ಸಾರಾಂಶ
- ಶ್ರೀ ವಿದ್ಯಾಗಣಪತಿ ಮೂರ್ತಿ ಪ್ರತಿಷ್ಠಪನೆ: ತೇಜಸ್ವಿಸೂರ್ಯ ಭಾಗಿ । ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಳೆಯ ಅಡ್ಡಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳ ಕಾಲ ಗೌರಿ - ಗಣೇಶ ಹಬ್ಬ ಸಂಭ್ರಮದಿಂದ ನಡೆಯಿತು. ಆದರೆ, ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಳೆ ಅಡ್ಡಿ ಪಡಿಸಿದೆ. ಮಲೆನಾಡಿನ ಹಲವೆಡೆ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಮೆರವಣಿಗೆ, ಉತ್ಸವಕ್ಕೂ ಅಡ್ಡಿಯಾಗಿದೆ.
ಗಣೇಶಮೂರ್ತಿ ತಯಾರಕರು, ತಾವು ಸಿದ್ಧಪಡಿಸಿ ಕಳೆದ ಒಂದು ವಾರದಿಂದ ನಗರ ಮತ್ತು ಪೇಟೆಯ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಇಟ್ಟಿದ್ದರು. ಮಳೆ ಸಾಧ್ಯತೆಯಿಂದ ಆದಷ್ಟು ಸುರಕ್ಷಿತ ಪ್ರದೇಶಗಳಲ್ಲಿ ಇಟ್ಟಿದ್ದರು. ಬುಧವಾರ ಬೆಳಿಗ್ಗೆ ಮಳೆ ಬಿಡುವು ನೀಡಿತ್ತು. ಆದರೆ, ಮಧ್ಯಾಹ್ನ ಆರಂಭವಾದ ಮಳೆ ಗುರುವಾರ ದವರೆಗೆ ಇನ್ನಷ್ಟು ಜೋರಾಗಿತ್ತು. ಆದರೆ, ಭಕ್ತರ ಉತ್ಸಹ ಕಡಿಮೆಯಾಗಿರಲಿಲ್ಲ,ಮಳೆಯ ನಡುವೆಯೇ ಟ್ರ್ಯಾಕ್ಟರ್, ಆಟೋ, ಟಾಟಾ ಏಸಿ ವಾಹನಗಳಲ್ಲಿ ಗಣೇಶ ಮೂರ್ತಿ ತೆಗೆದುಕೊಂಡು ಹೋಗುತ್ತಿರುವುದು ಎಲ್ಲೆಡೆ ಕಂಡು ಬರುತ್ತಿತ್ತು. ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ ರಾತ್ರಿ ವೇಳೆಯಲ್ಲಿ ವಿಸರ್ಜಿಸಲಾಯಿತು. ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿದ ಗಣೇಶ ಮೂರ್ತಿ ವಿಸರ್ಜಿಸಲು ಸ್ಥಳೀಯ ಸಂಸ್ಥೆಗಳು ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಟ್ರ್ಯಾಕ್ಟರ್‌ಗಳಲ್ಲಿ ನೀರು ತುಂಬಿಸಿ ವ್ಯವಸ್ಥೆ ಮಾಡಿದ್ದವು.
ಹಬ್ಬದ ಹಿನ್ನಲೆಯಲ್ಲಿ ಚಿಕ್ಕಮಗಳೂರು ನಗರ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಸಂಜೆ ಜಾರಿ ರಾತ್ರಿಯಾಗುತ್ತಿದ್ದಂತೆ ದೀಪಾಲಂಕಾರ ನಗರದ ಅಂದ ಹೆಚ್ಚು ಮಾಡಿದೆ. ಒಂದೆಡೆ ಗಣೇಶ ಮೂರ್ತಿ ವಿಸರ್ಜನೆ ಆಗುತ್ತಿದ್ದರೆ, ಇನ್ನೊಂದೆಡೆ ಯುವಕರು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿಗಳನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗುವ ದೃಶ್ಯ ಕಣ್ಣಿಗೆ ಕಟ್ಟುವಂತೆ ಇತ್ತು. ಆದರೆ, ಗುರುವಾರ ಚುರುಕುಗೊಂಡ ಮಳೆ ಆ.30 ರವರೆಗೆ ಮುಂದುವರಿಯುವುದರಿಂದ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆಗಳಿಗೆ ಅಡ್ಡಿಪಡಿಸುವ ಸಾಧ್ಯತೆ ಇದೆ.ಚಿಕ್ಕಮಗಳೂರಿನ ಆಜಾದ್ ಪಾರ್ಕ್, ವಿಜಯಪುರ, ಹಿಂದೂ ಮಹಾಸಭಾ ಗಣಪತಿಗಳಲ್ಲಿ ಪ್ರತಿ ದಿನ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸಂಜೆ ವೇಳೆಗೆ ಭಕ್ತರು ಪೆಂಡಾಲ್ ಗಳಿಗೆ ಬಂದು ಗಣೇಶ ದರ್ಶನ ಪಡೆಯುವುದು, ನಂತರ ಕೆಲ ಹೊತ್ತು ಸಾಂಸ್ಕೃತಿಕ ಕಾರ್ಯಕ್ರಮ ನೋಡಿಕೊಂಡು ಹೋಗುವುದನ್ನು ಹಲವು ವರ್ಷಗಳಿಂದ ರೂಢಿ ಮಾಡಿಕೊಂಡು ಬಂದಿದ್ದಾರೆ. ಆದರೆ, ಈ ಬಾರಿ ಮಳೆ ಇರುವುದರಿಂದ ಜನರು ಪೆಂಡಾಲ್‌ಗಳತ್ತಾ ಬರುವುದು ಕಡಿಮೆಯಾಗಲಿದೆ. ವರುಣನ ಆರ್ಭಟ ವಿಘ್ನ ನಿವಾರಕನಿಗೂ ತಟ್ಟಿದೆ.1730 ಗಣೇಶ ಪ್ರತಿಷ್ಠಾಪನೆ
ಜಿಲ್ಲೆಯಾದ್ಯಂತ ಕಳೆದ ವರ್ಷ ಸುಮಾರು 1900ಕ್ಕೂ ಹೆಚ್ಚು ಕಡೆಗಳಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡಲಾಗಿತ್ತು. ಆದರೆ, ಈ ಬಾರಿ ಈ ಸಂಖ್ಯೆ 1730 ಕ್ಕೆ ಕುಸಿದಿದೆ. ಜಿಲ್ಲಾ ಪೊಲೀಸ್ ಇಲಾಖೆ 7 ಅತಿ ಸೂಕ್ಷ್ಮ ಹಾಗೂ 157 ಸೂಕ್ಷ್ಮ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳಗಳನ್ನು ಗುರುತು ಮಾಡಿದೆ. ಜತೆಗೆ ಮೆರವಣಿಗೆ ಸಾಗುವ ಕೆಲವು ಮಾರ್ಗಗಳನ್ನು ಸೂಕ್ಷ್ಮ ಎಂಬುದಾಗಿ ಗುರುತು ಮಾಡಿದೆ. ಬಂದೋಬಸ್ತಿಗೆ ಸುಮಾರು 1500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಇಲಾಖೆ ಬಳಸಿಕೊಳ್ಳುತ್ತಿದೆ. 16 ಕಡೆಗಳಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದೆ. 24 ಮಂದಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿ ಕಾರಿಗಳನ್ನು ಸೆ. 28ರವರೆಗೆ ಕಾರ್ಯನಿರ್ವಹಿಸಲು ನೇಮಕ ಮಾಡಿಕೊಳ್ಳಲಾಗಿದೆ.-- ಬಾಕ್ಸ್ --ಶ್ರೀ ವಿದ್ಯಾಗಣಪತಿ ಮೂರ್ತಿ ಪ್ರತಿಷ್ಠಪನೆ: ತೇಜಸ್ವಿಸೂರ್ಯ ಭಾಗಿಚಿಕ್ಕಮಗಳೂರು: ನಗರದ ಗೌರಿ ಕಾಲುವೆ ಬಡಾವಣೆಯಲ್ಲಿ ಛಾಯಾಪುತ್ರ ಯುವಕರ ಸಂಘದಿಂದ ಶ್ರೀ ವಿದ್ಯಾಗಣಪತಿ ಮೂರ್ತಿಯನ್ನು ಬುಧವಾರ ಸಂಜೆ ಪದಾಧಿಕಾರಿಗಳು, ಭಕ್ತಾಧಿಗಳು ಹಾಗೂ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿ ಚೇತನ್, ಸಂತೋಷ್, ಪುನೀತ್, ಪ್ರವೀಣ್, ರವಿ, ಗಿರೀಶ್, ನಂಜೇಶ್, ನವೀನ್, ತ್ಯಾಗರಾಜ್, ಲೋಹಿತ್, ಪುನೀತ್, ಸುಜನ್, ವರುಣ್, ಅಭಿ, ಸುಜಿತ್, ಶ್ರೀಕಾಂತ್, ಸುಜಾತ, ಜಾನಕಮ್ಮ, ದರ್ಶನ್, ರವಿ ಇದ್ದರು.ಹಿಂದೂ ಮಹಾಸಭಾ ಗಣಪತಿ: ಹಿಂದೂ ಮಹಾ ಸಭಾ ಗಣಪತಿ ಸೇವಾ ಸಂಘದಿಂದ 12ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಬುಧವಾರ ಸಂಜೆ ಹಿಂದೂ ಮಹಾ ಸಭಾಗಣಪತಿ ಮೂರ್ತಿಯನ್ನು ನೂರಾರು ಭಕ್ತರ ಸಮ್ಮುಖದಲ್ಲಿ ವಾದ್ಯಗಳೊಂದಿಗೆ ಕರೆತಂದು ಭವ್ಯ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು.ಮಹಿಳೆಯರು, ಯುವಕರು ಹಾಗೂ ಹಿರಿಯರು ಭಾರತೀಯ ಸಂಪ್ರದಾಯದಂತೆ ವೇಷಭೂಷಣದಲ್ಲಿ ನಗರದ ಓಂಕಾರೇಶ್ವರ ಸಮೀಪ ಆಗಮಿಸಿ ಶ್ರೀಯನ್ನು ಪೂಜಿಸಿದರು. ಪ್ರತಿಷ್ಠಾಪನೆ ಬಳಿಕ ಸಂಘದ ಅಧ್ಯಕ್ಷ ಆಟೋ ಶಿವಣ್ಣ ನೇತೃತ್ವದಲ್ಲಿ ಪೂಜಾ ಕೈಂಕಾರ್ಯ ಜರುಗಿದವು. ಮಹಾಮಂಗಳಾರತಿ ನಂತರ ಭಕ್ತಾಧಿಗಳಿಗೆ ಪ್ರಸಾದ ವಿತರಿಸಲಾಯಿತು.ವಿಶೇಷವಾಗಿ ಹಿಂದೂ ಮಹಾಗಣಪತಿ ಮಂಟಪದ ಸುತ್ತಮುತ್ತಲು ಪುರಾತನ ದೇವಾಲಯಗಳಲ್ಲಿ ಕೆತ್ತನೆ ಯಲ್ಲಿರುವಂತೆ ಗಣಪತಿ, ಈಶ್ವರ, ಆಂಜನೇಯ, ನಟರಾಜ, ಉಗ್ರ ನರಸಿಂಹ, ವಾಮನ, ಶ್ರೀರಾಮ, ಗರುಡ, ಮಹಾದೇವ ಮತ್ತು ವಾರಹಾ ದೇವತೆಗಳ ಮೂರ್ತಿಗಳು ನೋಡುಗರರನ್ನು ಸೆಳೆಯುತ್ತಿದ್ದವು.ಯುಜನರು ಮತ್ತು ಮಕ್ಕಳು ಅಪರೂಪದ ರೀತಿಯಲ್ಲಿ ತಯಾರಿಸಿದ ಮೂರ್ತಿಗಳೆದುರು ಸೆಲ್ಫಿ ಕಿಕ್ಕಿಸಿ ಕೊಂಡು ಸಂತೋಷಪಟ್ಟರು. ಅಂದೇ ಸಂಜೆಯೇ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಭಕ್ತಿ ಸಂಗೀತ ವಿದ್ವಾನ್ ಬಿ.ಎಂ. ಸುರೇಶ್ ಗವಾಯಿ ಮತ್ತು ಬಳಗದಿಂದ ನೆರವೇರಿತು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಕೃಷ್ಣ, ಸದಸ್ಯರಾದ ಸಂತೋಷ್ ಕೋಟ್ಯಾನ್, ಎಲ್.ಎಂ. ಶರತ್, ಶ್ಯಾಮ್ ವಿ.ಗೌಡ, ಅಮಿತ್, ಕಿಶೋರ್, ಸುನೀಲ್ ಆಚಾರ್ಯ, ಶಶಿ ಆಲ್ದೂರು, ರಾಜೇಂದ್ರ, ಅಂಕಿತಾ, ಅಕ್ಷತ, ನಯನ್, ಗೌತಮ್, ಆಕಾಶ್ ಇದ್ದರು. 28 ಕೆಸಿಕೆಎಂ 1ಚಿಕ್ಕಮಗಳೂರಿನ ಗೌರಿ ಕಾಲುವೆ ಬಡಾವಣೆಯಲ್ಲಿ ಛಾಯಾಪುತ್ರ ಯುವಕರ ಸಂಘದಿಂದ ಶ್ರೀ ವಿದ್ಯಾಗಣ ಪತಿ ಮೂರ್ತಿಯನ್ನು ಬುಧವಾರ ಸಂಜೆ ಪದಾಧಿಕಾರಿಗಳು, ಭಕ್ತಾಧಿಗಳು ಹಾಗೂ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಯಿತು.
-- 28 ಕೆಸಿಕೆಎಂ 2ಚಿಕ್ಕಮಗಳೂರಿನ ವಿಜಯಪುರದಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ದೊಡ್ಡ ಗಣಪತಿ.