ಹಬ್ಬದ ಹಿಂದಿನ ದಿನ ಬೆಲೆಗಳು ಜಾಸ್ತಿಯಾಗುತ್ತಿದ್ದುದು ಮಾಮೂಲು. ಮಾರುಕಟ್ಟೆಯಲ್ಲಿ ಅಂದು ವಿಪರೀತ ರಶ್ ಇರುತ್ತದೆ ಎಂದು ಮುಂಚಿತವಾಗಿಯೇ ಖರೀದಿಗೆ ಬಂದೆವು. ಆದರೆ, ಬೆಲೆಗಳು ಕಡಿಮೆಯೇನಿಲ್ಲ. ವರಮಹಾಲಕ್ಷ್ಮೀ ಹಬ್ಬಕ್ಕೆ ಹೋಲಿಸಿದರೆ ತುಂಬಾ ದುಬಾರಿಯೂ ಅಲ್ಲಾ. ಕನಕಾಂಬರ 100 ಗ್ರಾಂ ಹೂವಿಗೆ ₹200 ಕೊಟ್ಟೆವು. ತಾವರೆ ಹೂವು ಸಣ್ಣ ಮೊಗ್ಗಿಗೂ ₹50 ಕೇಳುತ್ತಿದ್ದಾರೆ. ಈ ದುಬಾರಿ ಬೆಲೆಗಳಲ್ಲಿ ಹಬ್ಬಗಳು ಯಾಕಾದ್ರೂ ಬರುತ್ತವೋ ಅನಿಸುತ್ತೆ ಎಂದು ಖರೀದಿಗೆ ಬಂದಿದ್ದ ಗ್ರಾಹಕರಾದ ಸುಷ್ಮಾ, ಮಂಜುಳ ಮತ್ತು ನಿರ್ಮಲರವರು ಹೇಳಿದರು.
ದಯಾಸಾಗರ್.ಎನ್
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಂದೆಡೆ ಮಳೆಯಾಗದೇ ಬರ ತಾಂಡವವಾಡುತ್ತಿದ್ದರೆ, ಮತ್ತೊಂದೆಡೆ ಗೌರಿ ಗಣೇಶ ಹಬ್ಬದಾಚರಣೆಗೆ ಬರದ ಬರೆಯ ನಡುವೆಯೂ ಸಿದ್ಧತೆ ನಡೆಸುತ್ತಿರುವ ಜನರಿಗೆ ಬೆಲೆಯೇರಿಕೆಯ ಶಾಕ್ ಎದುರಾಗಿದೆ. ಹಬ್ಬಕ್ಕಾಗಿ ದಿನಬಳಕೆ ವಸ್ತುಗಳು ಹಾಗೂ ಗೌರಿ- ಗಣೇಶ ಮೂರ್ತಿಗಳು ದುಬಾರಿಯಾಗಿವೆ. ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗೆ ಹಲವಾರು ನಿಯಮಗಳನ್ನು ಹೇರಲಾಗಿದೆ.ಗಣೇಶ ಮೂರ್ತಿಗಳು ದುಬಾರಿ:
ಸರ್ಕಾರ ಪಿಒಪಿ ಗಣೇಶಮೂರ್ತಿಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ, ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಕೂರಿಸುವಂತೆ ಆದೇಶವಿರುವುದರಿಂದ ಪಾರಂಪರಿಕ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಕಳೆದ ಬಾರಿ ಕನಿಷ್ಠ ₹50 ರಿಂದ ₹500 ರುಪಾಯಿಗಳಿಗೆ ಇದ್ದ ಚಿಕ್ಕ ಚಿಕ್ಕ ಗಣೇಶ ಮೂರ್ತಿಗಳು ಈ ಬಾರಿ ₹500 ರಿಂದ ₹2500 ಗಳಿಗೇರಿವೆ.ಹೂವು- ಹಣ್ಣುಗಳ ವ್ಯಾಪಾರದ ಭರಾಟೆ:
ವರಮಹಾಲಕ್ಷ್ಮೀ ಹಬ್ಬಕ್ಕೆ ಹೋಲಿಸಿದರೆ ಗಣೇಶ ಹಬ್ಬಕ್ಕೆ ಹಣ್ಣು- ಹೂವಿನ ಬೆಲೆಗಳು ಕೊಂಚ ಕಡಿಮೆ ಇವೆ. ಸೇಬು ಕೆಜಿ ₹180 ರಿಂದ ₹250, ಮರಸೇಬು ₹150- ₹200 ,ಸಪೋಟ ₹100, ಪೈನಾಪಲ್ ₹20ರಿಂದ ₹70ಕ್ಕೇರಿದೆ, ಸೀಬೆ ₹60- ₹100 , ಮೋಸಂಬಿಯ ಬೆಲೆ ₹70- ₹120, ಕಿತ್ತಳೆ ₹100 ರಿಂದ ₹150 ದಾಟಿದೆ. ಏಲಕ್ಕಿ ಬಾಳೆ ಕೆಜಿ ಗೆ ₹100- ₹120ವರೆಗೆ, ಪಚ್ಚಬಾಳೆ ₹40- ₹60, ದಾಳಿಂಬೆ ₹150- ₹250ಕ್ಕೇರಿದ್ದು, ದ್ರಾಕ್ಷಿ ಹಣ್ಣಿನ ಬೆಲೆ ₹100 , ತೆಂಗಿನ ಕಾಯಿಯ ಬೆಲೆ ₹35- ₹80 ದಾಟಿದೆ. ಇನ್ನು ಗುಲಾಬಿ, ಸೇವಂತಿ ಮೊದಲಾದ ಬಿಡಿ ಹೂಗಳು ಕೆ.ಜಿಗೆ ₹150ರಿಂದ ₹300 ಮಾರಾಟವಾಗುತ್ತಿವೆ. ಕಾಕಡ ಕೆಜಿಗೆ ₹750, ಮಳ್ಳೆ ₹600, ಕನಕಾಂಬರ ₹1000 ಇದ್ದು, ಹಬ್ಬವನ್ನು ನೆನಪಿಸುತ್ತಿವೆ. ಗಣೇಶನ ಉತ್ಸವ ಮೂರ್ತಿ, ಮಾವಿನಸೊಪ್ಪು, ಬಾಳೆಕಂದು ಮೊದಲಾದ ಸಾಮಗ್ರಿಗಳ ಬೆಲೆಗಳು ಸಹ ಏರಿಕೆಯಾಗಿವೆ. ಅಗತ್ಯ ವಸ್ತುಗಳ ಬೆಲೆಯೇರಿಕೆಯಾದರೂ ಸಹ ವರ್ಷಕ್ಕೊಮ್ಮೆ ಬರುವ ಗಣೇಶ ಹಬ್ಬವನ್ನು ಆಚರಿಸಲು ಜಿಲ್ಲೆಯ ಜನತೆ ಉತ್ಸಾಹದಿಂದ ಸಕಲ ಸಿದ್ಧತೆ ನಡೆಸುತ್ತಿದ್ದಾರೆ.ವರಮಹಾಲಕ್ಷ್ಮೀ ಹಬ್ಬಕ್ಕೆ ಹೂವಿನ ಬೇಡಿಕೆ ಹೆಚ್ಚಿದ್ದು ಇಳುವರಿ ಕಡಿಮೆಯಾಗಿತ್ತು. ಆದರೆ ಗಣೇಶ ಹಬ್ಬಕ್ಕೆ ಬೇಡಿಕೆಗಿಂತ ಕೊಂಚ ಹೆಚ್ಚಾಗಿ ಹೂವು ಸಹ ಬಂದಿರುವುದರಿಂದ ಬೆಲೆ ಕಡಿಮೆಯಾಗಿದೆ. ಇದರಿಂದ ಗ್ರಾಹಕರು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಸಂತಸವಾದರೆ ಹೂ ಬೆಳೆದ ರೈತನಿಗೆ ಮಾತ್ರ ಹೆಚ್ಚು ಲಾಭಾಂಶ ದೊರಕುತ್ತಿಲ್ಲ ಎಂದು ಎಪಿಎಂಸಿಯ ಶ್ರೀ ತಿರುಮಲ ಫ್ಲವರ್ ಸ್ಟಾಲ್ ಮಾಲೀಕ ಹಾಗೂ ಎಪಿಎಂಸಿ ಹೂವಿನ ವರ್ತಕರ ಸಂಘದ ಅಧ್ಯಕ್ಷ ಮುಸ್ಟೂರು ಶ್ರೀಧರಗೌಡ ತಿಳಿಸಿದರು.
ಹಬ್ಬದ ಹಿಂದಿನ ದಿನ ಬೆಲೆಗಳು ಜಾಸ್ತಿಯಾಗುತ್ತಿದ್ದುದು ಮಾಮೂಲು. ಮಾರುಕಟ್ಟೆಯಲ್ಲಿ ಅಂದು ವಿಪರೀತ ರಶ್ ಇರುತ್ತದೆ ಎಂದು ಮುಂಚಿತವಾಗಿಯೇ ಖರೀದಿಗೆ ಬಂದೆವು. ಆದರೆ, ಬೆಲೆಗಳು ಕಡಿಮೆಯೇನಿಲ್ಲ. ವರಮಹಾಲಕ್ಷ್ಮೀ ಹಬ್ಬಕ್ಕೆ ಹೋಲಿಸಿದರೆ ತುಂಬಾ ದುಬಾರಿಯೂ ಅಲ್ಲಾ. ಕನಕಾಂಬರ 100 ಗ್ರಾಂ ಹೂವಿಗೆ ₹200 ಕೊಟ್ಟೆವು. ತಾವರೆ ಹೂವು ಸಣ್ಣ ಮೊಗ್ಗಿಗೂ ₹50 ಕೇಳುತ್ತಿದ್ದಾರೆ. ಈ ದುಬಾರಿ ಬೆಲೆಗಳಲ್ಲಿ ಹಬ್ಬಗಳು ಯಾಕಾದ್ರೂ ಬರುತ್ತವೋ ಅನಿಸುತ್ತೆ ಎಂದು ಖರೀದಿಗೆ ಬಂದಿದ್ದ ಗ್ರಾಹಕರಾದ ಸುಷ್ಮಾ, ಮಂಜುಳ ಮತ್ತು ನಿರ್ಮಲರವರು ಹೇಳಿದರು.ಹಬ್ಬಕ್ಕೆ ಮುಂಚಿತವಾಗಿಯೇ ನಗರದಲ್ಲಿ ಫೈನಾಪಲ್, ಸಪೋಟ ಹಣ್ಣುಗಳ ಸಂಗ್ರಹ ಜೋರಾಗಿತ್ತು. ಸಾರ್ವಜನಿಕರು ಎಪಿಎಂಸಿ ಮಾರುಕಟ್ಟೆ, ಟೌನ್ ಹಾಲ್ ಸರ್ಕಲ್, ಎಂಜಿ ರಸ್ತೆ, ಬಜಾರ್ ರಸ್ತೆ, ಬಿ.ಬಿ.ರಸ್ತೆ ಹಾಗೂ ಹೊರವಲಯದ ಕೆ.ವಿ.ಕ್ಯಾಂಪಸ್ ಹೂ ಮಾರುಕಟ್ಟೆಗಳಲ್ಲಿ ಸೇರಿದಂತೆ ವಿವಿಧೆಡೆ ಹಣ್ಣು, ಹೂವು ಖರೀದಿಯಲ್ಲಿ ತೊಡಗಿಸಿಕೊಂಡಿರುವ ದೃಶ್ಯಗಳು ಕಂಡು ಬಂದವು.