ಮಂಡ್ಯ ಜಿಲ್ಲಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ

| Published : Aug 26 2025, 01:02 AM IST

ಸಾರಾಂಶ

ಹಬ್ಬದ ಮುನ್ನಾ ದಿನವಾದ ಸೋಮವಾರ ಮಂಡ್ಯ ನಗರದ ಪೇಟೆಬೀದಿ, ಮಾರುಕಟ್ಟೆ ರಸ್ತೆ, ವಿಶ್ವೇಶ್ವರಯ್ಯ ರಸ್ತೆ, ಹೊಸಹಳ್ಳಿ ಸರ್ಕಲ್, ಹೊಳಲು ವೃತ್ತ ಜನ ಜಂಗುಳಿಯಿಂದ ತುಂಬಿಹೋಗಿತ್ತು. ಹಬ್ಬದ ಸಾಮಾನುಗಳ ಖರೀದಿ ಭರಾಟೆ ಜೋರಾಗಿ ನಡೆದಿತ್ತು. ವರ್ತಕರು-ವ್ಯಾಪಾರಸ್ಥರೆಲ್ಲರೂ ಮಾರಾಟದಲ್ಲಿ ಬ್ಯುಸಿಯಾಗಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಪ್ರತಿಯೊಬ್ಬರ ಮನೆಯಲ್ಲೂ ಸಂತಸ ಮನೆಮಾಡಿದ್ದು, ಸಡಗರ-ಸಂತೋಷದಿಂದ ಗೌರಿ-ಗಣೇಶನನ್ನು ಬರಮಾಡಿಕೊಳ್ಳುವುದಕ್ಕೆ ಸಿದ್ಧತೆ ನಡೆಸಿದ್ದಾರೆ.

ಹಬ್ಬದ ಮುನ್ನಾ ದಿನವಾದ ಸೋಮವಾರ ನಗರದ ಪೇಟೆಬೀದಿ, ಮಾರುಕಟ್ಟೆ ರಸ್ತೆ, ವಿಶ್ವೇಶ್ವರಯ್ಯ ರಸ್ತೆ, ಹೊಸಹಳ್ಳಿ ಸರ್ಕಲ್, ಹೊಳಲು ವೃತ್ತ ಜನ ಜಂಗುಳಿಯಿಂದ ತುಂಬಿಹೋಗಿತ್ತು. ಹಬ್ಬದ ಸಾಮಾನುಗಳ ಖರೀದಿ ಭರಾಟೆ ಜೋರಾಗಿ ನಡೆದಿತ್ತು. ವರ್ತಕರು-ವ್ಯಾಪಾರಸ್ಥರೆಲ್ಲರೂ ಮಾರಾಟದಲ್ಲಿ ಬ್ಯುಸಿಯಾಗಿದ್ದರು.

ಮನೆಯಲ್ಲಿ ಗೌರಿ-ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರು ಪೂಜಾ ಸಾಮಗ್ರಿಗಳು, ಚೆಂದದ ಪುಟ್ಟ ಗೌರಿ-ಗಣೇಶ ವಿಗ್ರಹಗಳ ಆಯ್ಕೆಯಲ್ಲಿ ತಲ್ಲೀನರಾಗಿದ್ದರು. ಇಷ್ಟವಾದ ಮೂರ್ತಿಗಳನ್ನು ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದರು.

ದೇವಾಲಯಗಳಲ್ಲೂ ಗೌರಿ ಪ್ರತಿಷ್ಠಾಪನೆ:

ಸಾಮಾನ್ಯವಾಗಿ ದೇವಾಲಯಗಳಲ್ಲೇ ಗೌರಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ದೇವರ ದರ್ಶನಕ್ಕೆ ಆಗಮಿಸುವ ಮಹಿಳೆಯರು ಅಲ್ಲೇ ಗೌರಿಯನ್ನು ಪೂಜಿಸಿ ಮುತ್ತೈದೆಯರಿಗೆ ಬಾಗಿನ ಸಮರ್ಪಿಸುವರು. ಇನ್ನೂ ಹಲವರು ಮನೆಯಲ್ಲೇ ಗೌರಿಯನ್ನು ಪುಷ್ಪಮಂಟಪದಲ್ಲಿ ಪ್ರತಿಷ್ಠಾಪಿಸಿ, ವಿವಿಧ ಹೂವುಗಳಿಂದ ಅಲಂಕರಿಸುವರು. ನೈವೇದ್ಯವಾಗಿ ಹೋಳಿಗೆ, ಪೊಂಗಲ್, ಪುಳಿಯೋಗರೆ, ಮೊಸರನ್ನ, ಹಾಲು, ತುಪ್ಪ, ಮೊಸರನ್ನು ತಯಾರಿಸಿಟ್ಟುಕೊಳ್ಳುವುದಕ್ಕೆ ಅಣಿಯಾಗುತ್ತಿದ್ದರು.

ಗಣಪತಿಯನ್ನು ಪ್ರತಿಷ್ಠಾಪಿಸುವುದಕ್ಕೆ ಮೊದಲಿನಷ್ಟು ಉತ್ಸಾಹ ಯುವಕರಲ್ಲಿ ಈಗ ಇಲ್ಲವಾದರೂ ಕೆಲವು ಯುವಕರು ದೊಡ್ಡ ಗಣೇಶನನ್ನು ಖರೀದಿಸಿ ಪ್ರತಿಷ್ಠಾಪಿಸುವುದಕ್ಕೆ ಉತ್ಸುಕರಾಗಿದ್ದರು. ಅಂಗಡಿಗಳಲ್ಲಿ ಗಣೇಶನ ತರಹೇವಾರಿ ಬಣ್ಣ, ವಿವಿಧ ವಿನ್ಯಾಸದ ವಿಗ್ರಹಗಳು ಗಮನಸೆಳೆಯುತ್ತಿದ್ದವು. ಯುವಕರು ಚೌಕಾಸಿ ವ್ಯಾಪಾರ ಮಾಡಿ ಮೂರ್ತಿಗಳನ್ನು ಖರೀದಿಸುವ ದೃಶ್ಯಗಳು ಕಂಡುಬಂದವು. ಗೌರಿ ಹಬ್ಬಕ್ಕೆ ಗೌರಿ ಸಾಮಗ್ರಿ ೨೦ ರು., ಹೆಡೆ ಸಾಮಾನು ೩೦ ರು.ನಂತೆ ಮಾರಾಟವಾಗುತ್ತಿತ್ತು.

ಪುಟ್ಟ ಮಕ್ಕಳಿಗೆ ಪುಟಾಣಿ ಗೌರಿ-ಗಣೇಶನನ್ನು ಕೂರಿಸುವ ಕ್ರೇಜ್. ತಂದೆ-ತಾಯಿ ಬಳಿ ಹಠ ಮಾಡಿ ಪುಟ್ಟ ಗೌರಿ-ಗಣೇಶನನ್ನು ಪ್ರತಿಷ್ಠಾಪಿಸಿ ಸಂಭ್ರಮಿಸಲು ಅಣಿಯಾಗುತ್ತಿದ್ದರು. ಹಬ್ಬಕ್ಕೆ ಹೊಸ ಬಟ್ಟೆ ಧರಿಸುವ ಸಂತಸ ಒಂದೆಡೆಯಾದರೆ, ಗೌರಿ-ಗಣೇಶನನ್ನು ಕೂರಿಸಿ ಪೂಜಿಸುವುದರೊಂದಿಗೆ ಗಣೇಶನನ್ನು ವಿಸರ್ಜಿಸಿ ಆನಂದಿಸುವ ಸಂಭ್ರಮ ಮತ್ತೊಂದೆಡೆಯಾಗಿತ್ತು.

ಹೂವು-ಹಣ್ಣು-ತರಕಾರಿ ಬೆಲೆ ಸಾಮಾನ್ಯ:

ಈ ಬಾರಿಯ ಗೌರಿ-ಗಣೇಶ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ ಸಾಮಾನ್ಯಜನರನ್ನು ತಟ್ಟಿದಂತೆ ಕಂಡುಬರುತ್ತಿಲ್ಲ. ಸಾಮಾನ್ಯ ದಿನಗಳಲ್ಲಿದ್ದಷ್ಟೇ ಬೆಲೆ ಹಣ್ಣು, ತರಕಾರಿಗಳಲ್ಲೂ ಕಂಡುಬರುತ್ತಿತ್ತು. ಹೂವಿನ ಬೆಲೆಯಲ್ಲಿ ಏರಿಕೆ ಕಂಡುಬಂದಿತ್ತು. ವರಮಹಾಲಕ್ಷ್ಮೀ ಹಬ್ಬಕ್ಕೆ ಹೋಲಿಸಿದರೆ ಬೆಲೆ ಕಡಿಮೆಯಾಗಿತ್ತು. ಹಣ್ಣುಗಳ ಪೈಕಿ ಪ್ರತಿ ಕೆಜಿ ಮಿಕ್ಸ್-೧೫೦ ರು.. ಕಿತ್ತಳೆ-೮೦-೧೦೦ ರು., ಸೇಬು-೧೦೦-೧೫೦ ರು., ಮೂಸಂಬಿ-೮೦ ರು., ದಾಳಿಂಬೆ-೧೦೦ ರು., ದ್ರಾಕ್ಷಿ-೧೨೦ ರು., ಕಪ್ಪು ದ್ರಾಕ್ಷಿ-೧೬೦ ರು., ಮರಸೇಬು-೧೦೦ ರು., ಬಾಳೆಹಣ್ಣು-೧೦೦ ರು., ಸೀಬೆ-೮೦ ರು., ಸೀತಾಫಲ-೧೨೦ ರು., ಪೈನಾಪಲ್ ಒಂದಕ್ಕೆ ೫೦ ರು.ನಂತೆ ಮಾರಾಟವಾಗುತ್ತಿತ್ತು.

ತರಕಾರಿಗಳಲ್ಲಿ ಮಿಕ್ಸ್ ಪ್ರತಿ ಕೆಜಿಗೆ ೧೦೦ ರು., ಬೀನಿಸ್-೬೦ ರು., ಗೆಡ್ಡೆಕೋಸು-೬೦ ರು., ಕ್ಯಾರೆಟ್-೬೦ ರು., ಬೀಟ್‌ರೂಟ್-೬೦ ರು., ಬೆಂಡೆಕಾಯಿ-೪೦ ರು., ಮೂಲಂಗಿ-೩೦ ರು., ಟಮ್ಯಾಟೋ-೪೦ ರು., ಸೌತೆಕಾಯಿ- ೧೦ ರು., ನಿಂಬೆಹಣ್ಣು-೪ಕ್ಕೆ ೨೦ ರು. ಇದ್ದರೆ, ಸೊಪ್ಪುಗಳಲ್ಲಿ ಕೊತ್ತಂಬರಿ ಒಂದು ಕಟ್ಟಿಗೆ ೨೦ ರು., ಪುದೀನ-೧೦ ರು., ಸಬ್ಬಸಿಗೆ ಸೊಪ್ಪು-೨೦ ರು., ಪಾಲಾಕ್-೧೦ ರು., ಕೀರೆಸೊಪ್ಪು-೧೦ ರು., ಮೆಂತ್ಯ-೨೦ ರು.ನಂತೆ ಮಾರಾಟವಾಗುತ್ತಿದ್ದುದು ಕಂಡುಬಂದಿತು.

ಹೂವಿನ ಬೆಲೆಯೂ ಸಾಮಾನ್ಯವಾಗಿತ್ತು. ಪ್ರತಿ ಮಾರು ಸೇವಂತಿಗೆ ೧೦೫ ರು., ಕಾಕಡಾ-೨೦೦ ರು., ಮಲ್ಲಿಗೆ-೩೦೦ ರು., ಮರಳೆ-೨೦೦ ರು., ಕನಕಾಂಬರ-೧೩೦ ರು., ಚೆಂಡು ಹೂ-೮೦ ರು. ಹಾರಗಳು ೧೫೦ ರು.ನಿಂದ ೨೦೦ ರು., ಮಲ್ಲಿಗೆ ಹಾರ ೬೦೦ ರು.ಗಳಿಗೆ ಮಾರಾಟವಾಗುತ್ತಿದ್ದವು.