ಸಾರಾಂಶ
ನಡುಗಡ್ಡೆಗೆ ಅಪಾಯದ ಮುನ್ಸೂಚನೆಯಿಂದ ಜಿಲ್ಲಾಡಳಿತ ಗಜಾನನ ಸ್ವಾಮೀಜಿ ಅವರಿಗೆ ಕರೆ ಮಾಡಿ ನಡುಗಡ್ಡೆಯ ಕ್ಷೇತ್ರದಿಂದ ಹೊರ ಬಂದು ಸುರಕ್ಷಿತ ಜಾಗದಲ್ಲಿ ಇರಲು ಮನವಿ ಮಾಡಿದ್ದರು. ಎಷ್ಟು ಹೇಳಿದರೂ ಸ್ವಾಮೀಜಿ ಗೌತಮ ಕ್ಷೇತ್ರ ಬಿಟ್ಟು ಹೊರ ಬರಲು ಮುಂದಾಗಿರಲಿಲ್ಲ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ದೊಡ್ಡೇಗೌಡನಕೊಪ್ಪಲು ಗ್ರಾಮದ ಗೌತಮ ಕ್ಷೇತ್ರದ ಆಶ್ರಮದಲ್ಲಿನ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ಸ್ವಾಮೀಜಿ ಹಾಗೂ ಇಬ್ಬರು ಸಹಚರರನ್ನುಅಗ್ನಿಶಾಮಕ, ತುರ್ತುಸೇವೆ ಇಲಾಖೆ ಹಾಗೂ ಎಂಇಜಿ ತಂಡ ರಕ್ಷಿಸಿ ಕಾವೇರಿ ನದಿಯಿಂದ ಹೊರ ಕರೆತಂದಿತು.ಕೆಆರ್‌ಎಸ್ ಜಲಾಶಯದಿಂದ ಕಾವೇರಿ ನದಿ ಮೂಲಕ ಲಕ್ಷಾಂತರ ಕ್ಯುಸೆಕ್ ನೀರು ಹೊರ ಬಿಟ್ಟ ಹಿನ್ನೆಲೆ ಕಾವೇರಿ ನದಿ ಪ್ರವಾಹದಿಂದಾಗಿ ಗೌತಮ ಕ್ಷೇತ್ರ ನಡುಗಡ್ಡೆಯಂತಾಗಿ ಸುತ್ತಲೂ ನೀರಿನಿಂದ ಆವರಿಸಿತ್ತು.
ನಡುಗಡ್ಡೆಗೆ ಅಪಾಯದ ಮುನ್ಸೂಚನೆಯಿಂದ ಜಿಲ್ಲಾಡಳಿತ ಗಜಾನನ ಸ್ವಾಮೀಜಿ ಅವರಿಗೆ ಕರೆ ಮಾಡಿ ನಡುಗಡ್ಡೆಯ ಕ್ಷೇತ್ರದಿಂದ ಹೊರ ಬಂದು ಸುರಕ್ಷಿತ ಜಾಗದಲ್ಲಿ ಇರಲು ಮನವಿ ಮಾಡಿದ್ದರು. ಎಷ್ಟು ಹೇಳಿದರೂ ಸ್ವಾಮೀಜಿ ಗೌತಮ ಕ್ಷೇತ್ರ ಬಿಟ್ಟು ಹೊರ ಬರಲು ಮುಂದಾಗಿರಲಿಲ್ಲ.ಈ ಹಿನ್ನೆಲೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಆಡಳಿತ ಅಧಿಕಾರಿಗಳು, ಮುಖ್ಯ ಅಗ್ನಿಶಾಮಕ ಅಧಿಕಾರಿ ಮೈಸೂರು ವಿಭಾಗದ ಪಿ.ಎಸ್ ಜಯರಾಮ್ ಮಾರ್ಗದರ್ಶನದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆ ಹಾಗೂ ಎಂಇಜಿ ತಂಡ ಸೇರಿ ಈ ಕಾರ್ಯಚರಣೆ ನಡೆಸಿ ನಡುಗಡ್ಡೆಯಿಂದ ಒಬ್ಬರು ಸ್ವಾಮೀಜಿ ಹಾಗೂ ಇಬ್ಬರು ಅನುಚರರನ್ನು ಹೊರ ತಂದಿದ್ದಾರೆ.
ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳಾದ ಗುರುರಾಜ .ಕೆ.ಪಿ, ರಾಘವೇಂದ್ರ ಬಿ.ಎಂ, ರಮೇಶ್.ಸಿ ನೇತತ್ವ ವಹಿಸಿದ್ದರು. ಇವರ ಜೊತೆಯಲ್ಲಿ ಸುಮಾರು 25 ಜನ ಅಧಿಕಾರಿಯ ಸಿಬ್ಬಂದಿ ಸೇರಿ ಕಾರ್ಯಾಚರಣೆ ನಡೆಸಿ ಸ್ವಾಮೀಜಿ ಇತರರನ್ನು ರಕ್ಷಣೆ ಮಾಡಿ ಕಂದಾಯ ಅಧಿಕಾರಿಗಳ ವಶಕ್ಕೆ ಒಪ್ಪಿಸಿದರು.ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ ಈ ಬಗ್ಗೆ ಪ್ರತಿಕ್ರಿಯಿಸಿ, ಶ್ರೀ ಕ್ಷೇತ್ರ ಗೌತಮ ಕ್ಷೇತ್ರದಲ್ಲಿ ವಾಸವಿದ್ದ ಗಜಾನನ ಸ್ವಾಮೀಜಿ ಇತರರನ್ನು ಹಲವು ಬಾರಿ ಭೇಟಿಯಾಗಿ ಪ್ರವಾಹದ ಮುನ್ಸೂಚನೆ ನೀಡಿದ್ದೇವೆ. ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿದ್ದೆವು ಎಂದರು.
ನಾವು ಮಾಡಿದ ಮನವಿಗೆ ಸ್ವಾಮೀಜಿ ಮಾತ್ರ ನಮ್ಮ ಕ್ಷೇತ್ರ ಎಷ್ಟೇ ಪ್ರವಾಹ ಬಂದರೂ ಮುಳುಗಡೆಯಾಗುವುದಿಲ್ಲ ಎಂದು ಹೇಳುತ್ತಲೇ ಹೊರ ಬರಲು ನಿರಾಕರಿಸುತ್ತಿದ್ದರು. ಇದೀಗ ಅವರೊಂದಗೆ ಚರ್ಚಿಸಿ ನಮ್ಮ ಅಗ್ನಿ ಶಾಮಕ ಹಾಗೂ ತುರ್ತು ಸೇವೆಗಳ ತಂಡದೊಂದಿಗೆ ಸುರಕ್ಷಿತವಾಗಿ ಸ್ವಾಮೀಜಿ ಹಾಗೂ ಅವರ ಸಹಚರರನ್ನು ಹೊರ ತರಲಾಗಿದೆ ಎಂದು ಹೇಳಿದರು.ತಾಪಂ ಇಒ ವೇಣು ಸೇರಿ ಅಗ್ನಿಶಾಮಕದಳದ ಮುಖ್ಯಸ್ಥರು ಹಾಗೂ ಇತರರು ಇದ್ದರು.