ಸಾರಾಂಶ
ಕುಶಾಲನಗರದಲ್ಲಿ ಬುದ್ಧ ಪೂರ್ಣಿಮೆ ಅಂಗವಾಗಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಕಾವೇರಿ ಆರತಿ ಕ್ಷೇತ್ರದಲ್ಲಿ 159ನೇ ಮಹಾ ಆರತಿ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಗೌತಮ ಬುದ್ಧರ ಸಂದೇಶ ಸರ್ವಕಾಲಕ್ಕೂ ಮಾದರಿಯಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಚ್.ಪಿ. ಶಿವಕುಮಾರ್ ಅಭಿಪ್ರಾಯಪಟ್ಟರು.ಕುಶಾಲನಗರದಲ್ಲಿ ಬುದ್ಧ ಪೂರ್ಣಿಮೆ ಅಂಗವಾಗಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಕಾವೇರಿ ಆರತಿ ಕ್ಷೇತ್ರದಲ್ಲಿ ನಡೆದ 159ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬುದ್ಧರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.ಪ್ರತಿಯೊಬ್ಬರೂ ಪ್ರಬುದ್ಧರಾಗಿ ನೆಮ್ಮದಿ ಜೀವನ ಸಾಗಿಸಬೇಕಾಗಿದೆ. ಜೀವನದಿ ಕಾವೇರಿಯ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಸ್ವಚ್ಛ ಕಾವೇರಿ ಕನಸು ನನಸಾಗಬೇಕು ಎಂದರು.ದಲಿತ ಸಂಘರ್ಷ ಸಮಿತಿ ಭೀಮಾವಾದ ರಾಜ್ಯ ಸಂಘಟನಾ ಸಂಚಾಲಕ ಕೆ.ಬಿ. ರಾಜು ಮಾತನಾಡಿ, ಕಳೆದ ಏಳು ದಶಕಗಳಿಂದ ಎಂದೂ ಕಾಣದ ಪರಿಸ್ಥಿತಿ ಈ ಬಾರಿ ಜೀವನದಿ ಕಾವೇರಿಯಲ್ಲಿ ಕಂಡು ಬಂದಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ. ಪ್ರತಿಯೊಬ್ಬರೂ ಪ್ರಕೃತಿಯ ಸಂರಕ್ಷಣೆಗೆ ಪಣತೊಡಬೇಕಾಗಿದೆ. ಕಾವೇರಿ ನದಿ ಸಂರಕ್ಷಣೆ ಬಗ್ಗೆ ನಿರಂತರ ಕಾಳಜಿ ಹೊಂದಿರುವ ಕಾವೇರಿ ಮಹಾ ಆರತಿ ಬಳಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಅರ್ಚಕ ಕೃಷ್ಣಮೂರ್ತಿ ಭಟ್ ಕುಂಕುಮಾರ್ಚನೆ, ಅಷ್ಟೋತ್ತರ ನಂತರ ನದಿಗೆ ಸಾಮೂಹಿಕವಾಗಿ ಆರತಿ ಬೆಳಗಲಾಯಿತು.ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕರಾದ ಲೀಲಾವತಿ, ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಬಳಗದ ಪ್ರಮುಖರಾದ ಮಂಡೆಪಂಡ ಬೋಸ್ ಮೊಣ್ಣಪ್ಪ, ಡಿ.ಆರ್. ಸೋಮಶೇಖರ್, ಧರಣಿ ಚೈತನ್ಯ ಮತ್ತಿತರರು ಇದ್ದರು.