ನಗರದ ಇತಿಹಾಸ ಪ್ರಸಿದ್ಧ ಶ್ರೀ ಗೌರಿ ಗಣೇಶೋತ್ಸವದ ಅಂಗವಾಗಿ ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬಳಿಕ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವವು ಶುಕ್ರವಾರ ರಾತ್ರಿ ಅದ್ದೂರಿಯಾಗಿ ನಡೆಯಿತು.

ವಿರಾಜಪೇಟೆ : ನಗರದ ಇತಿಹಾಸ ಪ್ರಸಿದ್ಧ ಶ್ರೀ ಗೌರಿ ಗಣೇಶೋತ್ಸವದ ಅಂಗವಾಗಿ ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬಳಿಕ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವವು ಶುಕ್ರವಾರ ರಾತ್ರಿ ಅದ್ದೂರಿಯಾಗಿ ನಡೆಯಿತು.

ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ 22 ಗಣೇಶ ಮೂರ್ತಿಗಳನ್ನು ವಿದ್ಯುತ್ ಹಾಗೂ ಹೂವಿನ ಅಲಂಕೃತ ಮಂಟಪಗಳಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅನಂತ ಪದ್ಮನಾಭ ಚತುರ್ದಶಿಯ ಅಂಗವಾಗಿ ನಡೆದ ಶೋಭಾಯಾತ್ರೆಯಲ್ಲಿ ಎಲ್ಲ 22 ಗಣೇಶೋತ್ಸವ ಸಮಿತಿಗಳು ಪಾಲ್ಗೊಂಡವು.ಗಡಿಯಾರ ಕಂಬದ ಸಮೀಪ ಸಿಡಿಮದ್ದು ಪ್ರದರ್ಶನ ಹಾಗೂ ಈಡುಗಾಯಿ ಸೇವೆ ನಡೆಯಿತು. ಬಳಿಕ ಬಸವೇಶ್ವರ ದೇವಸ್ಥಾನ, ಅಂಗಾಳ ಪರಮೇಶ್ವರಿ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯ ಹಾಗೂ ಉತ್ಸವ ಸಮಿತಿಗಳ ವತಿಯಿಂದ ಪೂಜೆ ಸಲ್ಲಿಸಿ ಮೂರ್ತಿಗಳನ್ನು ತೇರಿನಲ್ಲಿ ಪ್ರತಿಷ್ಠಾಪಿಸಲಾಯಿತು. ವಿವಿಧ ಸಮಿತಿಗಳ ವತಿಯಿಂದ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಶೋಭಾಯಾತ್ರೆಗೆ ಕೊಡಗು ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಸಾಕ್ಷಿಯಾದರು. ವಿವಿಧ ಸಮಿತಿಗಳ ಮಂಟಪಗಳಲ್ಲಿ ಸಂಗೀತ, ವಾದ್ಯವೃಂದ, ಡಿಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಾಂಪ್ರದಾಯಿಕ ಕಲಾವಿದರ ಪ್ರದರ್ಶನ, ಜನಪದ ಹಾಗೂ ಸಾಂಪ್ರದಾಯಿಕ ನೃತ್ಯ, ಡೋಲು ಕುಣಿತ, ಬೊಂಬೆಗಳ ನೃತ್ಯ, ಚಂಡೆ ಮೇಳ, ಕುಣಿತ ಭಜನೆ ಹಾಗೂ ವಿವಿಧ ವೇಷಧಾರಿಗಳ ನೃತ್ಯ ಮೆರವಣಿಗೆಗೆ ಮೆರುಗು ನೀಡಿದವು.ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಸಾರ್ವಜನಿಕರು ಸಂಗೀತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ವಿವಿಧೆಡೆ ಸಿಡಿಮದ್ದು ಪ್ರದರ್ಶನವೂ ನಡೆಯಿತು.

ಬಿಗಿ ಪೊಲೀಸ್ ಬಂದೋಬಸ್ತ್ : ವಿಸರ್ಜನೋತ್ಸವದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರ ನೇತೃತ್ವದಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಂದೋಬಸ್ತ್‌ನಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನಗರದ ವಿವಿಧೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.ಶುಕ್ರವಾರ ರಾತ್ರಿ ವಾಹನ ನಿಲುಗಡೆಗೆ ನಿರ್ಬಂಧ ವಿಧಿಸಲಾಗಿದ್ದು, ಗಣೇಶೋತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿ ಮದ್ಯ ಮಾರಾಟ ಮತ್ತು ಸೇವನೆಗೂ ನಿರ್ಬಂಧವಿತ್ತು.ಶನಿವಾರ ಬೆಳಿಗ್ಗೆ 6 ಗಂಟೆಯ ಬಳಿಕ ಖಾಸಗಿ ಬಸ್ ನಿಲ್ದಾಣದ ಸಮೀಪದ ಐತಿಹಾಸಿಕ ಗೌರಿ ಕೆರೆಯಲ್ಲಿ ಗೌರಿ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ನಡೆಯಿತು.

ವ್ಯಾಪಾರ ಜೋರು : ಗೌರಿ ಗಣೇಶ ವಿಸರ್ಜನೋತ್ಸವದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆ ಬದಿಗಳಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವ್ಯಾಪಾರಿಗಳು ಮಳಿಗೆಗಳನ್ನು ತೆರೆದಿದ್ದರು. ಹೂವು, ಆಟಿಕೆಗಳು, ಕೇಸರಿ ಶಲ್ಯ, ಕರಿದ ತಿಂಡಿಗಳು, ತಂಪು ಪಾನೀಯ, ಐಸ್‌ಕ್ರೀಂ, ದೇವರ ಮೂರ್ತಿಗಳು, ಗೃಹೋಪಯೋಗಿ ಹಾಗೂ ಅಲಂಕಾರಿಕ ವಸ್ತುಗಳು ಮತ್ತು ಬಟ್ಟೆಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಬೆಳಗಿನ ಜಾವದವರೆಗೂ ವ್ಯಾಪಾರ ಚಟುವಟಿಕೆ ಮುಂದುವರಿದಿತ್ತು.

ಬಿಡುವು ನೀಡಿದ ಮಳೆ : ಗುರುವಾರ ಸಂಜೆ ಆರಂಭವಾಗಿದ್ದ ಮಳೆ ಶುಕ್ರವಾರವೂ ಆಗಾಗ್ಗೆ ಸುರಿಯುತ್ತಿತ್ತು. ಶುಕ್ರವಾರ ಮಧ್ಯಾಹ್ನವೂ ಮಳೆಯಾಗಿತ್ತು. ಆದರೆ ಗೌರಿ ಗಣೇಶ ಮೂರ್ತಿಗಳನ್ನು ಅಲಂಕೃತ ತೇರಿನಲ್ಲಿ ಪ್ರತಿಷ್ಠಾಪಿಸಿ ಶೋಭಾಯಾತ್ರೆ ಆರಂಭಿಸುವ ವೇಳೆಗೆ ಮಳೆ ಬಿಡುವು ನೀಡಿದ್ದು, ಸಾರ್ವಜನಿಕರು ಹಾಗೂ ಉತ್ಸವ ಸಮಿತಿಗಳಿಗೆ ಅನುಕೂಲವಾಯಿತು.

ಶಾಸಕರ ಭೇಟಿ : ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರು ನಗರದ ವಿವಿಧ ಗಣೇಶೋತ್ಸವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ವಿವಿಧ ಸಮಿತಿಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಅವರು ಬಳಿಕ ವಿಸರ್ಜನಾ ಶೋಭಾಯಾತ್ರೆಯಲ್ಲೂ ಭಾಗವಹಿಸಿ ಸಂಭ್ರಮಕ್ಕೆ ಸಾಕ್ಷಿಯಾದರು.

\