ಸಾರಾಂಶ
ಜಿಲ್ಲೆಯಲ್ಲಿ ಈ ಬಾರಿ 1778 ಸಾರ್ವಜನಿಕ ಗಣಪತಿ ಪ್ರತಿಷ್ಟಾಪನೆ । ಭರದಿಂದ ಸಾಗುತ್ತಿರುವ ಸಕಲ ಸಿದ್ಧತೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಾಫಿ ನಾಡಿನಲ್ಲಿ ಶುಕ್ರವಾರದಿಂದ ಗೌರಿ - ಗಣೇಶ ಹಬ್ಬದ ಸಡಗರ ಆರಂಭವಾಗಲಿದೆ. ಇದಕ್ಕೆ ಪೂರ್ವ ತಯಾರಿಯಂತೆ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಪೂಜಾ ಸಾಮಾಗ್ರಿಗಳ ಖರೀದಿ ಜೋರಾಗಿತ್ತು.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಅಂದರೆ, ಕಳೆದ ವರ್ಷ 1170 ಕಡೆಗಳಲ್ಲಿ ಗಣಪತಿ ಪ್ರತಿಷ್ಟಾಪನೆ ಆಗಿದ್ದರೆ, ಈ ಬಾರಿ 1778 ಗಣಪತಿ ಪ್ರತಿಷ್ಟಾಪನೆ ಆಗಲಿವೆ. ಇದಕ್ಕಾಗಿ ಪೊಲೀಸ್ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯುವ ಪ್ರಕ್ರಿಯೆ ಕೂಡ ಇದೀಗ ಕೊನೆ ಹಂತಕ್ಕೆ ಬಂದಿದೆ.ಅನುಮತಿ ಪಡೆಯಲು ಜಿಲ್ಲಾ ಹಾಗೂ ತಾಲೂಕು ಆಡಳಿತ ಸಿಂಗಲ್ ವಿಂಡೋ ತೆರೆದಿದ್ದು, ಇದರಿಂದ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡುವವರಿಗೆ ಹೆಚ್ಚಿನ ಅನುಕೂಲವಾಗಿದೆ. ಪೆಂಡಾಲ್ ನಿರ್ಮಾಣ ಕಾರ್ಯ, ವಿದ್ಯುತ್ ದೀಪದ ಅಲಂಕಾರ ಭರದಿಂದ ನಡೆಯುತ್ತಿದೆ.ಇಂದು ಗೌರಿ ಪ್ರತಿಷ್ಠಾಪನೆ:
ಇನ್ನು ಮನೆಗಳಲ್ಲಿ ಗೌರಿ ಮತ್ತು ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಲು ಈಗಾಗಲೇ ಮಂಟಪ ನಿರ್ಮಿಸುವ ಕೆಲಸದಲ್ಲಿ ಯುವಕ ,ಯುವತಿಯರು ನಿರತವಾಗಿದ್ದಾರೆ.ಇತ್ತ ಮಗಳಿಗೆ ಬಾಗಿನ ಕೊಡಲು ಮನೆಯ ಹಿರಿಯರು ಮೊರ, ಸೀರೆ, ಕುಪ್ಪಸ, ಬಳೆಗಳು, ಅರಿಶಿಣ ಕುಂಕುಮ, ಕಾಯಿ ಬಗೆ ಬಗೆಯ ಹಣ್ಣುಗಳನ್ನು ನಗರದಲ್ಲಿ ಈ ದಿನ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಯುವತಿಯರು ಮತ್ತು ಮಹಿಳೆಯರು ಹಸಿರು ಗಾಜಿನ ಬಳೆ ಸೇರಿದಂತೆ ತಮಗಿಷ್ಟವಾದ ಬಳೆಗಳನ್ನು ಖರೀದಿಸಲು ಅಂಗಡಿಗಳಿಗೆ ಮುಗಿ ಬೀಳುತ್ತಿರುವುದು ಕಂಡು ಬಂತು.
ಶುಕ್ರವಾರ ಬೆಳಿಗ್ಗೆ ಮಹಿಳೆಯರು ನೀರುಹರಿಯುವ ಜಾಗಕ್ಕೆ ಅಂದರೆ ನಲ್ಲಿ, ಸಾರ್ವಜನಿಕ ಬಾವಿ ಬಳಿ ತೆರಳಿ ಗಂಗಾಪೂಜೆ ಸಲ್ಲಿಸುವರು. ಬಳಿಕ ಹಬ್ಬದ ಅಂಗವಾಗಿ ತಯಾರಿಸಿದ್ದ ಸಿಹಿ ಖಾದ್ಯಗಳನ್ನು ಸವಿಯುವರು. ನಂತರ ಬಾಗಿನ ತೆಗೆದುಕೊಂಡು ಮಗಳ ಮನೆಗೆ ತೆರಳಲಿದ್ದಾರೆ. ಶನಿವಾರ ಗಣೇಶ್ ಹಬ್ಬವನ್ನು ಯುವಕರು ಸಡಗರ ಸಂಭ್ರಮದಿಂದ ಆಚರಿಸುವರು.ಚಿಕ್ಕಮಗಳೂರಿನ ಮಹಾತ್ಮಗಾಂಧಿ ರಸ್ತೆ, ಸಂತೆ ಮಾರ್ಕೆಟ್, ಹನುಮಂತಪ್ಪ ವೃತ್ತ, ತೊಗರಿಹಂಕಲ್ ವೃತ್ತ, ಗುರುನಾಥ ಚಿತ್ರಮಂದಿರದ ವೃತ್ತದಲ್ಲಿ ಹೂವು, ಹಣ್ಣುಗಳು ಮಾರಾಟ ಭರ್ಜರಿಯಾಗಿ ನಡೆಯಿತು. ಸೇವಂತಿಗೆ ಮಾರಿಗೆ 100 ರು.. ಚೆಂಡುಹೂವು 50-60, ಕಾಕಡ 200 ರು. ಮಲ್ಲಿಗೆ, ಕನಕಾಂಬರ 200 ರು. ಕಣಗಲು 50 ರು. ದರ ನಿಗದಿಯಾಗಿತ್ತು. ತೆಂಗಿನ ಕಾಯಿ 15 ರು.ಗಳಿಂದ 30 ರು.ಗಳಿಗೆ ಮಾರಾಟವಾಗುತ್ತಿದ್ದವು. ಬಾಳೆಹಣ್ಣು ಕೆಜಿ ಗೆ 120 ರು. ಹಸಿರು ಬಳೆ ಡಜನ್ 30 ರು. ಗೌರಿದಾರ 10ಕ್ಕೆ 6 ರೂಪಾಯಿನಂತೆ ಮಾರಾಟವಾಗುತ್ತಿದ್ದವು.
ಚಿಕ್ಕ ಬಾಳೆ ಕಂದು ಜೊತೆ 50 ರು. ದೊಡ್ಡ ಕಂದು 100 ರು. ಮಾವಿನ ಸೊಪ್ಪ ಕಟ್ಟಿಗೆ 20 ರು. ನಂತೆ ಮಾರಾಟವಾದವು. ಒಟ್ಟಾರೆಯಾಗಿ ಗೌರಿ ಮತ್ತು ಗಣೇಶ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿರುವುದು ಗ್ರಾಮೀಣ ಮತ್ತು ನಗರದ ಪ್ರದೇಶದಲ್ಲಿ ಕಂಡು ಬಂತು.--- ಬಾಕ್ಸ್ ----ಗೌರಿ - ಗಣೇಶ ಹಬ್ಬ, ಈದ್ ಮಿಲಾದ್ ಹಬ್ಬ : ಜಿಲ್ಲಾಡಳಿತ ಸೂಚನೆಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಹಿಂದೂ ಸಮುದಾಯದವರು ಸೆ. 6 ಮತ್ತು 7 ರಂದು ಗೌರಿ - ಗಣೇಶ ಹಬ್ಬ ಹಾಗೂ ಸೆ.16 ರಂದು ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬದ ಸಂಬಂಧ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಮೆರವಣಿಗೆ ಸಾಗುವ ಸಂದರ್ಭದಲ್ಲಿ ಪಟಾಕಿ ಹಚ್ಚುವುದು, ಕರ್ಪೂರ ಹಚ್ಚುವುದು, ವಿವಾದಿತ ಬ್ಯಾನರ್, ಬಂಟಿಂಗ್ಸ್ ಕಟ್ಟುವುದು, ವಿವಾದಾತ್ಮಕ ಘೋಷಣೆ ಕೂಗುವುದು, ಕುಂಕುಮ ಚೆಲ್ಲುವುದು, ಕುಣಿಯುವುದು, ವಿನಾಕಾರಣ ಬಾವುಟಗಳನ್ನು ಹಿಡಿದುಕೊಂಡು ಓಡಾಡು ವುದನ್ನು ಸೂಕ್ಷ್ಮ ಸ್ಥಳಗಳಲ್ಲಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ.
ಚಿಕ್ಕಮಗಳೂರು ನಗರದ ಎಂ.ಜಿ. ರಸ್ತೆ, ಷರೀಫ್ ಗಲ್ಲಿ ಕ್ರಾಸ್, ಅಂಡೆಛತ್ರ ಕ್ರಾಸ್, ಛೋಟಾಮಕ್ಕಾನ್ ಕ್ರಾಸ್, ಬಸವನಹಳ್ಳಿ ವಿಜಯಪುರ ಈದ್ಗಾ, ಬಸವನಹಳ್ಳಿ ಮುಖ್ಯ ರಸ್ತೆ, ಬಡಾಮಕ್ಕಾನ್ ಕ್ರಾಸ್, ಉಪ್ಪಳ್ಳಿ ಹಾಗೂ ಉಪ್ಪಳ್ಳಿ ಸರ್ಕಲ್, ಉಪ್ಪಳ್ಳಿ ಪಾಂಚ್ ಪೀರ್ ದರ್ಗಾ, ಈದ್ಗಾ, ಕೆಇಬಿ., ಭದ್ರಿಯಾ ಸರ್ಕಲ್, ಓಂಕಾರೇಶ್ವರ ದೇವಸ್ಥಾನ, ಕಾಮಧೇನು ಗಣಪತಿ ದೇವಸ್ಥಾನ, ಆಲ್ದೂರು ಕೆಂಪೇಗೌಡ ಸರ್ಕಲ್, ಅಂಬೇಡ್ಕರ್ ಸರ್ಕಲ್, ಜಾಮಿಯಾ ಮಸೀದಿ ಮುಂಭಾಗ, ದಿಲ್ಲಿ ಸರ್ಕಲ್, ಕಿಲಾರಿ ಮಸೀದಿ, ಬಾಳೆಹೊನ್ನೂರು ಜಾಮಿಯಾ ಮಸೀದಿ, ಜಯಪುರ ಆಲ್ ಭದ್ರಿಯಾ ಮಸೀದಿ ಕೊಪ್ಪ ರಸ್ತೆ, ಶೃಂಗೇರಿ ವೆಲ್ ಕಂ ಗೇಟ್ ಹತ್ತಿರ, ಜಾಮಿಯಾ ಮಸೀದಿ, ನರಸಿಂಹರಾಜಪುರ, ಟಿ.ಬಿ. ಸರ್ಕಲ್ ಮತ್ತು ಮಸೀದಿ, ತರೀಕೆರೆ ಕೋಡಿ ಕ್ಯಾಂಪ್, ಜಾಮಿಯಾ ಮಸೀದಿ, ಗಾಳಿ ಹಳ್ಳಿ ಕ್ರಾಸ್, ನೂರಾನಿ ಮಸೀದಿ, ಕೆ.ಇ.ಬಿ. ಸರ್ಕಲ್, ಬಜಾರ್ ಮಸೀದಿ, ಲಕ್ಕವಳ್ಳಿ ಬರಗೇನಹಳ್ಳಿ ರಸ್ತೆ, ಜಾಮಿಯಾ ಮಸೀದಿ, ಕಡೂರು, ಎಂಎಸ್ಆರ್ ಸರ್ಕಲ್ ಸ್ಥಳಗಳಲ್ಲಿ ನಿರ್ಬಂಧಿಸಲಾಗಿದ್ದು ಕಾರ್ಯಕ್ರಮದ ಸಂಘಟಕರು, ಸಂಯೋಜಕರು ಹಾಗೂ ಸಾರ್ವಜನಿಕರು ಈ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಿದ್ದಾರೆ.-ನಾಳೆ ಪ್ರಾಣಿ ವಧೆ ನಿಷೇಧ
ಚಿಕ್ಕಮಗಳೂರು: ನಗರಸಭೆ ವ್ಯಾಪ್ತಿಯಲ್ಲಿ ಕೋಳಿ, ಕುರಿ, ಮೀನು, ಮಾಂಸ ಮಾರಾಟಗಾರರು ಹಾಗೂ ಮಾಂಸಹಾರಿ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರು ಸೆ. 7 ರಂದು ಗಣೇಶ ಚತುರ್ಥಿ ಹಿನ್ನಲೆಯಲ್ಲಿ ಕಡ್ಡಾಯವಾಗಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ತಪ್ಪಿದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಪೌರಾಯುಕ್ತರಾದ ಬಸವರಾಜ್ ತಿಳಿಸಿದ್ದಾರೆ.-5 ಕೆಸಿಕೆಎಂ 4ಚಿಕ್ಕಮಗಳೂರಿನ ಎಂ.ಜಿ. ರಸ್ತೆಯಲ್ಲಿ ಪೂಜಾ ಸಾಮಾಗ್ರಿಗಳ ಖರೀದಿಯಲ್ಲಿ ತೊಡಗಿರುವ ಗ್ರಾಹಕರು.
---5 ಕೆಸಿಕೆಎಂ 5ಗಣಪತಿ ಹಬ್ಬದ ಹಿನ್ನಲೆಯಲ್ಲಿ ಚಿಕ್ಕಮಗಳೂರಿನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ತಂದಿರುವ ಗಣೇಶಮೂರ್ತಿಗಳು.