ಭಕ್ತ ಸಾಗರದ ಮಧ್ಯೆ ಗವಿಮಠ ಕೆರೆಯಲ್ಲಿ ಗವಿಸಿದ್ದೇಶ್ವರ ತೆಪ್ಪೋತ್ಸವ

| Published : Jan 25 2024, 02:02 AM IST

ಭಕ್ತ ಸಾಗರದ ಮಧ್ಯೆ ಗವಿಮಠ ಕೆರೆಯಲ್ಲಿ ಗವಿಸಿದ್ದೇಶ್ವರ ತೆಪ್ಪೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ನಗರದ ಗವಿಮಠದ ಕೆರೆಯಲ್ಲಿ ಗವಿಸಿದ್ದೇಶ್ವರ ತೆಪ್ಪೋತ್ಸವ ಅಪಾರ ಪ್ರಮಾಣದ ಭಕ್ತರ ಹರ್ಷೋದ್ಗಾರದ ಮಧ್ಯೆ ಸಂಭ್ರಮ, ಸಡಗರದಿಂದ ಬುಧವಾರ ಸಂಜೆ ನೆರವೇರಿತು. ತೆಪ್ಪೋತ್ಸವ ಜರುಗುವ ವೇಳೆ ಗವಿಮಠದಲ್ಲಿ ಗಂಗಾರತಿ ಸಹ ಜರುಗಿತು.

ಕೊಪ್ಪಳ: ನಗರದ ಗವಿಮಠದ ಕೆರೆಯಲ್ಲಿ ಗವಿಸಿದ್ದೇಶ್ವರ ತೆಪ್ಪೋತ್ಸವ ಅಪಾರ ಪ್ರಮಾಣದ ಭಕ್ತರ ಹರ್ಷೋದ್ಗಾರದ ಮಧ್ಯೆ ಸಂಭ್ರಮ, ಸಡಗರದಿಂದ ಬುಧವಾರ ಸಂಜೆ ನೆರವೇರಿತು. ತೆಪ್ಪೋತ್ಸವಕ್ಕೆ ನಿವೃತ್ತ ಪ್ರಾಧ್ಯಾಪಕ ಪಂಚಾಕ್ಷರಯ್ಯ ರೇವಣಸಿದ್ದಯ್ಯ ನೂರಂದಯ್ಯನಮಠ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಪ್ರತಿವರ್ಷವೂ ತೆಪ್ಪೋತ್ಸವಕ್ಕೆ ವಿಶೇಷ ಸಾಧಕರು ಹಾಗೂ ಹಿರಿಯ ಚೇತನರ ಮೂಲಕ ಚಾಲನೆ ಕೊಡಿಸಲಾಗುತ್ತಿದ್ದು, ಅದರಂತೆ ಈ ವರ್ಷ ನಡೆದ ತೆಪ್ಪೋತ್ಸವಕ್ಕೆ ನಿವೃತ್ತ ಪ್ರಾಧ್ಯಾಪಕ ಪಂಚಾಕ್ಷರಯ್ಯ ರೇವಣಸಿದ್ದಯ್ಯ ನೂರಂದಯ್ಯನಮಠ ಚಾಲನೆ ನೀಡಿದರು.

ಅವರಿಂದ ಈ ಬಾರಿಯ ತೆಪ್ಪೋತ್ಸವಕ್ಕೆ ಪೂಜೆ, ಸಂಕಲ್ಪದ ಮೂಲಕ ಚಾಲನೆ ಕೊಡಿಸಲಾಯಿತು. ವಿದ್ಯುತ್ ದೀಪಗಳಲ್ಲಿ ಅಲಂಕಾರಗೊಂಡ ಗವಿಸಿದ್ದೇಶ್ವರ ಮೂರ್ತಿ ಪ್ರತಿಷ್ಠಾಪನೆಗೊಂಡು ವಿರಾಜಮಾನವಾಗಿ ಪುಷ್ಪಗಳೊಂದಿಗೆ ಅಲಂಕಾರಗೊಂಡ ತೆಪ್ಪವನ್ನು ಅಂಬಿಗರು ಭಕ್ತಿಭಾವ, ಶ್ರದ್ಧೆಯಿಂದ ಕೆರೆಯ ಸುತ್ತಲೂ ಸಾಗಿಸಿದರು. ಶ್ರೀ ಗವಿಸಿದ್ದ ಪಾಹಿಮಾಂ, ಪಾಹಿಮಾಂ ಗವಿಸಿದ್ದ ಎಂದು ಭಕ್ತರು ಉದ್ಘೋಷ ಕೂಗಿದರು. ಅಪಾರ ಸಂಖ್ಯೆಯ ಭಕ್ತರು ತೆಪ್ಪೋತ್ಸವ ಕಣ್ತುಂಬಿಕೊಂಡರು.

ಆರಂಭದಲ್ಲಿ ಧಾರವಾಡದ ಸಂಗೀತಗಾರ ಅಯ್ಯಪ್ಪಯ್ಯ ಹಲಗಲಿಮಠ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಪುಟ್ಟರಾಜ ಗವಾಯಿಗಳು ವಿರಚಿತ ಮಹಾದೇವಿ ಪುರಾಣ ಕೃತಿಯನ್ನು ಬಿಜಕಲ್‌ನ ಶ್ರೀ ಶಿವಲಿಂಗ ಶ್ರೀ ಬಿಡುಗಡೆಗೊಳಿಸಿದರು.

ಕಣ್ಮನ ಸೆಳೆದ ಗಂಗಾರತಿ:

ತೆಪ್ಪೋತ್ಸವ ಜರುಗುವ ವೇಳೆ ಗವಿಮಠದಲ್ಲಿ ಗಂಗಾರತಿ ಸಹ ಜರುಗಿತು. ತೆಪ್ಪೋತ್ಸವ ಜತೆಗೆ ಭಕ್ತರು ಗಂಗಾರತಿಯನ್ನು ಕಣ್ಣುಂಬಿಕೊಂಡರು. ಗವಿಸಿದ್ದೇಶ್ವರ ಸ್ವಾಮೀಜಿ ಹಾಗೂ ಹರಗುರುಚರಮೂರ್ತಿಗಳು ಸಾನ್ನಿಧ್ಯ ವಹಿಸಿದ್ದರು. ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ಗಂಗಾ ಆರತಿ ವಿಶೇಷ ಮೆರಗು ನೀಡಿತು.

ನಿತ್ಯ ವೈವಿಧ್ಯಮಯ ಕಾರ್ಯಕ್ರಮ, 27ರಂದು ಮಹಾರಥೋತ್ಸವ:ನಗರದ ಗವಿಮಠ ಆವರಣದಲ್ಲಿ ಜ. 27ರಂದು ೧೧ ಪೊಲೀಸ್ ಶ್ವಾನಗಳ ಸಾಹಸ ಪ್ರದರ್ಶನ (ಡಾಗ್‌ಶೋ), ಕರಾಟೆ ಪ್ರದರ್ಶನ, ವಿವಿಧ ಸಾಹಸ ಪ್ರದರ್ಶನಗಳು, ವಿವಿಧ ಶ್ರೇಣಿಗಳ ಕಟಗಳ ಕಸರತ್ತುಗಳು, ಬೈಕ್ ಸ್ಟಂಟ್, ಇಟ್ಟಗೆ, ಹಂಚು ಒಡೆಯುವುದು, ಮಹಿಳೆಯರಿಗಾಗಿ ಆತ್ಮರಕ್ಷಣಾ ಕಲೆಗಳು ಇತ್ಯಾದಿ ಸಾಹಸ ಪ್ರದರ್ಶನಗಳು, ದಾಲಪಟ್ಟ, ಮೋಜಿನ ಗೊಂಬೆ ಕುಣಿತ ಸಮರ ಕಲಾ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.ಸಂಜೆ ೫.೩೦ಕ್ಕೆ ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವ ಜರುಗಲಿದೆ. ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವವನ್ನು ಮೈಸೂರಿನ ಸುತ್ತೂರು ಕ್ಷೇತ್ರದ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನದ ಶ್ರೀ ವೀರಸಿಂಹಾಸನ ಜಗದ್ಗುರು ೧೦೦೮ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಉದ್ಘಾಟಿಸುವರು. ಸಾಯಂಕಾಲ ೬ ಗಂಟೆಗೆ ಜರುಗುವ ಕೈಲಾಸ ಮಂಟಪದಲ್ಲಿನ ಧಾರ್ಮಿಕ ಗೋಷ್ಠಿ - ಅನುಭಾವಿಗಳ ಅಮೃತ ಚಿಂತನ ಗೋಷ್ಠಿಯ ಸಾನ್ನಿಧ್ಯವನ್ನು ಓಲೆಮಠ, ಜಮಖಂಡಿಯ ಶ್ರೀ ಡಾ. ಅಭಿನವ ಕುಮಾರ ಚನ್ನಬಸವ ಸ್ವಾಮೀಜಿ ಹಾಗೂ ಹಿರೇಸಿಂದೋಗಿಯ ಕಪ್ಪತ್ತೇಶ್ವರಮಠದ ಶ್ರೀ ಚಿದಾನಂದ ಸ್ವಾಮೀಜಿ ವಹಿಸುವರು.ವಿಶ್ವಸಂಸ್ಥೆಯ ಯುನೆಸ್ಕೋ (ಪ್ಯಾರಿಸ್)ಗೆ ಭಾರತದ ಮಾಜಿ ರಾಯಭಾರಿ, ಬೆಂಗಳೂರು ಮೂಲದವರಾದ ಚಿರಂಜೀವಿ ಸಿಂಗ್‌, ಖ್ಯಾತ ಖಗೋಳ ವಿಜ್ಞಾನಿ, ಚಂದ್ರಯಾನ್-೩ರ ಯೋಜನಾ ನಿರ್ದೇಶಕ ಪಿ. ವೀರಮುತ್ತುವೇಲ್ ಹಾಗೂ ಬೆಂಗಳೂರಿನ ಅದಮ್ಯ ಚೇತನ ಫೌಂಡೇಶನ್‌ನ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಭಾಗವಹಿಸಲಿದ್ದಾರೆ.ಅಂದು ನಡೆಯುವ ಸ್ವರ-ಸಂಗಮ ಸಂಗೀತ ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರಾಗಿ ಬೆಂಗಳೂರಿನ ಪಂ. ಬಸವಕುಮಾರ ಮರಡೂರು, ಹುಬ್ಬಳ್ಳಿಯ ಪಂ. ಕೃಷ್ಣೇಂದ್ರ ವಾಡೇಕರ್ ಹಾಗೂ ಸಂಗಡಿಗರು ಭಾಗವಹಿಸಿ ಸಂಗೀತಸುಧೆ ಉಣಬಡಿಸಲಿದ್ದಾರೆ.ರಾತ್ರಿ ೯.೩೦ಕ್ಕೆ ಶ್ರೀಮಠದ ಜಾತ್ರಾ ಮೈದಾನದಲ್ಲಿ ಚಿತ್ತಾರ ಬೆಳಕು ವಿಶೇಷ ಕಾರ್ಯಕ್ರಮ (ಲೇಸರ್ ಶೋ) ಜರುಗಲಿದೆ. ಶ್ರೀಮಠದ ಜಾತ್ರಾ ವಿಶೇಷತೆಗಳನ್ನೊಳಗೊಂಡ ಭಕ್ತಿಗೀತೆ ‘ಯಾತ್ರೋತ್ಸವ ನಮ್ಮ ಯಾತ್ರೋತ್ಸವ’, ನಂತರ ಕನ್ನಡ ನಾಡು-ನುಡಿ-ಸಂಸ್ಕೃತಿ ಸಾರುವ ಪ್ರಸಿದ್ಧ ಚಲನಚಿತ್ರಗೀತೆಯಾದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’, ನಂತರ ಕೊನೆಯದಾಗಿ ದೇಶಭಕ್ತಿಗೀತೆಯಾದ ‘ವಂದೇ ಮಾತರಂ’ ಗೀತೆಯು ಮೂಡಿಬರಲಿದೆ. ಇದು ಭಕ್ತರಿಗೆ ಚಿತ್ತಾರದ ರಸದೌತಣ ನೀಡಲಿದೆ.ರಾತ್ರಿ ೧೦:೩೦ ಗಂಟೆಗೆ ಪಾದಗಟ್ಟಿ ಹತ್ತಿರ ಶ್ರೀ ಗವಿಸಿದ್ಧೇಶ್ವರ ಸೇವಾ ನಾಟ್ಯ ಸಂಘ, ಹಿರೇ ಬಗನಾಳ ಇವರಿಂದ ಶ್ರೀ ಗವಿಸಿದ್ಧೇಶ್ವರ ಮಹಾತ್ಮೆ ನಾಟಕ ಪ್ರದರ್ಶನಗೊಳ್ಳಲಿದೆ.