ಸಾರಾಂಶ
ಗವಿಸಿದ್ದೇಶ್ವರ ಸ್ವಾಮೀಜಿ 5000 ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದ್ದಾರೆ. ಸಿದ್ಧಗಂಗಾ ಮಠದ ನಂತರ ಗವಿಮಠ ದೀನ, ದಲಿತರಿಗೆ ಆಶಾ ಕಿರಣವಾಗಿದೆ.
ಕೊಪ್ಪಳ:
ಸಾವಿರಾರು ವಿದ್ಯಾರ್ಥಿಗಳಿಗೆ ಆಸರೆಯಾಗಿರುವ ಕೊಪ್ಪಳದ ಗವಿಮಠ ಹಾಗೂ ತುಮಕೂರಿನ ಸಿದ್ಧಗಂಗಾ ಮಠ ಕರ್ನಾಟಕದ ಎರಡು ಕಣ್ಣುಗಳು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.ಇಲ್ಲಿನ ಗವಿಮಠಕ್ಕೆ ಬುಧವಾರ ಭೇಟಿ ನೀಡಿ ಗವಿಸಿದ್ಧೇಶ್ವರ ಶ್ರೀಗಳೊಂದಿಗೆ 1 ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗವಿಸಿದ್ದೇಶ್ವರ ಸ್ವಾಮೀಜಿ 5000 ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದ್ದಾರೆ. ಸಿದ್ಧಗಂಗಾ ಮಠದ ನಂತರ ಗವಿಮಠ ದೀನ, ದಲಿತರಿಗೆ ಆಶಾ ಕಿರಣವಾಗಿದೆ. ಇಂಥ ಮಠಕ್ಕೆ ಕಿರುಕಾಣಿಕೆ ನೀಡಬೇಕು ಎನ್ನುವ ಸದಾಶಯದಿಂದ ಸಿದ್ದೇಶ್ವರ ಸಂಸ್ಥಾನ ವಿಜಯಪುರ ಹಾಗೂ ಸಿದ್ದೇಶ್ವರ ಸೌಹಾರ್ದ ಸಹಕಾರಿ ಸಂಘದಿಂದ ೧೦೧ ಕ್ವಿಂಟಲ್ ಅಕ್ಕಿ, ನಮ್ಮ ಗೊಶಾಲೆಯಲ್ಲಿ ಸಿದ್ಧಪಡಿಸಿದ ೫೦೦೧ ವಿಭೂತಿ, ೫ ಕಿಲೋ ಕುಂಕುಮ, ೫ ಕಿಲೋ ತುಪ್ಪ ನೀಡಿ ಅಳಿಲು ಸೇವೆ ಮಾಡಿದ್ದೇವೆ ಎಂದರು.
ಗವಿಮಠವೂ ರಾಜಕೀಯದಿಂದ ದೂರವೇ ಇದೆ. ಸಮಾಜ ಸೇವೆ ಮತ್ತು ವಿದ್ಯಾರ್ಥಿಗಳಿಗೆ ಆಸರೆಯಾಗುವ ಮೂಲಕ ದೊಡ್ಡ ಕಾರ್ಯ ಮಾಡುತ್ತಿದೆ. ಇಂಥ ಮಠಕ್ಕೆ ನಾನು ಸಹ ಭಕ್ತನಾಗಿದ್ದೇನೆ ಎಂದರು.