿದ್ದು, ಯಾರ ಸಹಾಯವಿಲ್ಲದೇ, ಒಬ್ಬರೇ ಶ್ರಮ ವಹಿಸಿದ್ದಾರೆ. ಪ್ರಚಾರಕ್ಕೆ ಮಾಡುತ್ತಿಲ್ಲ. ನನ್ನ ಕೈನಲ್ಲಿ ಆದ ಕೆಲಸ ಮಾಡುತ್ತಿದ್ದೇನೆ. ನನ್ನ ವೈಯಕ್ತಿಕ ಪ್ರತಿಫಲಾಪೇಕ್ಷೆಯಿಲ್ಲ. ಸುಮಾರು ೫೦ ಅಡಿಗೆ ನೀರು ಬರುವ ನಿರೀಕ್ಷೆಯಿದೆ ಎನ್ನುತ್ತಾರೆ ಗೌರಿ ನಾಯ್ಕ

ಇದು ನಾನು ತೋಡುತ್ತಿರುವುದು ಮೂರನೇ ಬಾವಿ. ಇದರಿಂದ ಅಂಗನವಾಡಿ ಮಕ್ಕಳು ಹಾಗೂ ಸುತ್ತಮುತ್ತಲಿನ ಜನರಿಗೂ ನೀರಿನ ಉಪಯೋಗ ಆಗಬೇಕು ಎಂಬುದು ನನ್ನ ಮೂಲ ಉದ್ದೇಶ. ಪರಿಶ್ರಮದಿಂದ ಮಾತ್ರ ಎಲ್ಲ ಕಾರ್ಯ ನಡೆಯಲು ಸಾಧ್ಯ ಎಂದು ಗೌರಿ ನಾಯ್ಕ ಹೇಳಿದರು.