ದಕ್ಷಿಣ ಭಾರತದ ಮಹಾಕುಂಭ ಮೇಳ ಎಂದೇ ಪ್ರಸಿದ್ಧಿ ಪಡೆದಿರುವ ಕೊಪ್ಪಳದ ಗವಿಮಠ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು, ಸೋಮವಾರ ಸಂಜೆ 5.30ಕ್ಕೆ ಮಹಾರಥೋತ್ಸವ ಜರುಗಲಿದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ದಕ್ಷಿಣ ಭಾರತದ ಮಹಾಕುಂಭ ಮೇಳ ಎಂದೇ ಪ್ರಸಿದ್ಧಿ ಪಡೆದಿರುವ ಕೊಪ್ಪಳದ ಗವಿಮಠ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು, ಸೋಮವಾರ ಸಂಜೆ 5.30ಕ್ಕೆ ಮಹಾರಥೋತ್ಸವ ಜರುಗಲಿದೆ.

ಈ ಮೂಲಕ ಜಾತ್ರೆಯ ಮೂರು ದಿನಗಳ ಕಾಲ ಉತ್ಸವದ ಮಾದರಿಯಲ್ಲಿ ನಡೆಯಲಿರುವ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ. ಈ ವರ್ಷದ ಮಹಾರಥೋತ್ಸವಕ್ಕೆ ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ ಚಾಲನೆ ನೀಡಲಿದ್ದಾರೆ. ಜಾತ್ರೆಯ ಸಿದ್ಧತೆ ಪೂರ್ಣಗೊಂಡಿದ್ದು, ಮಠದ ಆವರಣ ಭಕ್ತರಿಂದ ಕಳೆಗಟ್ಟಿದೆ. ಸಂಜೆ ನಡೆಯಲಿರುವ ಮಹಾರಥೋತ್ಸವಕ್ಕಾಗಿ ರಥವನ್ನು ಈಗಾಗಲೇ ಸಿಂಗಾರ ಮಾಡಲಾಗಿದ್ದು, ರಥ ಸಾಗುವ ಹಾದಿಯಲ್ಲಿ ಮಹಿಳೆಯರು ರಂಗೋಲಿ ಚಿತ್ತಾರ ಬಿಡಿಸಲಿದ್ದಾರೆ.

ರಥೋತ್ಸವಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಮಠದ ಶಿಕ್ಷಣ ಸಂಸ್ಥೆಗಳು ಸೇರಿ ವಿವಿಧೆಡೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ತಾತ್ಕಾಲಿಕ ಶೌಚಾಲಯ ಹಾಗೂ ಸ್ನಾನಗೃಹಗಳನ್ನೂ ನಿರ್ಮಾಣ ಮಾಡಲಾಗಿದೆ.

ಮಠದ ಪಕ್ಕದಲ್ಲಿ ಒಟ್ಟು 6 ಎಕರೆ ಪ್ರದೇಶದಲ್ಲಿ ಮಹಾದಾಸೋಹ ಮಂಟಪ ನಿರ್ಮಿಸಲಾಗಿದ್ದು, ಮಹಿಳೆಯರು ಮತ್ತು ಪುರುಷರು ಪ್ರತ್ಯೇಕವಾಗಿ ಮಹಾದಾಸೋಹ ಮಂಟಪದ ಒಳಗೆ ಹೋಗಿ ಪ್ರಸಾದ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ. ಮಹಾದಾಸೋಹಕ್ಕೆ ನಾಡಿನ ನಾನಾ ಭಾಗಗಳಿಂದ ಭಕ್ತರು ರೊಟ್ಟಿಗಳು, ಸಿಹಿ ಪದಾರ್ಥ ಸೇರಿದಂತೆ ದವಸಧಾನ್ಯಗಳನ್ನು ಮಠಕ್ಕೆ ತಂದು ಅರ್ಪಿಸುತ್ತಿದ್ದು, ಲಕ್ಷಾಂತರ ರೊಟ್ಟಿ ಸಂಗ್ರಹವಾಗಿವೆ.

ಮಹಾದಾಸೋಹದಲ್ಲಿ ಮೊದಲ ದಿನ ಮೈಸೂರು ಪಾಕ್, ಬೂಂದಿ, ಮಾದಲಿ, ಹಾಲು, ತುಪ್ಪ, ಮಿಕ್ಸ್ ಬಾಜಿ, ದಾಲ್, ರೊಟ್ಟಿ, ಅನ್ನ, ಸಾಂಬರ್, ಉಪ್ಪಿನಕಾಯಿ ಹಾಗೂ ಪುಡಿಚಟ್ನಿ ಇರಲಿದೆ. ಬೆಳಗ್ಗೆ ಉಪಾಹಾರದ ವ್ಯವಸ್ಥೆ ಇದೆ. ಬೆಳಗ್ಗೆ ಪ್ರಾರಂಭವಾಗುವ ಮಹಾದಾಸೋಹ ಮಧ್ಯರಾತ್ರಿಯವರೆಗೂ ಸಾಂಗವಾಗಿ ನಡೆಯುತ್ತದೆ. ಒಂದರಿಂದ ಒಂದೂವರೆ ಲಕ್ಷ ಭಕ್ತರು ಪ್ರಸಾದ ಸ್ವೀಕಾರ ಮಾಡಲಿದ್ದಾರೆ.

ದಾಸೋಹಕ್ಕಾಗಿ 1 ಎಕ್ರೆ ಪಾಲಕ್ ಬೆಳೆದ ರೈತ:ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಮಹಾದಾಸೋಹಕ್ಕಾಗಿ ಇಲ್ಲೊಬ್ಬ ರೈತ ತಮ್ಮ ಒಂದು ಎಕರೆ ತೋಟದಲ್ಲಿ ಪಾಲಕ್ ಬೆಳೆದು, ಕಟಾವು ಮಾಡಿ ತಂದು ಕೊಡುತ್ತಿದ್ದಾರೆ.

ಹೌದು, ನಿತ್ಯವೂ 3 ಸಾವಿರ ಪಾಲಕ್ ಕಟ್ಟುಗಳನ್ನು ತಾಲೂಕಿನ ಚಿಕ್ಕಸಿಂದೋಗಿ ಗ್ರಾಮದ ರೈತ ಈರಣ್ಣ ರಡ್ಡೇರ ದಾಸೋಹ ಪ್ರಾರಂಭವಾದ ದಿನದಿಂದ ತಮ್ಮ ಹೊಲದಲ್ಲಿ ಬೆಳೆದಿರುವ ಪಾಲಕ್‌ನ್ನು ಅರ್ಪಿಸುತ್ತಿದ್ದಾರೆ. ಪ್ರಾರಂಭದಲ್ಲಿ 1, 2 ಸಾವಿರ ಕಟ್ಟು ತಂದು ಕೊಡುತ್ತಾರೆ. ಅನಂತರ ಅದನ್ನು ಕ್ರಮೇಣ ಹೆಚ್ಚಳ ಮಾಡುತ್ತಾ ಬಂದು ಕೊಡುತ್ತಿದ್ದಾರೆ. ರಥೋತ್ಸವದ ದಿನ ಮತ್ತು ನಂತರ ನಿತ್ಯವೂ ಮೂರು ಸಾವಿರ ಕಟ್ಟು ತಂದು ಕೊಡುತ್ತಾರೆ.

ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಮಹಾದಾಸೋಹ ಪ್ರಾರಂಭಿಸಿದ 18 ವರ್ಷಗಳಿಂದ ಅವರು ಈ ರೀತಿ ಪಾಲಕ್ ಸೇವೆ ಮಾಡುತ್ತಿದ್ದಾರೆ.