ಸಾರಾಂಶ
ರಾಜ್ಯದಲ್ಲಿ ಶೋಷಿತ ವರ್ಗಗಳಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿರುವುದು ಕೆಲವೇ ಬಾರಿ ಮಾತ್ರ. ಸಿದ್ದರಾಮಯ್ಯನವರು ದೇವರಾಜ ಅರಸು ಬಳಿಕ 5 ವರ್ಷ ಸಿಎಂ ಆಗಿ ಅಧಿಕಾರ ಪೂರ್ಣಗೊಳಿಸಿದ ಹೆಗ್ಗಳಿಕೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ಕೇಳುವ ಮೂಲಕ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ರಾಜ್ಯದ ಶೋಷಿತ, ಅಹಿಂದ ವರ್ಗಕ್ಕೆ ಅಪಮಾನ ಮಾಡುತ್ತಿದ್ದು, ತಕ್ಷಣವೇ ಅಹಿಂದ ವರ್ಗದ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ಒತ್ತಾಯಿಸಿದ್ದಾರೆ.ಸಿದ್ದರಾಮಯ್ಯರು 2ನೇ ಬಾರಿ ಸಿಎಂ ಆಗಿ ಉತ್ತಮ ಆಡಳಿತ ನೀಡುತ್ತಿದ್ದಾರೆ. 2023ರಲ್ಲಿ ಸಂಪೂರ್ಣ ಬಹುಮತದೊಂದಿಗೆ ಆಡಳಿತ ನಡೆಸುತ್ತಿರುವಾಗ ಮುಡಾ ವಿಷಯದಲ್ಲಿ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿರುವುದು ಷಡ್ಯಂತ್ರ. ಇದೆಲ್ಲಾ ಗೊತ್ತಿದ್ದರೂ ಕೋಳಿವಾಡರು ಸಿಎಂ ರಾಜಿನಾಮೆಗೆ ಕೇಳಿದ್ದು ಸರಿಯಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಕ್ಷೇಪಿಸಿದ್ದಾರೆ.
ಸ್ವಾತಂತ್ರ್ಯ ನಂತರದ 77 ವರ್ಷಗಳಲ್ಲಿ ರಾಜ್ಯದಲ್ಲಿ ಶೋಷಿತ ವರ್ಗಗಳಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿರುವುದು ಕೆಲವೇ ಬಾರಿ ಮಾತ್ರ. ಸಿದ್ದರಾಮಯ್ಯನವರು ದೇವರಾಜ ಅರಸು ಬಳಿಕ 5 ವರ್ಷ ಸಿಎಂ ಆಗಿ ಅಧಿಕಾರ ಪೂರ್ಣಗೊಳಿಸಿದ ಹೆಗ್ಗಳಿಕೆ ಹೊಂದಿದ್ದಾರೆ. 2013-2018ರಲ್ಲಿ 5 ವರ್ಷ ಸುಭದ್ರ ಆಡಳಿತ, ಜನಪರ ಕಾರ್ಯಕ್ರಮದ ಮೂಲಕ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಸ್ವಚ್ಛ ಆಡಳಿತ ನೀಡಿದ್ದಾರೆ. ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಬಡವರು, ಹಿಂದುಳಿದವರು, ಶೋಷಿತರು, ದಮನಿತರ ಪಾಲಿನ ಆಶಾಕಿರಣವಾಗಿದ್ದಾರೆ ಎಂದು ತಿಳಿಸಿದ್ದಾರೆ.ಆದರೆ, ಸಿದ್ದರಾಮಯ್ಯ ರಾಜಿನಾಮೆ ಕೇಳಿರುವ ಕೋಳಿವಾಡರು ಅಹಿಂದ, ಶೋಷಿತರ ಮತ ಪಡೆದಿಲ್ಲವೇ? ಸಿದ್ದರಾಮಯ್ಯ ವರ್ಚಸ್ಸಿನಿಂದಲೇ ಹಿಂದೆ ಕೋಳಿವಾಡರು ಗೆದ್ದಿದ್ದನ್ನೇ ಮರೆತಂತಿದೆ. ಸಿದ್ದರಾಮಯ್ಯ ಪರಿಶ್ರಮದಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು136 ಸ್ಥಾನ ಗೆಲ್ಲಲು ಸಾಧ್ಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹೇಳಿಕೆ ನೀಡಲಿ. ರಾಣೇಬೆನ್ನೂರು ಶಾಸಕರಾಗಿ, ವಿಧಾನಸಭೆ ಸ್ಪೀಕರ್ ಆಗಿದ್ದ ಕೆ.ಬಿ.ಕೋಳಿವಾಡ ಹಾಗೂ ಪುತ್ರ ಪ್ರಕಾಶ್ ಕೋಳಿವಾಡಗೆ ಮತ ನೀಡಿ ಶೋಷಿತ, ಅಹಿಂದ ವರ್ಗದವರು ಮತ ನೀಡಿ ಗೆಲ್ಲಿಸಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಶೋಷಿತ, ಅಹಿಂದ ವರ್ಗಗಳು, ಕಾಂಗ್ರೆಸ್ ಪಕ್ಷದ ಹೈಕಮಾಂಡ್, ಸಚಿವರು, ಶಾಸಕರು ಸಿದ್ದರಾಮಯ್ಯ ಪರ ನಿಂತಿದ್ದರೂ ಇಂತಹ ವೇಳೆಯಲ್ಲಿ ಹಿರಿಯ ರಾಜಕಾರಣಿ ಆಗಿ, ಬಹಿರಂಗವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದು ಖಂಡನೀಯ. ಕೆ.ಬಿ.ಕೋಳಿವಾಡ ಶೋಷಿತ ಅಹಿಂದ ವರ್ಗಗಳಿಗೆ ಘೋರ ಅವಮಾನ ಮಾಡಿದ್ದು, ಕೋಳಿವಾಡರ ನಡವಳಿಕೆ ಖಂಡಿಸುತ್ತೇವೆ. ಕೂಡಲೇ ಬಹಿರಂಗವಾಗಿ ಕೋಳಿವಾಡರು ಕ್ಷಮೆಯಾಚಿಸಲಿ ಎಂದು ಅವರು ಜಿ.ಬಿ.ವಿನಯಕುಮಾರ ಆಗ್ರಹಿಸಿದ್ದಾರೆ.