ಹೋರಾಟದ ಬಳಿಕ ಗವಿಸಿದ್ಧೇಶ್ವರ ಶ್ರೀ ಮೌನಾನುಷ್ಠಾನ

| Published : Feb 28 2025, 12:49 AM IST

ಸಾರಾಂಶ

ಮಠದ ಪರಂಪರೆಯಲ್ಲಿಯೇ ಅಮಾವಾಸ್ಯೆಯಂದು ಶ್ರೀಗಳು ಮೌನಾನುಷ್ಠಾನ ಇರುವುದಿಲ್ಲ. ಅಂದು ಹತ್ತಾರು ಸಾವಿರ ಸಂಖ್ಯೆಯ ಭಕ್ತರು ಮಠಕ್ಕೆ ಬರುವುದರಿಂದ ಮಠದಲ್ಲಿಯೇ ಇರುತ್ತಾರೆ. 20 ವರ್ಷಗಳ ಹಿಂದೆ ಶ್ರಾವಣ ಅಮಾವಾಸ್ಯೆಯಂದು ಮೌನಾನುಷ್ಠಾನದಲ್ಲಿದ್ದರು, ಅದಾದ ಮೇಲೆ ಅಮಾವಾಸ್ಯೆಯಂದು ಮಾಡುತ್ತಿರುವುದು ಇದೇ ಮೊದಲು ಎಂದು ಹೇಳಿದ್ದಾರೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಕೊಪ್ಪಳ ಬಳಿ ಕಾರ್ಖಾನೆ ಸ್ಥಾಪಿಸುವುದನ್ನು ವಿರೋಧಿಸಿ ನಡೆಸಿದ ಹೋರಾಟದಲ್ಲಿ ಪಾಲ್ಗೊಂಡಿದ್ದ ಗವಿಸಿದ್ಧೇಶ್ವರ ಶ್ರೀಗಳು ಮರು ದಿನವೇ (ಮಂಗಳವಾರ) ಮೌನಾನುಷ್ಠಾನ ಪ್ರಾರಂಭಿಸಿದ್ದು, ಮೂರು ದಿನಗಳಾದರೂ ಮಠದಿಂದ ಆಚೆ ಬಂದಿಲ್ಲ.

ಶ್ರೀಗಳು ಹೀಗೆ ಮೌನಾನುಷ್ಠಾನ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹದಿನೈದು ದಿನ ಮಾಡಿದ ಉದಾಹರಣೆಗಳು ಇವೆ. ಆದರೆ, ಅಮಾವಾಸ್ಯೆಯಂದು ಮಾತ್ರ ಮಾಡುತ್ತಿರಲಿಲ್ಲ. ಆದರೆ, ಈ ಬಾರಿ ಗುರುವಾರ ಅಮವಾಸ್ಯೆಯಂದೂ ಮುಂದುವರಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಶ್ರೀಮಠದ ಭಕ್ತರು ನೀಡುವ ಮಾಹಿತಿ ಪ್ರಕಾರ, ಮಠದ ಪರಂಪರೆಯಲ್ಲಿಯೇ ಅಮಾವಾಸ್ಯೆಯಂದು ಶ್ರೀಗಳು ಮೌನಾನುಷ್ಠಾನ ಇರುವುದಿಲ್ಲ. ಅಂದು ಹತ್ತಾರು ಸಾವಿರ ಸಂಖ್ಯೆಯ ಭಕ್ತರು ಮಠಕ್ಕೆ ಬರುವುದರಿಂದ ಮಠದಲ್ಲಿಯೇ ಇರುತ್ತಾರೆ. 20 ವರ್ಷಗಳ ಹಿಂದೆ ಶ್ರಾವಣ ಅಮಾವಾಸ್ಯೆಯಂದು ಮೌನಾನುಷ್ಠಾನದಲ್ಲಿದ್ದರು, ಅದಾದ ಮೇಲೆ ಅಮಾವಾಸ್ಯೆಯಂದು ಮಾಡುತ್ತಿರುವುದು ಇದೇ ಮೊದಲು ಎಂದು ಹೇಳಿದ್ದಾರೆ.

ಶ್ರೀಗಳು ಕಾರ್ಖಾನೆ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡು, ಭಾವುಕರಾಗಿ ಮಾತನಾಡಿದ್ದು ಅಲ್ಲದೆ, ಆ ಗವಿಸಿದ್ಧ ನನಗೆ ತೋರಿದ ಬೆಳಕಿನಂತೆ ಮುಂದಿನ ಹೋರಾಟ ಮಾಡುತ್ತೇನೆ. ಈ ರೀತಿಯಾಗಿ ಬಂದ್ ಮಾಡುವುದು, ಧರಣಿ ಕೂಡುವುದು ಸರಿಯಲ್ಲ. ಈ ವಿಷಯದಲ್ಲಿ ನಾನು ರಾಜೀಯಾಗುವ ಪ್ರಶ್ನೆಯೇ ಇಲ್ಲ. ಈಗ ನಾವೆಲ್ಲರೂ ಸೇರಿ ಜನಪ್ರತಿನಿಧಿಗಳಿಗೆ ಈ ಭಾರ ಹಾಕೋಣ, ಅವರು ಕಾರ್ಖಾನೆಯ ಅನುಮತಿ ರದ್ದುಪಡಿಸಿ ಆದೇಶವನ್ನು ತೆಗೆದುಕೊಂಡೇ ಕೊಪ್ಪಳಕ್ಕೆ ಬರಲಿ ಎಂದು ಸಹ ಹೇಳಿದ್ದರು. ಈ ನಡುವೆ ಶ್ರೀಗಳು ಮೌನಾನುಷ್ಠಾನಕ್ಕೆ ಕುಳಿತಿರುವುದು ಚರ್ಚೆಗೆ ಗ್ರಾಸವಾಗಿದೆ.

ಸಾಮಾನ್ಯವಾಗಿ ಪ್ರತಿ ಮಂಗಳವಾರ ಶ್ರೀಗಳು ಮೌನಾನುಷ್ಠಾನ ಮಾಡುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ. ಅದರಂತೆಯೇ ಹೋರಾಟದ ಬಳಿಕ ಮರುದಿನ ಮಂಗಳವಾರವೇ ಆಗಿದ್ದರಿಂದ ಮೌನಾನುಷ್ಠಾನ ಮಾಡುತ್ತಿದ್ದಾರೆ ಎಂದು ಭಕ್ತರು ತಿಳಿದುಕೊಂಡಿದ್ದರು. ಆದರೆ, ಮಂಗಳವಾರದ ನಂತರವೂ ಮುಂದುವರಿಸಿರುವುದು ಹಾಗೂ ಅಮಾವಾಸ್ಯೆಯಂದು ಮೌನಾನುಷ್ಠಾನ ಮುಂದುವರಿಸಿರುವುದು ಅಚ್ಚರಿಗೆ ಕಾರಣವಾಗಿದೆ ಹಾಗೂ ಭಕ್ತರು ಆತಂಕಗೊಂಡಿದ್ದಾರೆ. ಶ್ರೀಮಠದ ಪರಂಪರೆಯಲ್ಲಿ ಈ ವರೆಗೂ 17 ಪೀಠಾಧೀಪತಿಗಳು ಸೇವೆ ಸಲ್ಲಿಸಿದ್ದರೂ ಯಾರೂ ಯಾವುದೇ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ. 18ನೇ ಪೀಠಾಧಿಪತಿ ಗವಿಸಿದ್ಧೇಶ್ವರ ಶ್ರೀಗಳು ಸಾರ್ವಜನಿಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದು ಇದೇ ಮೊದಲು. ಹೀಗಾಗಿ, ಕುತೂಹಲ ಸಹಜವಾಗಿಯೇ ಹೆಚ್ಚಾಗಿದೆ.

ಹರಕೆ ತೇರಿಗೂ ಬರಲಿಲ್ಲ:

ಅಮಾವಾಸ್ಯೆಯಂದು ಹರಕೆ ತೇರು ಕಾರ್ಯಕ್ರಮ ನಡೆಯುತ್ತದೆ. ಇದಾದ ಮೇಲೆ ಬೆಳಕಿನೆಡೆಗೆ ಎನ್ನುವ ಅಧ್ಯಾತ್ಮದ ಕಾರ್ಯಕ್ರಮವೂ ಇರುತ್ತದೆ. ಹೀಗಾಗಿ, ಈ ಕಾರ್ಯಕ್ರಮಕ್ಕೆ ಸ್ವಾಮೀಜಿ ತಪ್ಪದೇ ಆಗಮಿಸುತ್ತಿದ್ದರು. ಆದರೆ, ಈ ಕಾರ್ಯಕ್ರಮಕ್ಕೂ ಬಂದಿಲ್ಲ. ಇದಕ್ಕಿಂತ ಮಿಗಿಲಾಗಿ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ವಿಕಲಚೇತನರ ನಡೆ ಸಕಲಚೇತನರ ಕಡೆ ಕಾರ್ಯಕ್ರಮದ ಅಂಗವಾಗಿ ಕಿವುಡ ಮಕ್ಕಳಿಗೆ ಶ್ರವಣ ಸಾಧನಾ ನೀಡುವ ಚಿಕಿತ್ಸಾ ಶಿಬಿರವೂ ಪ್ರಾರಂಭವಾಗಿದ್ದು, ಅದಕ್ಕೂ ಸಹ ಶ್ರೀಗಳು ಆಗಮಿಸಿಲ್ಲ.ಸಿಎಂ ಬಳಿ ನಿಯೋಗ

ಕೊಪ್ಪಳ ಬಳಿ ಕಾರ್ಖಾನೆ ಸ್ಥಾಪಿಸುವುದನ್ನು ವಿರೋಧಿಸಿ ಹೋರಾಟ ನಡೆದಿರುವ ಹಿನ್ನೆಲೆಯಲ್ಲಿ ಮಾ. 4 ಅಥವಾ 5ರಂದು ಸಿಎಂ ಸಿದ್ದರಾಮಯ್ಯ ಅವರ ಬಳಿ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ತೆರಳಲಿದೆ. ಈ ಕುರಿತು ಈಗಾಗಲೇ ಜಿಲ್ಲೆಯ ಜನಪ್ರತಿನಿಧಿಗಳು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಇದರ ನಡುವೆ ಮಾ. 2ರಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಗವಿಮಠಕ್ಕೆ ಭೇಟಿ ನೀಡಲಿದ್ದು ಮಹತ್ವ ಪಡೆದುಕೊಂಡಿದೆ. ಜೆಡಿಎಸ್ ಕೋರ್ ಕಮಿಟಿ ರಾಜ್ಯ ಸದಸ್ಯ ಸಿ.ವಿ. ಚಂದ್ರಶೇಖರ ಈ ಕುರಿತು ಪ್ರಕಟಣೆ ನೀಡಿ ಸಚಿವರ ಭೇಟಿ ಖಚಿತಪಡಿಸಿದ್ದಾರೆ.ಶ್ರೀಗಳೊಂದಿಗೆ ಚರ್ಚೆ:

ಈ ನಡುವೆ ರಾಜ್ಯ ಕೈಗಾರಿಕಾ ಮತ್ತು ಮೂಲಭೂತ ಸೌಕರ್ಯ ಸಚಿವ ಎಂ.ಬಿ. ಪಾಟೀಲ್ ಸಹ ಗವಿಮಠಕ್ಕೆ ಶೀಘ್ರದಲ್ಲಿಯೇ ಭೇಟಿ ನೀಡಿ, ಶ್ರೀಗಳೊಂದಿಗೆ ಚರ್ಚಿಸುತ್ತೇನೆ. ಕಾರ್ಖಾನೆ ಸ್ಥಾಪಿಸುವುದಕ್ಕೆ ವಿರೋಧಿಸಿ, ಅವರು ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ, ಅವರೊಂದಿಗೆ ಚರ್ಚಿಸಲು ಮಠಕ್ಕೆ ತೆರಳುತ್ತಿರುವುದಾಗಿ ಹೇಳಿದ್ದಾರೆ.