ಸಾರಾಂಶ
ಗವಿಮಠದ ಆವರಣದಲ್ಲಿ 5 ಸಾವಿರ ವಿದ್ಯಾರ್ಥಿಗಳ ವಸತಿ ಹಾಗೂ ಪ್ರಸಾದ ನಿಲಯದ ಲೋಕಾರ್ಪಣೆ
ಕನ್ನಡಪ್ರಭ ವಾರ್ತೆ ಕೊಪ್ಪಳಕೆಲವರು ಹೇಳುತ್ತಾರೆ, ಆದರೆ, ಮಾಡುವುದಿಲ್ಲ. ಇನ್ನು ಕೆಲವರು ಮಾಡುತ್ತಾರೆ ಹೇಳುವುದಿಲ್ಲ. ಆದರೆ, ಗವಿಮಠದ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹೇಳುವವರಲ್ಲ, ಮಾಡಿ ತೋರಿಸುವವರು ಎಂದು ಮುಂಡರಗಿಯ ಡಾ. ಅನ್ನದಾನ ಮಹಾಸ್ವಾಮಿಗಳು ಹೇಳಿದರು.
ನಗರದ ಗವಿಮಠದ ಆವರಣದಲ್ಲಿ ಮರಿಶಾಂತವೀರ ಮಹಾಸ್ವಾಮಿಗಳ ಪುಣ್ಯಾರಾಧನೆ ನಿಮಿತ್ತ 5 ಸಾವಿರ ವಿದ್ಯಾರ್ಥಿಗಳ ವಸತಿ ಹಾಗೂ ಪ್ರಸಾದ ನಿಲಯದ ಲೋಕಾರ್ಪಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.ಈಗಿನ ಗವಿಮಠ ಶ್ರೀಗಳಿಗೆ ದೂರದೃಷ್ಟಿಯಿದೆ. ಕಳಕಳಿ ಇದೆ. ಹೀಗಾಗಿಯೇ ಇಂಥ ಮಹಾನ್ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.
ಸುಂದರವಾದ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಲೋಕಾರ್ಪಣೆ ಮಾಡಿರುವುದು ಸಂತಸ ತರಿಸಿದೆ. ಗವಿಸಿದ್ದೇಶ್ವರರ ಕೃಪೆ ದೊಡ್ಡದು. ಗವಿಮಠದ ಮಹಾಶಕ್ತಿ ನಮಗೆ ಕಾಣುತ್ತಿದೆ. ಅವರ ಕ್ರಿಯಾಶೀಲತೆ ದೊಡ್ಡ ಪ್ರಮಾಣದಲ್ಲಿ ನಾಡಿಗೆ ದೊಡ್ಡ ಕೊಡುಗೆ ಕೊಟ್ಟಿದೆ. ಇಲ್ಲಿನ ದಾನಿಗಳು ಸಹ ದಾನ ಕೊಡುವ ಮೂಲಕ ಇಂತಹ ಮಹಾನ್ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಅನ್ನದಾನ ಶ್ರೇಷ್ಠ, ವಿದ್ಯಾದಾನ ಮಾಡುವುದರಿಂದ ಜೀವನ ಪರ್ಯಂತ ಜೀವನ ಸುಧಾರಣೆ ಕಾಣುತ್ತದೆ. ಅಂಥ ಕೆಲಸಕ್ಕೆ ಶ್ರೀ ಮಠವು ಮುಂದಾಗಿದೆ. ಹಿಂದಿನ ಶ್ರೀಗಳು ಹಾಕಿ ಕೊಟ್ಟ ಶಿಕ್ಷಣದ ಬುನಾದಿಯು ಇಂದು ಎಲ್ಲ ಹಂತದಲ್ಲಿಯೂ ಬೆಳೆದು ನಿಂತಿದೆ. ಕೊಪ್ಪಳ ಗವಿಮಠದ ಶಿಕ್ಷಣ ಸಂಸ್ಥೆಗಳು ಎಲ್ಲೆಡೆಯೂ ಹೆಸರಾಗಿವೆ. ಗವಿಸಿದ್ದೇಶ್ವರ ಮಹಾಸ್ವಾಮೀಜಿ ಮಾಡುವ ಕಾರ್ಯ ಮಾಡಿದ ಮೇಲೆಯೇ ನಮಗೆ ಗೊತ್ತಾಗುತ್ತವೆ. ಈ ನಾಡನ್ನು ಉದ್ದರಿಸುವ ಕಾರ್ಯ ಸಾಗಲಿ ಎಂದರು.ಜಿಲ್ಲಾಧಿಕಾರಿ ನಲಿನ್ ಅತುಲ್, ಸಂಸದ ಸಂಗಣ್ಣ ಕರಡಿ, ಶಾಸಕ ದೊಡ್ಡನಗೌಡ ಪಾಟೀಲ, ವಿಪ ಸದಸ್ಯೆ ಹೇಮಲತಾ ನಾಯಕ, ವಿಪ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಹಾಗೂ ಸಿದ್ದಾರ್ಥ ಆನಂದಸಿಂಗ್ ಮಾತನಾಡಿದರು.
ಹರಗುರು ಚರಮೂರ್ತಿಗಳು ಸಾನಿಧ್ಯ ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹುಚ್ಚಮ್ಮ ಭಾಗವಹಿಸಿದ್ದರು. ಶಾಸಕರಾದ ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಕೆ. ಶರಣಪ್ಪ, ವಿಪ ಸದಸ್ಯ ಶರಣೇಗೌಡ ಬಯ್ಯಾಪೂರ, ಡಾ. ಬಸವರಾಜ ಕ್ಯಾವಟರ್, ಹಸನ್ ಸಾಬ ದೋಟಿಹಾಳ, ಎಸ್ಪಿ ಯಶೋದಾ ವಂಟಗೋಡಿ, ಕೆ. ಬಸವರಾಜ ಹಿಟ್ನಾಳ, ಕರಿಯಣ್ಣ ಸಂಗಟಿ, ಸಿ.ವಿ. ಚಂದ್ರಶೇಖರ, ನವೀನ್ ಗುಳಗಣ್ಣವರ, ಶಾಂತಣ್ಣ ಮುದಗಲ್, ಅಂದಾನಪ್ಪ ಅಗಡಿ, ಸುರೇಶ ಭೂಮರಡ್ಡಿ, ಮಲ್ಲಿಕಾರ್ಜುನ ನಾಗಪ್ಪ, ಬಸವರಾಜ ಪುರದ, ಜಿ. ವೀರಪ್ಪ ಕೆಸರಟ್ಟಿ ಮೊದಲಾದವರು ಇದ್ದರು.ಸೇವೆಯಿಂದ ಪ್ರಧಾನಿ, ಸ್ವಾಮೀಜಿ ಸಾಮಿಪ್ಯ ದೊರೆಯಿತು:
ನಾನು ಬಡವ, ನನಗೇನು ಇಲ್ಲವೇ ಇಲ್ಲ, ಸಾಮಾನ್ಯರಲ್ಲಿಯೇ ಸಾಮಾನ್ಯ ವ್ಯಕ್ತಿ. ಆದರೆ, ನಾನು ಮಾಡಿದ ಸೇವೆಯಿಂದಾಗಿ ದೇಶದ ಪ್ರಧಾನಿ, ಸ್ವಾಮೀಜಿ ಹಾಗೂ ಜನಪ್ರತಿನಿಧಿಗಳ ಸಾಮಿಪ್ಯ ದೊರೆತಿದ್ದು ನನ್ನ ಪುಣ್ಯ ಎಂದು ಪದ್ಮಶ್ರೀ ಪುರಸ್ಕೃತ ಹಾಗೂ ಕನ್ನಡಪ್ರಭ ವರ್ಷದ ವ್ಯಕ್ತಿ ಹರೇಕಳ ಹಾಜಬ್ಬ ಹೇಳಿದರು.ಗವಿಮಠದ ಆವರಣದಲ್ಲಿ 5 ಸಾವಿರ ವಿದ್ಯಾರ್ಥಿಗಳ ವಸತಿ ಮತ್ತು ಪ್ರಸಾದ ನಿಲಯ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ನನಗೆ ಅತೀವ ಸಂತೋಷವಾಗುತ್ತದೆ. ಈ ನೆಲಕ್ಕೆ ನಾನು ನಮಸ್ಕಾರ ಮಾಡುತ್ತೇನೆ ಎನ್ನುತ್ತಾ ನೆಲಕ್ಕೆ ನಮಸ್ಕಾರ ಮಾಡಿದರು.ಗವಿಮಠ ಸ್ವಾಮೀಜಿ ಪುಣ್ಯದ ಕಾರ್ಯ ಮಾಡುತ್ತಿದ್ದಾರೆ. ನೀವೆಲ್ಲ ಅವರಿಗೆ ಸಹಾಯ ಮಾಡುತ್ತಿದ್ದೀರಿ, ಈ ಹಿಂದೆಯೂ ನನ್ನನ್ನು ಅವರು ಕರೆಸಿದ್ದರು. ಈಗಲೂ ನನ್ನನ್ನು ಕರೆಸಿದ್ದಾರೆ. ಹಾಸ್ಟೆಲ್ ಉದ್ಘಾಟಿಸಬೇಕು ಎಂದು ಸ್ವಾಮೀಜಿ ನನಗೆ ಕರೆ ಮಾಡಿ ಅಹ್ವಾನ ಮಾಡಿದಾಗ ನಾನು, ನೀವು ದೊಡ್ಡವರು, ನೀವು ಮಾಡಿ, ನಾನು ನಿಮ್ಮ ಜೊತೆಯಲ್ಲಿ ಇರುತ್ತೇನೆ ಎಂದು ಹೇಳಿದೆ. ಆದರೂ ಇಂಥ ಮಹಾನ್ ಕಾರ್ಯವನ್ನು ನನ್ನಿಂದ ಮಾಡಿಸಿದ ನೀವೆಲ್ಲ ದೊಡ್ಡವರು ಎಂದರು.
ನಾನು ಅತ್ಯಂತ ಬಡವನಿದ್ದೇನೆ, ಆದರೂ ನಾನು ಮಾಡಿದ ಸೇವೆಯಿಂದಾಗಿ ದೇಶದ ಪ್ರಧಾನಮಂತ್ರಿ ಅವರ ಸಾಮಿಪ್ಯ ದೊರೆಯವಂತೆ ಆಯಿತು. ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕಾರ ಮಾಡುವಂತೆ ಆಯಿತು. ಗವಿಮಠದ ನೆಲಕ್ಕೆ ಬರುವ ಭಾಗ್ಯ ದೊರೆಯಿತು ಎಂದರು.ಈ ಹಿಂದೆಯೂ ನನ್ನನ್ನು ಸ್ವಾಮೀಜಿ ಕರೆಯಿಸಿ, ಸತ್ಕಾರ ಮಾಡಿದ್ದರು. ಆಗಲೂ ಅತೀವ ಸಂತೋಷವಾಗಿತ್ತು. ಇದಾದ ಮೇಲೆ ದೆಹಲಿಗೆ ಹೋಗಿ (ಪದ್ಮಶ್ರೀ) ಪ್ರಶಸ್ತಿ ಪಡೆಯುವಂತೆ ಆಯಿತು. ನನ್ನ ಆರೋಗ್ಯ ಈಗ ಅಷ್ಟಾಗಿ ಸರಿಯಾಗಿಲ್ಲ. ಹೀಗಾಗಿ, ಬರುವುದಕ್ಕೆ ಆಗುತ್ತಿರಲಿಲ್ಲ. ಆದರೂ ಪುಣ್ಯದ ಕಾರ್ಯವಾಗಿರುವುದರಿಂದ ಬರಲು ಆಗುವುದಿಲ್ಲ ಎನ್ನಲು ಆಗಲ್ಲ. ಹೀಗಾಗಿ ಒಪ್ಪಿಕೊಂಡು ಬಂದಿದ್ದೇನೆ ಎಂದು ವಿನಯದಿಂದ ಹೇಳಿದರು.