ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ನಗರದ ಎಲ್ಲ ರಸ್ತೆಗಳು ತೀರಾ ಹದಗೆಟ್ಟಿದ್ದು, ಪ್ರಮುಖ ರಸ್ತೆಗಳೇಲ್ಲೇ ಜನರು ಓಡಾಡಲು ಪ್ರಯಾಸ ಪಡಬೇಕಾದ ಸ್ಥಿತಿ ಉಂಟಾಗಿದೆ. ಬಹುತೇಕ ರಸ್ತೆಗಳು ಗುಂಡಿಮಯವಾಗಿವೆ. ಈ ರಸ್ತೆಗಳಲ್ಲಿ ಸಂಚರಿಸುವವರು ಪ್ರಾಣ ಅಂಗೈಯಲ್ಲೇ ಹಿಡಿದುಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.ನಗರದ ಹೃದಯಭಾಗವಾದ ನಾಗಯ್ಯರೆಡ್ಡಿ ವೃತ್ತದಿಂದ ಮಧುಗಿರಿ ವೃತ್ತದ ಮಾರ್ಗದ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಮತ್ತು ನಗರದ ಎಂ.ಜಿ. ವೃತ್ತದಿಂದ ಬೆಂಗಳೂರು ವೃತ್ತದವರೆವಿಗು ರಸ್ತೆಯು ಸಂಪೂರ್ಣವಾಗಿ ಹದಗಟ್ಟಿದೆ. ರಸ್ತೆಯ ಮಧ್ಯಭಾಗದಲ್ಲಿ ಬೃಹತ್ತಾಕಾರದ ಗುಂಡಿಗಳು ಬಿದ್ದಿದ್ದು, ಮಳೆ ಬಂದರೆ ಕೆಸರು ಗದ್ದೆಯಂತಾಗುತ್ತದೆ.
ದುರಸ್ತಿಗೆ ಮುಂದಾಗುತ್ತಿಲ್ಲನೂರಾರು ವಾಹನಗಳು ಸಂಚರಿಸುವ, ಸಾವಿರಾರು ಜನರು ಓಡಾಡುವ ರಸ್ತೆಗಳು ಗುಂಡಿಗಳಿಂದ ತುಂಬಿಕೊಂಡಿದ್ದರೂ ಇದನ್ನು ದುರಸ್ತಿ ಮಾಡಿಸಲು ಸಂಬಂಧಪಟ್ಟವರು ಮುಂದಾಗುತ್ತಿಲ್ಲ. ಮಧುಗಿರಿ ರಸ್ತೆಯ ಕಾಮಗಾರಿ ಮುಗಿದು 2 ವರ್ಷ ಕಳೆಯುವ ಮುನ್ನವೆ 3ನೇ ಬಾರಿ ಕುಸಿತ ಕಂಡಿದೆ. ಮೋರಿಯ ಇಕ್ಕೆಲಗಳ್ಳಿ 6-7 ಗುಂಡಿಗಳು ಬಿದ್ದಿದ್ದು ವಾಹನಸವಾರರು ಪರದಾಡುವಂತಾಗಿದೆ.
ಪ್ರತಿ ಬಾರಿಯು ಅದಕ್ಕೆ ತೇಪೆ ಹಚ್ಚಿ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಹೊರತು ಇಲ್ಲಿಯ ತನಕ ಸರಿಪಡಿಸಲು ಆಗಿಲ್ಲ. ಜೋರು ಮಳೆ ಬಂದರೆ ಸರಾಗವಾಗಿ ನೀರು ಹರಿದುಹೋಗಲು ಸಾಧ್ಯವಾಗದೆ ರಸ್ತೆಯ ಮಧ್ಯಭಾಗದ ಗುಂಡಿಗಲ್ಲೇ ನೀರು ನಿಲ್ಲುತ್ತವೆ. ವಾಹನಗಳ ಓಡಾಟವೂ ದಿನೇ ದಿನೇ ಹೆಚ್ಚಾಗುತ್ತಿದೆ. ರಸ್ತೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರ ಓಡಾಟವೂ ಸಾಧ್ಯವಾಗುತ್ತಿಲ್ಲ. ಇಲ್ಲಿನ ನಿವಾಸಿಗಳು ಹಲವು ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.ಪಟ್ಟಣದಲ್ಲಿ ರಸ್ತೆ ದುರಸ್ತಿ ಮಾಡಿಸುವ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ರಾತ್ರಿ ವೇಳೆ ರಸ್ತೆಯಲ್ಲಿರುವ ಗುಂಡಿಗಳು ಕಾಣದೆ ದ್ವಿಚಕ್ರವಾಹನ ಸವಾರರು ಬಿದ್ದು ಗಾಯಗೊಂಡ ಉದಾಹರಣೆಗಳಿವೆ. ರಸ್ತೆ ದುರಸ್ತಿ ಮಾಡಿಸಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.