ಸಾರಾಂಶ
ಹಣೆಬರಹ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ವಿಭೂತಿ ಧಾರಣೆಯಿಂದ ಹಣೆಬರಹದಿಂದ ಆಗುವ ಕೆಡಕು ನಿವಾರಿಸಬಹುದು. ಆಸ್ಪತ್ರೆಯಲ್ಲಿದ್ದಾಗಲೂ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿ ಹಣೆಯಲ್ಲಿ ವಿಭೂತಿ ಧರಿಸುತ್ತಿದ್ದರು.
ಕೊಪ್ಪಳ: ಈಶನೇ ಈ ಗವಿಸಿದ್ಧೇಶ, ಅವರ ನೆರಳಿನಲ್ಲಿ ಸಾಗಿದರೆ ಮುಕ್ತಿ ದೊರೆಯುತ್ತದೆ. ಗವಿಸಿದ್ದಜ್ಜನ ಗಿರಿಯೇ ಕೈಲಾಸ ಎಂದು ಹಿರಿಯ ನಟ ದೊಡ್ಡಣ್ಣ ಹೇಳಿದರು.
ನಗರದ ಕೈಲಾಸ ಮಂಟಪದಲ್ಲಿ ಜರುಗಿದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀವು ಈಶ, ಕೈಲಾಸ ನೋಡುವುದಕ್ಕಾಗಿಯೂ ಎಲ್ಲಿಯೂ ಹೋಗಬೇಕಾಗಿಲ್ಲ, ಎರಡೂ ನಿಮ್ಮಲ್ಲಿಯೇ ಇವೆ ಎಂದು ಹೇಳಿದರು.ತ್ರಿಮೂರ್ತಿಗಳು ಸೇರಿ ಗುರುಗಳಾಗಲಿಲ್ಲ. ಅದರಲ್ಲಿ ಗಣಪತಿಯೂ ಸೇರುತ್ತಾನೆ. ಸಾವನ್ನು ಗೆಲ್ಲುವ ಶಕ್ತಿ ಯಾರಿಗಾದರೂ ಇದ್ದರೆ ಅದು ಗುರುವಿಗೆ. ಗುರು ಓಡಾಡುವ ಜಾಗದಲ್ಲಿ ಭೂತ, ಪ್ರೇತಗಳು ಓಡಾಡುವುದಿಲ್ಲ. ತಂದೆಯಿಂದ ಪೂಜೆ ಪಡೆದವ ಗಣೇಶ. ಅಗ್ರಪೂಜೆ ಗಣಪತಿಗೆ ಸಲ್ಲುತ್ತದೆ. ಮೂವರ ಜೊತೆ ಗಣಪತಿ ಸೇರಿ ಗುರು ಆಗಿದ್ದಾರೆ. ವಿಘ್ನ ನಿವಾರಣೆಗೆ ಗಣೇಶನಿಗೆ ಪ್ರಥಮ ಪೂಜೆ ಸಲ್ಲುತ್ತದೆ. ಅಂತಹ ಗಣೇಶ ಈಶ್ವರನಿಂದ ಪೂಜೆ ಪಡೆದ. ಗುರು ಅಂದರೆ ತಿಳಿಯದು. ಅದು ಅನುಭವಕ್ಕೆ ಬರಬೇಕು. ಯಾರು ಸನ್ಮಾರ್ಗಕ್ಕೆ ನಡೆಸುವರೋ ಅವರು ಗುರು. ಸಲಹೆ, ಮಾರ್ಗದರ್ಶನ, ಕಾಯಕ ಹೇಳಿಕೊಡುವವರು ಗುರು ಆಗುವರು ಎಂದರು.ನಾನು ಹುಬ್ಬಳ್ಳಿಗೆ ಹೋದಾಗ ಸಿದ್ದಾರೂಢರ ಮಠ ಹಾಗೂ ಗಾನಕೋಗಿಲೆ ಗಂಗೂಬಾಯಿ ಹಾನಗಲ್ ಅವರ ಮನೆಗೆ ಹೋಗುತ್ತಿದೆ. ಒಮ್ಮೆ ಗಂಗೂಬಾಯಿ ಹಾನಗಲ್ ಅವರ ಮನೆಗೆ ಹೋದಾಗ ಸಿದ್ದಾರೂಢರು ಆರೂಢರಾದ ಪ್ರಸಂಗ ವಿವರಿಸಿದರು. ಬದುಕಿನಲ್ಲಿ ಗುರುವಿನ ಫಲದಿಂದ ಸಿದ್ಧಿ ಲಭಿಸುತ್ತದೆ ಎಂದರು. ಗುರುವಿನಲ್ಲಿ ಶಕ್ತಿ ಇದೆ:ಹಣೆಬರಹ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ವಿಭೂತಿ ಧಾರಣೆಯಿಂದ ಹಣೆಬರಹದಿಂದ ಆಗುವ ಕೆಡಕು ನಿವಾರಿಸಬಹುದು. ಆಸ್ಪತ್ರೆಯಲ್ಲಿದ್ದಾಗಲೂ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿ ಹಣೆಯಲ್ಲಿ ವಿಭೂತಿ ಧರಿಸುತ್ತಿದ್ದರು. ವಿಭೂತಿಗೆ ಸಮಾನವಾದದ್ದು ಗುರುವಿನ ಪಾದದ ಧೂಳು. ಅವರ ಪಾದದ ಧೂಳು ಸೋಕಿದರೆ ಕಷ್ಟ ನಿವಾರಣೆ ಆಗುತ್ತವೆ ಎಂದರು.ತಂದೆ-ತಾಯಿಯ ಪುಣ್ಯದ ಫಲದಿಂದ ಮನುಷ್ಯನ ಬಾಳು ಜರುಗುತ್ತದೆ. ಗವಿಸಿದ್ದೇಶ್ವರ ಸ್ವಾಮೀಜಿ ತಂದೆ ತಾಯಿಯವರು ಗವಿಶ್ರೀಗಳನ್ನು ಲೋಕಕ್ಕೆ ಅರ್ಪಣೆ ಮಾಡಿ, ಲೋಕಕ್ಕೆ ಬೆಳಕು ನೀಡಲಿ ಎಂದು ಅರ್ಪಣೆ ಮಾಡಿದ್ದಾರೆ. ಅವರಿಗೆ ಎಷ್ಟು ವಂದನೆ ಸಲ್ಲಿಸಿದರೂ ಸಾಲದು. ಇಂತಹ ಗವಿಶ್ರೀಗಳ ಗುರು ಪಡೆದ ಭಕ್ತರೇ ಧನ್ಯರು. ಅವರ ನೆರಳಿನಲ್ಲಿ ಭಕ್ತಗಣ, ವೈರಾಗ್ಯ, ದಾಸೋಹ, ಶಿಕ್ಷಣ ಸಾಗುತ್ತಿದೆ. ಅವರ ಜೊತೆ ಹೋಗುವ ಎಲ್ಲ ಭಕ್ತರಿಗೂ ಮುಕ್ತಿ ಸಿಗುತ್ತದೆ ಎಂದರು.ಉಗ್ರನಾಗಿದ್ದ ಅಂಗೂಲಿಮಾಲಾ ಬುದ್ಧನ ಸೌಮ್ಯ ಮಾತುಗಳಿಂದ ಬದಲಾದ. ಹಾಗೆ ಮನುಷ್ಯ ಗುರುವಿನಿಂದ ಬದಲಾಗುತ್ತಾನೆ ಎಂದರು.ಜಗತ್ತಿನ ಮೂರೇ ಮೂರು ಸರ್ವಶ್ರೇಷ್ಠ ಭಾಷೆಗಳಲ್ಲಿ ಕನ್ನಡವೂ ಒಂದು. ಕನ್ನಡ ಕಸ್ತೂರಿ ಕನ್ನಡ. ಕನ್ನಡದಲ್ಲಿ ಮಾತ್ರ ಒಂದು ಶಬ್ದಕ್ಕೆ 25 ಪಾರಿಭಾಷಿಕ ಅರ್ಥ ಸಿಗುತ್ತವೆ. ಕನ್ನಡಿಗರು ಅಂದರೆ ಸುಜ್ಞಾನ, ಪಂಡಿತರು, ಸದ್ಗುಣಿಗಳು ಆಗಿದ್ದಾರೆ ಎಂದರು.ಕೊಪ್ಪಳವು ಹನುಮ ಉದಯಿಸಿದ ನಾಡು. ಗವಿಸಿದ್ದೇಶ್ವರ ಮೆಟ್ಟಿದ ನಾಡು. ಬೇರೆ ಕೈಲಾಸವಿಲ್ಲ. ಗವಿಸಿದ್ದಪ್ಪಜ್ಜನ ಗಿರಿಯೇ ಕೈಲಾಸ. ಎಲ್ಲಿ ಅನ್ನದಾನ ಯಥೇಚ್ಛವಾಗಿ ಜರುಗುತ್ತದೆಯೋ ಅಲ್ಲಿ ಶಿವಪಾರ್ವತಿ ಇರುತ್ತಾರೆ. ಅಂತಹ ಕಾರ್ಯ ಗವಿಮಠದಿಂದ ಆಗುತ್ತಿದೆ ಎಂದರು.ಅನ್ನಕ್ಕೆ ಶ್ರೇಷ್ಠ ಸ್ಥಾನ ಇದೆ. ಗವಿಸಿದ್ದೇಶ್ವರ ಸ್ವಾಮೀಜಿ ಅವರೇ ಸಾಕ್ಷಾತ್ ಶಿವ ಆಗಿದ್ದಾರೆ. ಅನ್ನ, ಜ್ಞಾನ, ಅರಿವಿನ ದಾಸೋಹ ಇಲ್ಲಿ ಜರುಗುತ್ತಿದೆ ಎಂದರು.