ಕನ್ನಡಪ್ರಭ ವಾರ್ತೆ ಬೆಂಗಳೂರು
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದ್ದು, ಒಟ್ಟು 88,95,361 ಮತದಾರರಿದ್ದಾರೆ, ಪುರುಷರು 45,71,169, ಮಹಿಳೆಯರು 43,22,557 ಹಾಗೂ 1635 ಇತರೆ ಮತದಾರರು ಇದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.ಶನಿವಾರ ಜಿಬಿಎ ಕೇಂದ್ರ ಕಚೇರಿಯಲ್ಲಿ ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಾ.9 ರಂದು ಬಿಡುಗಡೆಯಾದ ಪರಿಷ್ಕೃತ ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆ ಸ್ವೀಕರಿಸಿ, ಲೋಪದೋಷಗಳನ್ನು ಸರಿಪಡಿಸಿ, ಮಾರ್ಪಾಡುಗಳು ಮಾಡಿ ಅಂತಿಮ ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಕರಡು ಪಟ್ಟಿಗೆ ಹೋಲಿಸಿದರೆ ಅಂತಿಮ ಪಟ್ಟಿಯಲ್ಲಿ 2,833 ಮತದಾರರು ಹೆಚ್ಚಾಗಿದ್ದಾರೆ ಎಂದು ತಿಳಿಸಿದರು.
369 ವಾರ್ಡ್‌ಗಳಲ್ಲಿ 8,023 ಮತಗಟ್ಟೆಗಳಿವೆ. ಸುಬ್ರಹ್ಮಣ್ಯಪುರ ವಾರ್ಡ್‌ನಲ್ಲಿ ಗರಿಷ್ಠ 53,660 ಮತದಾರರಿದ್ದರೆ, ವಿಜ್ಞಾನ ನಗರದಲ್ಲಿ ಅತಿ ಕಡಿಮೆ 12,897 ಮತದಾರರಿದ್ದಾರೆ. ಮತದಾರರ ಪಟ್ಟಿಯನ್ನು ಜಿಬಿಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತಿದ್ದು, ಸಾರ್ವಜನಿಕರು ವೀಕ್ಷಿಸಬಹುದು. ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೂ ಪಟ್ಟಿಯನ್ನು ಒದಗಿಸಲಾಗುತ್ತದೆ. ಮತದಾರರ ಅನುಕೂಲಕ್ಕಾಗಿ ಐದು ಸಹಾಯವಾಣಿ ಸಂಖ್ಯೆಗಳನ್ನು ಆರಂಭಿಸಲಾಗಿದೆ ಎಂದರು.ಪೂರಕ ಪಟ್ಟಿಗೆ ಸೇರಲು ಅವಕಾಶ: ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಪೂರಕ ಪಟ್ಟಿಯಲ್ಲಿ ಹೆಸರನ್ನು ಸೇರಿಸಿಕೂಳ್ಳಬಹುದು. ರಾಜಕೀಯ ಪಕ್ಷಗಳು ಪ್ರತಿ ವಾರ್ಡಿನ ಪ್ರತಿ ಮತಗಟ್ಟೆಗೆ ಒಬ್ಬರಂತೆ ಬೂತ್ ಲೆವಲ್ ಏಜೆಂಟ್ ನೇಮಕ ಮಾಡಿ ಎಲ್ಲ ಅರ್ಹ ಮತದಾರರ ನೋಂದಣಿ ಕಾರ್ಯದಲ್ಲಿ ಸಹಕಾರ ನೀಡುವಂತೆ ಅವರು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತೆ ಸುಷಮಾ ಗೋಡಬೋಲೆ ಉಪಸ್ಥಿತರಿದ್ದರು.
ವಾರ್ಡ್‌ವಾರು ಮತದಾರರ ಸಂಖ್ಯೆ
ಬೆಂಗಳೂರು ಕೇಂದ್ರ- 14,25,676ಬೆಂಗಳೂರು ಉತ್ತರ- 19,54,272
ಬೆಂಗಳೂರು ದಕ್ಷಿಣ- 17,44,611ಬೆಂಗಳೂರು ಪೂರ್ವ- 10,41,396
ಬೆಂಗಳೂರು ಪಶ್ಚಿಮ- 27,26,573ಪಾಲಿಕೆವಾರು ಮತದಾರರ ಸಹಾಯವಾಣಿ-ಬೆಂಗಳೂರು ಕೇಂದ್ರ : 080-22975803-ಬೆಂಗಳೂರು ಉತ್ತರ : 080-22975936-ಬೆಂಗಳೂರು ದಕ್ಷಿಣ : 9480685704-ಬೆಂಗಳೂರು ಪೂರ್ವ : 9480685706-ಬೆಂಗಳೂರು ಪಶ್ಚಿಮ : 9480685703
ಜಿಬಿಎ ಚುನಾವಣೆ ಮುಂದೂಡಿಕೆ ಮಾಡುವ ವಿಚಾರವಾಗಿ ನಾನು ಪ್ರತಿಕ್ರಿಯಿಸುವುದಿಲ್ಲ. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗ ನಿರ್ಧಾರ ತೆಗೆದುಕೊಳ್ಳುತ್ತದೆ.- ಮಹೇಶ್ವರ ರಾವ್, ಮುಖ್ಯ ಆಯುಕ್ತ, ಜಿಬಿಎ