ಸಾರಾಂಶ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಗೆ ದಶಕಗಳ ನಂತರ ರಾಷ್ಟ್ರಮಟ್ಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಪ್ರಶಸ್ತಿಗಳಿಸಿ ಕೊಟ್ಟ ಹಿರಿಮೆ ಗೌತಮಿ ಗೌಡಗೆ ಸಲ್ಲುತ್ತದೆ. ಶಿವಮೊಗ್ಗದ ವಿನೋಬನಗರ ನಿವಾಸಿಗಳಾದ ವಿಷ್ಣುವರ್ಧನ ಮತ್ತು ಸುಷ್ಮಾ ಅವರ ಪುತ್ರಿ ಗೌತಮಿಗೌಡ ದಿ ಟೀಮ್ ಪಿ.ಯು ಕಾಲೇಜಿನಲ್ಲಿ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದಾಳೆ.
7ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾಗಲೇ 2019 ನವೆಂಬರ್‌ನಲ್ಲಿ ತಿರುಪತಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಈಕೆ 2020ರಲ್ಲಿ ಬೆಂಗಳೂರಿನಲ್ಲಿ ನಡೆದ ಮಿನಿ ಒಲಂಪಿಕ್ಸ್‌ನಲ್ಲಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ಪಡೆದಿದ್ದಾಳೆ. 2021ರಲ್ಲಿ ಅಸ್ಸಾಂನಲ್ಲಿ ನಡೆದ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದಿದ್ದಾಳೆ. 2021ರಲ್ಲಿ ಕೇರಳದಲ್ಲಿ ನಡೆದ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಪಡೆದಿದ್ದಾಳೆ.2022ರಂದು ನಡೆದ ಕರ್ನಾಟಕ ಜ್ಯೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಬಂಗಾರದ ಪದಕ, ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದ 33ನೇ ಸೌತ್ ಜೋನ್ ನ್ಯಾಷನಲ್ಸ್‌ನಲ್ಲಿ ಬೆಳ್ಳಿ ಪದಕ, 2022ರಲ್ಲಿ ಉಡುಪಿ ಜಿಲ್ಲೆಯಲ್ಲಿ ನಡೆದ 18ನೇ ಯೂತ್ ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ, 2023ರಂದು ವಾರಂಗಲ್‌ನಲ್ಲಿ ನಡೆದ 34ನೇ ನ್ಯಾಷನಲ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಪಡೆದಿದ್ದಾಳೆ. ಈಕೆಯ ಸಾಧನೆಯನ್ನು ಮೆಚ್ಚಿ 2021ರಲ್ಲಿ ಸಿರಿಗನ್ನಡ ಚಾನೆಲ್ ಶ್ರೇಷ್ಠ ಕನ್ನಡಿಗ ಎಂಬ ಪ್ರಶಸ್ತಿ ನೀಡಿ ಗೌರವಿಸಿದ್ದು, 2022ರಲ್ಲಿ ಶಿವಮೊಗ್ಗದ ದಸರಾ ಮಹೋತ್ಸವ ಅಂಗವಾಗಿ ನಡೆದ ಮಕ್ಕಳ ದಸರಾವನ್ನು ಉದ್ಘಾಟಿಸಿದ್ದರು.